
ಅಧಿಕಾರಿಗಳ ಎಡವಟ್ಟು ತಡವರಿಸಿದ ಸಚಿವರು
ಕೊಪ್ಪಳ, 01- ನಗರದಲ್ಲಿ ಜರುಗಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಹಿಂದಿನ ವರ್ಷದ ರಾಜ್ಯೋತ್ಸವ ಪುರಸ್ಕೃತರ ಹೆಸರು ಓದಿ ಈ ಭಾರಿ ಪಶಸ್ತಿ ಪುರಸ್ಕೃತರಿಗೆ ಅವಮಾನ ಮಾಡಿದ ಘಟನೆ ಜರುಗಿತು.
ಮಂಗಳವಾರ ಬೆಳಿಗ್ಗೆ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಳೆದ ವರ್ಷದ ಪ್ರಶಸ್ತಿ ಪಡೆದವರ ಹೆಸರು ಹೇಳಿದರು.
ಅಧಿಕಾರಿಗಳ ಯಡವಟ್ಟಿನಿಂದ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರ ಹೆಸರು ಭಾಷಣ ಪ್ರತಿಯಲ್ಲಿ ಸೇರ್ಪಡೆಗೊಂಡಿದೆ. ಈ ವರ್ಷ ಪ್ರಶಸ್ತಿ ಪಡೆದವರ ಹೆಸರು ಸೇರಿಸಿಲ್ಲ. ಅದನ್ನೇ ಓದಿದ ಸಚಿವರು ಪೇಚಿಗೆ ಸಿಲುಕಿದವರಂತೆ ಕಂಡು ಬಂದರು.
ಜಿಲ್ಲೆಯ ತೊಗಲು ಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ, ಮಕ್ಕಳಿಗಾಗಿ ಭೂಮಿ ದಾನ ಮಾಡಿದ ಹುಚ್ಚಮ್ಮ ಚೌದ್ರಿ ಹಾಗೂ ಹಗಲು ವೇಷ ಕಲಾವಿದ ವಿಭೂತಿ ಗುಂಡಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಪ್ರಶಸ್ತಿ ನೀಡಿದರೂ ಸಚಿವರ ಭಾಷಣದಲ್ಲಿ ಅವರ ಹೆಸರು ಸೇರಿಸದೇ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ.
ಹಿಂದಿನ ವರ್ಷ ಪ್ರಶಸ್ತಿಗೆ ಭಾಜನಾರದ ಶಂಕ್ರಪ್ಪ ಹೊರಪೇಟಿ ಹಾಗೂ ರಂಗಪ್ಪ ಚಿತ್ರಗಾರ ಹೆಸರು ಹಾಕಿದ್ದಾರೆ. ಅವರ ಹೆಸರನ್ನೇ ಸಚಿವ ತಂಗಡಗಿ ಓದಿದರು.
ನಂತರ ತಪ್ಪು ಅರಿತು ಈ ವರ್ಷವೂ ಮೂವರು ಮಹನೀಯರಿಗೆ ಪ್ರಶಸ್ತಿ ನೋಡಿದ್ದೇವೆ. ಇದರಿಂದ ಜಿಲ್ಲೆಯ ಹೆಮ್ಮೆ ಹೆಚ್ಷಾಗಿದೆ ಎಂದು ಅಧಿಕಾರಿಗಳ ತಪ್ಪು ಸರಿಪಡಿಸಲು ಯತ್ನಿಸಿದರು.
ಆದರೂ ಈ ವರ್ಷ ಪ್ರಶಸ್ತಿ ಪಡೆದವರ ಹೆಸರನ್ನು ಹೇಳದೆ ಅವಮಾನಿಸಿದರು.