IMG-20240330-WA0026

ವಿದ್ಯಾರ್ಥಿ ಯುವಜನರು ಮತದಾನದಲ್ಲಿ ಭಾಗಿಯಾಗಲಿ : ಜಿಪಂ ಸಿಇಓ ಬಿ.ಸದಾಶಿವ ಪ್ರಭು

ಕರುನಾಡ ಬೆಳಗು ಸುದ್ದಿ

ವಿಜಯನಗರ,31- ಇಡೀ ಪ್ರಪಂಚದಲ್ಲಿ ಹೆಚ್ಚು ಯುವ ಸಮೂಹ ಇರುವುದು ಭಾರತದಲ್ಲಿ ದೇಶದಲ್ಲಿ, ಹೀಗಾಗಿ ಉತ್ತಮ ಸಮಾಜಕ್ಕಾಗಿ ಯುವ ಮತದಾರರು ಕಡ್ಡಾಯವಾಗಿ ಮತ ಹಾಕುವುದನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ವಿಜಯನಗರ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭು ಅವರು ಹೇಳಿದರು.

ಇಲ್ಲಿನ ನ್ಯಾಷನಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಾಲೂಕು ಹಾಗೂ ಜಿಲ್ಲಾಡಳಿತ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್, ನಗರಸಭೆ ಆಶ್ರಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಪ್ರಯುಕ್ತ ಮಾರ್ಚ 30ರಂದು ಹಮ್ಮಿಕೊಂಡಿದ್ದ ಮತದಾರರ ಸಹಿ ಸಂಗ್ರಹಣಾ ಅಭಿಯಾನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಕಡ್ಡಾಯ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಭಾರತ ದೇಶವು ಇಡೀ ಪ್ರಪಂಚದಲ್ಲೇ ಅತೀದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಆದರೆ, ಮತದಾನ ಮಾಡುವಲ್ಲಿ ಜನರು ನಿರ್ಲಕ್ಷ್ಯ ತೋರುತ್ತಿರುವುದು ಬೇಸರದ ಸಂಗತಿ. ದೇಶದಲ್ಲಿ ಸಾಕಷ್ಟು ವಿದ್ಯಾವಂತರೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುತ್ತಿಲ್ಲ. ಆದ್ದರಿಂದ 18 ವರ್ಷ ಮೇಲ್ಪಟ್ಟ ಯುವಜನತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು ಹಾಗೂ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಇಂದಿನ ಯುವ ಪೀಳಿಗೆ ಮತದಾನದಿಂದ ದೂರ ಉಳಿಯಬಾರದು ಎಂದರು.

ಪ್ರಜ್ಞಾವಂತರು ಹಾಗೂ ವಿದ್ಯಾವಂತರೇ ಮತದಾನ ದಿನದಂದು ಬೇರೊಂದು ಊರುಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಇದು ಸರಿಯಲ್ಲ. ವಿದ್ಯಾವಂತರಾದವರು ತಪ್ಪು ಮಾಡುವುದು ಸರಿಯಲ್ಲ. ಆದ್ದರಿಂದ ಯುವಕರಿಂದ ಸಮಾಜಕ್ಕೆ ಉತ್ತಮ ಸಂದೇಶ ಹೋಗಬೇಕಾದರೆ ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು. ಮತದಾನದಿಂದ ದೂರ ಉಳಿಯುವವರನ್ನು ಮತದಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಮತ ಚಲಾಯಿಸುವಂತೆ ತಿಳಿ ಹೇಳಬೇಕಿದೆ ಎಂದರು.

ಯಾವುದೇ ಪಕ್ಷಗಳ ಮುಖಂಡರು ಆಸೆ-ಆಮೀಷ ತೋರಿದರೆ ಅದಕ್ಕೆ ಯಾರೂ ಬಲಿಯಾಗದೇ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಮತದಾರರೇ ಭ್ರಷ್ಟರಾದರೆ ಉತ್ತಮ ಪ್ರಜಾಪ್ರಭುತ್ವ ಹಾಗೂ ಭ್ರಷ್ಟರಹಿತ ಸರ್ಕಾರಗಳನ್ನು ನಿರೀಕ್ಷಿಸುವುದು ಅಸಾಧ್ಯ. ಹೀಗಾಗಿ ಯುವ ಸಮೂಹವು ಒಳ್ಳೆಯ ರೀತಿಯಲ್ಲಿ ಚುನಾವಣೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ಹಬ್ಬವನ್ನು ಆಚರಿಸಿ ಯಶಸ್ವಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ವೋಟರ್ ಹೆಲ್ಪ್ಲೈನ್ ಮೂಲಕ ನೋಂದಾಯಿಸಿ: ವಿಜಯನಗರ ಜಿಲ್ಲೆಯ 6 ತಾಲೂಕಿನ 137 ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲ ಗ್ರಾಪಂಗಳ ಮುಂಭಾಗ ಸ್ವೀಪ್ ಬ್ಯಾನರ್ ಅಳವಡಿಸಲು ಗ್ರಾಪಂ ಪಿಡಿಒಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಯುವ ಮತದಾರರ ನೋಂದಣಿ, ಮತದಾನದ ಜಾಗೃತಿ ಕಾರ್ಯ ನಿರಂತರ ಆಗಬೇಕಿದೆ. 18 ವರ್ಷ ಆದ ಎಲ್ಲ ಯುವಜನತೆ ಮೊಬೈಲ್‌ನಲ್ಲೇ ವೋಟರ್‌ಐಡಿ ಪಡೆಯಲು ಅವಕಾಶ ಇದೆ. ಪ್ಲೇಸ್ಟೋರ್‌ನಲ್ಲಿ “ವೋಟರ್ ಹೆಲ್ಪ್ಲೈನ್” ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಅಗತ್ಯದಾಖಲೆ ಸಲ್ಲಿಸಿ ಪೂರಕ ಮಾಹಿತಿ ನೀಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಕೈಗೆ ವೋಟರ್‌ಐಡಿ ಸಿಗುವುದು ಎಂದು ಸಿಇಓ ಅವರು ಮಾಹಿತಿ ನೀಡಿದರು.

ಪ್ರತಿಜ್ಞಾ ವಿಧಿ ಬೋಧನೆ : ಹೊಸಪೇಟೆ ನಗರದ ಶ್ರೀಶಂಕರ್‌ಆನಂದ್ ಸಿಂಗ್ ಪ್ರಥಮ ದರ್ಜೆ ಕಾಲೇಜ್ ಹಾಗೂ ವಿಜಯನಗರ ಪದವಿ ಕಾಲೇಜ್‌ನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮ ಕುರಿತು ಯುವ ಮತದಾರರ ಜವಾಬ್ದಾರಿ, ಮತದಾನ ಮಹತ್ವ ವಿಷಯದ ಕುರಿತು ಸ್ವೀಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಇಒ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ನ್ಯಾಷನಲ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಅಯ್ಯುಬ್‌ಖಾನ್, ಕಾಲೇಜಿನ ಕಾರ್ಯದರ್ಶಿ ಕಾಕುಬಾಳು, ಶ್ರೀನಿವಾಸ ಸೇರಿದಂತೆ ನಗರಸಭೆ ಆಯುಕ್ತರು, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!