
ಮಿಂಚೇರಿ ಬೆಟ್ಟ ಚಾರಣ ಮಾಡಿದ ಪೊಲೀಸ್ ಅಧಿಕಾರಿಗಳು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30 – ತಾಲ್ಲೂಕು ವ್ಯಾಪ್ತಿಯ ಮಿಂಚೇರಿ ಬೆಟ್ಟಕ್ಕೆ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಭಾನುವಾರ ಚಾರಣ ನಡೆಸಿ, ಪ್ರಕೃತಿ ಸೊಬಗು ಸವಿದರು.
ಮುಂಜಾನೆಯ ಮುಸುಕಿನ ಸಮಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಚಾರಣ ನಡೆಸಿ, ಮಿಂಚೇರಿ ಬೆಟ್ಟದಲ್ಲಿನ ಬ್ರಿಟೀಷ್ ಬಂಗ್ಲೆಯ ಬಳಿಗೆ ಸೇರಿ, ಪ್ರಕೃತಿ ಸೊಬಗು ಸವಿಯುವ ಮೂಲಕ, ಸೆಲ್ಫಿ-ಫೋಟೋ ತೆಗೆದುಕೊಳ್ಳುವ ಮೂಲಕ ಸಂತಸ ಪಟ್ಟರು.
ಬಳಿಕ ಮಾತನಾಡಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು, ಪ್ರತಿನಿತ್ಯ ಒತ್ತಡದ ಕೆಲಸದ ನಡುವೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸ್ವಲ್ಪ ವಿರಾಮ ನೀಡಿದಂತಾಗುತ್ತದೆ ಎಂಬ ಕಾರಣಕ್ಕೆ ಚಾರಣ ಮಾಡಲು ತೀರ್ಮಾನಿಸಿ ಮಿಂಚೇರಿ ಬೆಟ್ಟಕ್ಕೆ ಬಂದಿದ್ದೇವೆ. ಮುಂಜಾನೆಯ ಪ್ರಕೃತಿಯ ಸೊಬಗನ್ನು ಸವಿಯುವುದು ಮನಸ್ಸಿಗೆ ತುಂಬಾ ಸಂತಸವಾಗುತ್ತಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಚಾರಣ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಇತರೆ ಅಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.