8268eaab-fc43-407e-bd83-75e24ca5671b

ಯುವಕವಿಗಳ ಕವಿತೆಗಳು ಸಮಾಜಮುಖಿಯಾಗಿ ಮೂಡಿಬರಲಿ : ಚಿಂತಕ ಅಬ್ದುಲ್ ಹೆ ತೋರಣಗಲ್ಲು

ಕರುನಾಡ ಬೆಳಗು ಸುದ್ದಿ

ವಿಜಯನಗರ,4- ವರ್ತಮಾನದ ಘಟನೆಗಳು ಕವಿತೆಯಲ್ಲಿ ಅಡಗಿರಲಿ. ಯುವಕವಿಗಳ ಕವಿತೆಗಳು ಸಮಾಜಮುಖಿಯಾಗಿ ಮೂಡಿಬರಲಿ ಎಂದು ಚಿಂತಕರು, ಬಂಡಾಯ ಸಾಹಿತಿ ಅಬ್ದುಲ್ ಹೆ ತೋರಣಗಲ್ಲು ಅಭಿಪ್ರಾಯ ಪಟ್ಟರು.

ಹಂಪಿ ಉತ್ಸವ ಅಂಗವಾಗಿ ವಿರುಪಾಕ್ಷೇಶ್ವರ ವೇದಿಕೆಯಲ್ಲಿ ಭಾನುವಾರ ಜರುಗಿದ ಮಕ್ಕಳ ಹಾಗೂ ಯುವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕವಿಗಳ ಶಕ್ತಿ ಅಪಾರವಾಗಿದೆ. ಪ್ರಾನ್ಸ್, ಜರ್ಮನ್ ಸೇರಿದಂತೆ ಹಲವು ದೇಶಗಳನ್ನು ಕವಿಗಳು ಕಟ್ಟಿಬೆಳೆಸಿದ್ದಾರೆ. ಕವಿಗಳು ರಾಷ್ಟ್ರ ನಿರ್ಮಾಣ ಮಾಡಿದ್ದಾರೆ ಎಂದರು. ಕವಿ ಹಾಗೂ ಸಾಹಿತಿಗಳ ರಾಷ್ಟ್ರೀಯ ವಿಚಾರಧಾರೆಗಳು ಹಾಗೂ ಸಮಾನತೆ, ಗುರಿಗಳ ಬಗ್ಗೆ ಅಪರಿಮಿತ ಜ್ಞಾನ ರಾಷ್ಟ್ರ ಮುನ್ನಡೆಸಲು ಸಹಕಾರಿ ಆಗಿರುತ್ತದೆ ಎಂದರು.

ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ, ಸಮಾಜ ಘಾತುಕ ಶಕ್ತಿಗಳ ಶಮನ ಕುರಿತ ವಿಚಾರಧಾರೆಗಳು ಕವಿತೆಗಳಲ್ಲಿ ಅಡಗಿರಲಿ. ಸಮಾಜದ ಪ್ರತಿಯೊಬ್ಬರ ತನು-ಮನ ಬೆಸೆಯುವ ಕೆಲಸ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ನಮ್ಮ ತಾಯಿಭಾಷೆ, ಕನ್ನಡ ಸಾಹಿತ್ಯದಲ್ಲಿ ಶಬ್ದ ಬಂಡಾರಕ್ಕೇನು ಕಡಿಮೆ ಇಲ್ಲ. ಕವಿ ಸಾಹಿತಿಗಳು ಹೊಸ ಶಬ್ದಗಳನ್ನು ಹೆಕ್ಕಿ ತೆಗೆದು ಅವುಗಳನ್ನು ಕವಿತೆಗಳಲ್ಲಿ ಅರ್ಥಪೂರ್ಣವಾಗಿ ಬಳಕೆ ಮಾಡುವ ಮನಸ್ಸು ಹೊಂದಬೇಕಿದೆ ಎಂದು ಚಿಂತಕ ಅಬ್ದುಲ್ ಹೆ ತೋರಣಗಲ್ಲು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಮಾತನಾಡಿ, ಈ ವರ್ಷ ಹೊಸದಾಸಗಿ ಮಕ್ಕಳ ಹಾಗೂ ಯುವಕವಿ ಗೋಷ್ಠಿ ನಡೆಸಲಾಗುತ್ತಿದೆ. ಈ ಮೂಲಕ ಹಂಪಿ ಉತ್ಸವ ಅರ್ಥಪೂರ್ಣ ಮಾಡಲಾಗಿದೆ. ಯುವ ಕವಿಗಳ ಸಾಹಿತ್ಯಾ ಭಿರುಚಿ ಈ ವೇದಿಕೆ ಮೂಲಕ ಅನಾವರಣಗೊಳ್ಳಲಿ. ಕವಿತ್ವ ಆಸಕ್ತಿಯ ಮನಸ್ಸುಗಳ ದೇಹಕ್ಕೆ ಅಷ್ಠೆ ಸುಸ್ತಾಗ ಬಹುದು, ಮನಸ್ಸಿಗೆ ಹೆಚ್ಚು ಮುದ ಹಾಗೂ ಅಭಿರುಚಿ ಮೂಡಿಸಲಿವೆ ಎಂದರು.

