
ಮುಡಾ ವಿಚಾರದಲ್ಲಿ ಬಿಜೆಪಿಯಿಂದ ಪ್ರತಿಭಟನೆಯ ನಾಟಕ : ಸಚಿವ ಶಿವರಾಜ್ ತಂಗಡಗಿ
ಕರುನಾಡ ಬೆಳಗು ಸುದ್ದಿ
ಕಾರಟಗಿ, 12- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗಾದ ಬಿಜೆಪಿ ನಾಯಕರು ಮುಡಾ ವಿಚಾರದಲ್ಲಿ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಟೀಕಿಸಿದ್ದಾರೆ.
ಕಾರಟಗಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯವರಿಗೆ ಮಾಡಲು ಏನು ಕೆಲಸ ಇಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಡಾ ನಿವೇಶನ ಹಂಚಿಕೆಯಾಗಿದೆ. ಆ ವೇಳೆ ಅವರದ್ದೇ ಸರ್ಕಾರ ಇದ್ದಾಗ ಬಿಜೆಪಿಗರು ಕಣ್ಮುಚ್ಚಿ ಕುಳಿತ್ತಿದ್ರಾ? ನಮ್ಮ ಸರ್ಕಾರದ ಅವಧಿಯಲ್ಲಿ ಏನಾದರೂ ನಿವೇಶನ ಹಂಚಿಕೆಯಾಗಿದೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೇಶನ ಹಂಚಿಕೆ ಬಗ್ಗೆ ಯಾವುದಾದರೂ ಆದೇಶ ಮಾಡಿದ್ದಾರೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನಿವೇಶನ ಹಂಚಿಕೆಯಾಗಿದ್ದು, ಇದೀಗ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಬಿಜೆಪಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ರೀತಿ ಡ್ರಾಮಾ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾನೂನಿನ ಮುಂದೆ ಎಲ್ಲರೂ ಸಮಾನರು : ಇಲಾಖೆಯ ಜವಾಬ್ದಾರಿ ಮಂತ್ರಿಯದ್ದಾಗಿರುತ್ತದೆ. ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಕಂಡು ಬಂದ ಕೂಡಲೇ ನಾಗೇಂದ್ರ ಅವರು ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತನಿಖೆ ನಡೆದು ಸತ್ಯಾಂಶ ಹೊರ ಬರಲಿ. ಎಸ್ ಐಟಿ ಅವರು ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಯಾವುದೇ ಪ್ರಕರಣದ ತನಿಖೆ ನಡೆಸಲು ರಾಜ್ಯ ಪೊಲೀಸರು ಶಕ್ತರಿದ್ದಾರೆ ಎಂದು ತಿಳಿಸಿದರು.
ಪ್ರತಿಯೊಂದು ಪ್ರಕರಣವನ್ನು ಬಿಜೆಪಿಯವರು ಸಿಬಿಐಗೆ ವಹಿಸುವಂತೆ ಆಗ್ರಹ ಮಾಡುತ್ತಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಎಷ್ಟು ಪ್ರಕರಣವನ್ನು ಅಂದಿನ ರಾಜ್ಯ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿದೆ ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಯಾವ ಸರ್ಕಾರವೂ ಈ ಪರಿಯಾಗಿ ದುರುಪಯೋಗಪಡಿಸಿಕೊಂಡಿಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಚುಚ್ಚಿದರು.
ಕೇಂದ್ರ ಸಚಿವೆ ರಾಜೀನಾಮೆ ನೀಡಲಿ : ಮುಡಾ ನಿವೇಶನ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯೂನಿಯನ್ ಬ್ಯಾಂಕ್ ನಲ್ಲಿ ನಡೆದಿರುವ ಅವ್ಯವಹಾರಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜೀನಾಮೆ ನೀಡಲಿ ಎಂದು ತಿರುಗೇಟು ನೀಡಿದರು.