
ರಂಗಿನಲ್ಲಿ ಮಿಂದೆದ್ದ ವಿದೇಶಿಯರು : ಭಾರತೀಯ ಸಂಸ್ಕೃತಿಗೆ ಫಿದಾ
ಕರುನಾಡ ಬೆಳಗು ಸುದ್ದಿ
ಗಂಗಾವತಿ,26- ಹಂಪೆ-ಆನೆಗೊಂದಿಯಂತ ಐತಿಹಾಸಿಕ ತಾಣಗಳಲ್ಲಿ ಪ್ರವಾಸಕ್ಕೆಂದು ಬಂದಿದ್ದ ನೂರಾರು ವಿದೇಶಿಗರು ಮಂಗಳವಾರ ಹೋಳಿಹಬ್ಬದ ಅಂಗವಾಗಿ ಆಚರಿಸಲಾದ ಬಣ್ಣದೊಕುಳಿಯಲ್ಲಿ ಸ್ಥಳೀಯರೊಂದಿಗೆ ಭಾಗಿಯಾಗಿ ರಂಗಿನಲ್ಲಿ ಮಿಂದೆದ್ದರು.
ತಾಲ್ಲೂಕಿನ ಆನೆಗೊಂದಿ-ಸಣಾಪುರ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿರುವ ರೆಸಾಟರ್್ಗಳಲ್ಲಿ ತಂಗಿರುವ ನೂರಾರು ವಿದೇಶಿಗರು, ಬಣ್ಣದಾಟದಲ್ಲಿ ಭಾಗಿಯಾಗಿ ಭಾರತೀಯ ಸಂಸ್ಕೃತಿ, ಹಬ್ಬ-ಆಚರಣೆಗೆ ಮಾರು ಹೋದರು.
ಪರಸ್ಪರ ತಮ್ಮ ಸಂಗಾತಿಗಳಿಗೆ ಬಣ್ಣ ಎರಚುವ ಮತ್ತು ಸ್ಥಳೀಯ ಯುವಕರಿಗೆ ಬಣ್ಣ ಹಚ್ಚುವ ಮೂಲಕ ವಿದೇಶಿಯರು ಹೋಳಿ ಹಬ್ಬವನ್ನು ಆಚರಿಸಿದರು. ಅಲ್ಲದೇ ಮೆರವಣಿಗೆಯಲ್ಲಿ ಭಾಗಿಯಾಗಿ ಸ್ಥಳೀಯ ಯುವಕರೊಂದಿಗೆ ಮೋಜು-ಮಸ್ತಿ, ನೃತ್ಯ ಮಾಡಿ ಗಮನ ಸೆಳೆದರು.
ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್, ಜರ್ಮನಿ ಮುಖ್ಯವಾಗಿ ಇಸ್ರೇಲ್ನಿಂದ ದೊಡ್ಡ ಪ್ರಮಾಣ ಪ್ರವಾಸಿಗರು ಹಂಪೆ-ಆನೆಗೊಂದಿಗೆ ಭೇಟಿ ನೀಡುತ್ತಾರೆ. ಪ್ರತಿವರ್ಷ ನವಂಬರ್-ಡಿಸಂಬರ್ನಲ್ಲಿ ವಿದೇಶಿ ಪ್ರವಾಸಿಗರು ಆನೆಗೊಂದಿಗೆ ಬರಲಾರಂಭಿಸುತ್ತಾರೆ.
ಇಲ್ಲಿನ ವಾತಾವರಣದಲ್ಲಿ ಬದಲಾವಣೆಯಾಗಿ ಉಷ್ಣಾಂಶ ಏರಿಕೆಯಾಗುತ್ತಿದ್ದಂತೆಯೆ ಜನವರಿ-ಫೆಬ್ರವರಿ ತಿಂಗಳಲ್ಲಿ ವಿದೇಶಿಗರು ಮರಳಿ ತಮ್ಮ ತಾಯ್ನಾಡಿನತ್ತ ಪ್ರಯಾಣಿಸುತ್ತಾರೆ. ಉಳಿದ ಕೆಲವರು ಹೋಳಿಯಾಡದಿ ಬಳಿಕ ತಮ್ಮ ದೇಶಕ್ಕೆ ಇಲ್ಲವೇ ಮತ್ತೊಂದು ಪ್ರವಾಸಿ ತಾಣ ಹುಡುಕಿಕೊಂಡು ಹೋಗುತ್ತಾರೆ.
ಮಂಗಳವಾರ ನಡೆದ ಹೋಳಿಯಲ್ಲಿ ಸ್ಥಳೀಯರೊಂದಿಗೆ ವಿದೇಶಿಗರು ಹಾಗೂ ವೀಕೆಂಡ್ ಕಳೆಯಲು ಬಂದಿದ್ದ ನೆರೆ-ಹೊರೆ ರಾಜ್ಯದ ನೂರಾರು ಪ್ರವಾಸಿಗರು ಭಾಗಿಯಾಗಿದ್ದರು. ಕೆಲ ರೆಸಾಟರ್್ಗಳ ಮಾಲಿಕರು, ಡಿಜೆ ಸಂಗೀತ ಹಾಗೂ ಮೆರವಣಿಗೆ ಆಯೋಜಿಸಿದ್ದರು.
ಜಯನಗರ, ಸತ್ಯನಾರಾಯಣ ಪೇಟೆ ಸೇರಿದಂತೆ ನಾನಾ ಕಡೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಅದ್ಧೂರಿಯಾಗಿ ಹೋಳಿ ಆಚರಿಸಿದರು. ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ನೃತ್ಯ, ಹಾಡುಗಳ ಮೂಲಕ ರಂಜಿಸಿದರು.