ಧಣಿದ ಧ್ವನಿ ಶೀರ್ಷಿಕೆ ಯಿಂದ ಮೂಡಿ ಬಂದ ವಿಜಯ ರಾಘವೇಂದ್ರ ಬಿ.ಎಂ ಅವರ ಕವಿತೆ, ದಲಿತರ ಸ್ಥಿತಿ ಗತಿಯನ್ನು ಹಾಗೂ ಬದಲಾವಣೆ ಏಳ್ಗೆಯನ್ನು ಬಿಂಬಿಸುವ ಪ್ರಯತ್ನ ಮಾಡಿತು. ಅಲ್ಲದೇ ದುಡಿಯುವವರ ಪರಿಸ್ಥಿತಿ, ಸಮಾಜದಲ್ಲಿನ ಸಾಮರಸ್ಯ ಸಹಿಷ್ಣುತೆ ಕುರಿತು ಬೆಳಕು ಚಲ್ಲಿತು. ಬಸನ್ ಡಿ.ಯು ಅವರು ಸ್ಮಶಾನ ಮೌನ ಶೀರ್ಷಿಕೆ ಯಡಿ, ಸಮಾಜದಲ್ಲಿನ ಮೇಲು ಕೀಳು, ಜಾತಿ ತಾರತಮ್ಯ, ಸಮುದಾಯಗಳ ನಡುವಿನ ವೈಮನಸ್ಸು ಸೇರಿ ಇತರ ವಿಷಯಗಳ ಬಗ್ಗೆ ಗಮನ ಹರಿಸಿ, ಔಚಿತ್ಯಪೂರ್ಣ ವಾಚನ ಮಾಡಿದರು.

ವಿಶಾಲ ಮ್ಯಾಸರ್ ಅವರು ಕಾಣೆಯಾಗುತ್ತಾರೆ ಶೀರ್ಷಿಕೆ ಅಡಿಯಲ್ಲಿ ರಾತ್ರಿಗೆ ಎಷ್ಟು ಕಗ್ಗಂಟುಗಾಳು, ಜಗವೇಲ್ಲ ಮಲಗಿರುತ್ತದೆ. ಆದರೆ ಚಂದ್ರ ಪಹರೆ ಕಾಯುತ್ತಾನೆ ನಕ್ಷತ್ರಗಳೊಂದಿಗೆ ಎಂದು ಕವನ ವಾಚಿಸಿ, ದುರ್ಬಲರ ಬದುಕನ್ನು ಕವಿತೆ ಮೂಲಕ ಅನಾವರಣವಕ್ಕೆ ಪ್ರಯತ್ನಪಟ್ಟರು. ಆರ್.ಮನೋಹರ ಅವರು ಹಿಂದು ರಾಷ್ಟ್ರ ಜಾಗೃತಿ ಕುರಿತ ಕವಿತೆಯಲ್ಲಿ ಅಖಂಡ ರಾಷ್ಟ್ರೀಯತೆ ಹಾಗೂ ಸನಾತನ ಹಿಂದು-ಬಂಧು, ದೇಶಭಕ್ತಿಯ ಐಕ್ಯತೆ ಮಂತ್ರವನ್ನು ಒಳಗೊಂಡ ಕವಿತೆಯನ್ನ ವಾಚಿಸಿದರು.

ಬಿ.ಎಸ್.ಶರಣ ಅವರು ನಮ್ಮ ಕವಿಗಳ ಕವಿತೆ ಎಂಬ ಶೀರ್ಷಿಕೆ ಯಲ್ಲಿ ಕವಿತೆಗಳ ವಿಮರ್ಶೆಮಾಡಿ ಕವಿತೆಗಳು ಹಸಿವು ನೀಗಿಸಲಾರವು ಎಂದು ಇಂದಿನ ಕವಿಗಳ ಕವಿತೆಗಳ ಪರಿಸ್ಥಿತಿಯನ್ನು ತಿಳಿಸಿದರು. ಅದೇ ರೀತಿ ಎಲುಬಿಲ್ಲದ ನಾಲಿಗೆ ತಲೆಬರಹದ ಕವಿತೆಯನ್ನು ಕ್ಯಾದಿಗಿಹಾಳ ಉದೇದಪ್ಪ ಅವರು ವಾಚಿಸಿ, ಎಲುಬಿಲ್ಲದ ನಾಲಿಗೆ ಎಂದು ಹರಿ ಬಿಡಬೇಡ, ಮನದಲ್ಲಿ ವಿಷತುಂಬಿ ಡಾಂಬಿಕತೆ ತೋರಿದರೇನು? ಇನ್ನೋಬ್ಬರ ಮನಕೆ ನೋವು ಕೋಡಬೇಡ ಎಂಬ ಅರಿವು ಮಾಡಿಸುವ ಪ್ರಯತ್ನ ಮಾಡಿದರು.

