
ಮುಸಲಾಪುರ
ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ
ಕರುನಾಡ ಬೆಳಗು ಸುದ್ದಿ
ಕನಕಗಿರಿ, ೦೬- ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಈ ಸವಿನೆನಪಿಗಾಗಿ ರಾಜ್ಯ ಸರ್ಕಾರವು ಕನ್ನಡ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿ ಹಳ್ಳಿಗೂ ತಲುಪಿಸುವ ಉದ್ದೇಶದಿಂದ ಈ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್ ಹೇಳಿದರು.
ಅವರು ತಾಲೂಕಿನ ಮುಸಲಾಪುರ ಗ್ರಾಮಕ್ಕೆ ಮಂಗಳವಾರ ಆಗಮಿಸಿದ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ವತಿಯಿಂದ ಆದ್ದೂರಿಯಾಗಿ ಸ್ವಾಗತಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕ ಸಂಭ್ರಮ-50ರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ಧ್ಯೇಯ ವಾಕ್ಯದೊಂದಿಗೆ ವರ್ಷವಿಡಿ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕರ್ನಾಟಕದ ಅರಿವು ಮೂಡಿಸುವ ಉದ್ದೇಶವನ್ನು ಈ ರಥಯಾತ್ರೆ ಹೊಂದಿದೆ ಎಂದರು.
ಮೆರವಣಿಗೆಯಲ್ಲಿ ಶಾಲಾ ಮಕ್ಕಳು ಸ್ವಾತಂತ್ರ ಹೋರಾಟಗಾರರ, ಕವಿಗಳ, ದಾರ್ಶನಿಕರ ವೇಷಭೂಷಣಗಳನ್ನು ಧರಿಸಿದ್ದು ನೋಡುಗರ ಗಮನ ಸೆಳೆಯಿತು. ಇದೇ ವೇಳೆ ಶಾಲಾ ಮಕ್ಕಳು, ಗ್ರಾಮಸ್ಥರು ಕನ್ನಡ ಹಾಡುಗಳಿಗೆ ದಾರಿಯುದ್ದಕ್ಕೂ ಹೆಜ್ಜೆ ಹಾಕಿ ಸಂಭ್ರಮ ಪಡುವ ಮೂಲಕ ರಥಯಾತ್ರೆಯನ್ನು ಸ್ವಾಗತ ಮಾಡಿದರು.
ಈ ವೇಳೆ ಕಂದಾಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಕನ್ನಡ ಪರ, ರೈತ ಪರ ಸಂಘಟನೆ ಮುಖಂಡರು, ಜನಪ್ರತಿನಿಧಿಗಳು, ಶಿಕ್ಷಕರು, ಅಂಗನವಾಡಿ – ಆಶಾ ಕಾರ್ಯಕರ್ತರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು, ಗ್ರಾ.ಪಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.