
ಮೇ ಮಾಹೆಯಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ : ಹೆಸರು ನೋಂದಾಯಿಸಲು ರೈತರಿಗೆ ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಮೇ ತಿಂಗಳಿನಲ್ಲಿ 8ನೇ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗುತ್ತಿದ್ದು, ಮಳಿಗೆ ಕಾಯ್ದಿರಿಸಲು ಹೆಸರು ನೋಂದಾಯಿಸುವAತೆ ಮಾವು ಬೆಳೆಗಾರರಿಗೆ ತಿಳಿಸಿದೆ.
ತೋಟಗಾರಿಕೆ ಇಲಾಖೆ ಕೊಪ್ಪಳದಿಂದ ರೈತರಿಂದ ನೇರವಾಗಿ ಗ್ರಾಹಕರಿಗೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಮಾವು ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸುವ ಮತ್ತು ಕೊಪ್ಪಳ ಜಿಲ್ಲೆಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಯೋಗ್ಯ ಬೆಲೆಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರಿಂದ ನೇರವಾಗಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಮೇ-2024 ರ ಮಾಹೆಯ 2 ನೇ ವಾರದಲ್ಲಿ ಮಾವು ಹಣ್ಣುಗಳ ಪ್ರದರ್ಶನ ಮತ್ತು ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳ ಮಾರಾಟ ಮೇಳವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಈ ಮೇಳದಲ್ಲಿ ಭಾಗವಹಿಸುವ ಜಿಲ್ಲೆಯ ಆಸಕ್ತ ಮಾವು ಬೆಳೆಗಾರರು ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಮುಂಗಡವಾಗಿ ಮಾರಾಟ ಮಳಿಗೆಗಳನ್ನು ಕಾಯ್ದಿರಿಸಲು ತಮ್ಮ ಹೆಸರನ್ನು ನೋಂದಾಯಿಸಬೇಕು.
ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ರೈತರು ತಮ್ಮ ಪಹಣಿ ಪ್ರತಿಯೊಂದಿಗೆ, ತಮ್ಮ ಹೆಸರು, ವಿಳಾಸ, ಸರ್ವೆ ನಂಬರ್, ಬೆಳೆ, ತಳಿಗಳು ಹಾಗೂ ವಿಸ್ತೀರ್ಣ ಮುಂತಾದ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕು.
ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಕೊಪ್ಪಳ ಮೊ:9448511649, ಗಂಗಾವತಿ ಮೊ:9448910277, ಕುಷ್ಟಗಿ ಮೊ:8861697989, ಯಲಬುರ್ಗಾ ಮೊ:9945644338, ಕೇಂದ್ರ ಸ್ಥಾನಿಕ ಸಹಾಯಕರು, ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿಪಂ) ಕೊಪ್ಪಳ. ಮೊ:9741057047, ತೋಟಗಾರಿಕೆ ಕಿಸಾನ ಕೇರ್ ಸೆಂಟರ್ ಕೊಪ್ಪಳ – 9902792635 ಇವರನ್ನು ಸಂಪರ್ಕಿಸಬಹುದು.
ತಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯಲು ಹಾಗೂ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.