ಎಚ್.ಎಂ. ಜಂಬೂನಾಥ ಅವರು ತಾಯಿ ಶೀರ್ಷಿಕೆಯಡಿ ವಾಚನ ಮಾಡಿ, ತಾಯಿಯು ಮಗ ಗೆದ್ದಾಗ ಸಂಭ್ರಮಿಸುವವಳು, ಸೋತಾಗ ದೈರ್ಯ ತುಂಬುವವಳು. ನಾ ನಕ್ಕರೆ ನುಗುವಳು, ಅತ್ತರೆ ಅಳುವಳು ನಮ್ಮ ಶ್ರಯೋಭಿವೃದ್ಧಿಗಾಗಿ ತನ್ನ ಜೀವನ ಮುಡಿಪಾಗಿಟ್ಟವಳು ಎಂದು ವಾಚಿಸಿದರು.

ನಾಗರಾಜ ಬಡಿಗೇರ ಅವರು ನನ್ನ ಮತ ನನ್ನ ಅಸ್ಮಿತೆ ಎಂದ ಶೀರ್ಷಿಕೆಯ ಕವಿತೆ ವಾಚಿಸುವ ಮೂಲಕ ಮತ ಒತ್ತುವದಲ್ಲ, ಬಿತ್ತುವದು. ನನ್ನ ಮತದಾನ ಮಾಡಲ್ಲ, ಚಲಾಯಿಸುವೇ ಮುಂದೋಂದು ದಿನ ನನ್ನ ಮತದಿಂದ ಬದಲಾವಣೆ, ಫಲಪ್ರಧವಾಗಲಿದೆ ಎಂದು ತಮ್ಮ ಅನಿಸಿಕೆಯನ್ನು ಕವಿತೆ ಮೂಲಕ ಹೊರಹಾಕಿದರು.

ನಾಗರಾಜ ಗಂಟಿ ಅವರು ಅರಿಯದನ್ನಕ್ಕ ತಿಳಿಯದನ್ನಕ್ಕ ಕವಿತೆಯನ್ನು, ಪಿ.ಚೈತ್ರ ಅವರು ಸುರ್ಯೋದಯ, ಎಂ.ವಿರೇಂದ್ರ ಅವರು ಸುಗ್ಗಿ, ಪ್ರಜ್ವಲ ಅವರು ಬೆಳಗಿನ ಗೀತೆ, ಜಿ.ಯರಿಸ್ವಾಮಿ ಅವರು ಗಾಂಧಿ ಪ್ರೀಯ, ಹೀಗೆ ಬಿ.ವಿ.ಸ್ನೇಹಾ, ಕುಸುಮಾ ಗುಂಡಗೇರಿ, ಕೀರ್ತಿ ಗಂಗಾವತಿ, ಸಾನಿಯಾ ಹೆಚ್., ವೀರೇಶಮ್ಮ ಅವರುಗಳು ತಮ್ಮ ಕವಿತೆಗಳನ್ನು ಅತೀವ ಉತ್ಸಾಹದಿಂದ ವಾಚನ ಮಾಡಿದರು.

ಕವಿಗೋಷ್ಠಿಯಲ್ಲಿ ಡಿಡಿಪಿಯು ಪಾಲಕ್ಷ.ಟಿ, ಪ್ರಾಚಾರ್ಯ ನಾಗರಾಜ ಹವಾಲ್ದಾರ ಸೇರಿದಂತೆ ಇತರರು ಇದ್ದರು. ಇದೇ ವೇಳೆ ಕವಿತೆ ವಾಚನ ಮಾಡಿದವರಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು. ಹೊಸಪೇಟೆ ವಿಜಯನಗರ ಕಾಲೇಜು ಉಪನ್ಯಾಸಕಿ ನಾಗರತ್ನಾ ಅವರು ಕವಿಗೋಷ್ಠಿ ನಿರ್ವಹಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!