IMG-20240704-WA0027

ರಾಜ್ಯ ಮಟ್ಟದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ಆಗ್ರಹಿಸಿ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 4- ನೀಟ್ ಹಾಗೂ ನೆಟ್ ಪರೀಕ್ಷೆಗಳ ಹಗರಣಗಳನ್ನು ವಿರೋಧಿಸಿ ಏನ್.ಟಿ.ಎ ಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ನಗರದ ಅಶೋಕ ವೃತ್ತದಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಮಾತನಾಡಿ, ಎಐಡಿಎಸ್ಓ ಅಖಿಲ ಭಾರತ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದು ಇಡೀ ದೇಶವ್ಯಾಪಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ, ನೀಟ್ ಯುಜಿಯಲ್ಲಿನ ಭ್ರಷ್ಟಾಚಾರವು ಹೊರ ಬಿದ್ದಿರುವ ಬೆನ್ನಲ್ಲೇ, ಎನ್. ಟಿ.ಎ ಯಿಂದ ಆಯೋಜಿಸಲ್ಪಟ್ಟ ನೆಟ್ ಪರೀಕ್ಷೆಯನ್ನು ಶಿಕ್ಷಣ ಸಚಿವಾಲಯವು ರದ್ದುಗೊಳಿಸಿದೆ. ಪರೀಕ್ಷೆ ನಡೆದ ಮರುದಿನವೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ನೀಟ್ ಮತ್ತು ನೆಟ್ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಕೇಳಿ ಬಂದಿದೆ.ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಟ್ಟಲೆ ಈ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ನೀಟ್ ಪರೀಕ್ಷೆಯಲ್ಲಿ ನಡೆದ ಗಂಭೀರ ಪ್ರಮಾಣದ ಅವ್ಯವಹಾರವನ್ನು ಚಿಕ್ಕದೆಂದು ಬಿಂಬಿಸಲು ಶಿಕ್ಷಣ ಸಚಿವಾಲಯ ಮತ್ತು ಎನ್ ಟಿ ಎ ಪ್ರಯತ್ನಿಸುತ್ತಲೇ ಇವೆ. ನೆಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳು ಈ ಪ್ರಕರಣದ ತೀವ್ರತೆಯನ್ನು ಪ್ರತಿಬಿಂಬಿಸುತ್ತಿವೆ.

ಅಷ್ಟೇ ಅಲ್ಲದೆ, ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಪಾವಿತ್ರತೆಯನ್ನು ಕಾಪಾಡಲು ಪರೀಕ್ಷೆ ನಡೆದ ಮರುದಿನವೇ ಅದನ್ನು ರದ್ದು ಪಡಿಸಿ ಸಿಬಿಐಗೆ ಒಪ್ಪಿಸಲಾಗಿದೆ. ಈ ನಡೆಯು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪರೀಕ್ಷಾ ಕೇಂದ್ರಗಳಿಗೆ ತಲುಪಲು ದೂರದ ಪ್ರಯಾಣ, ವಸತಿ, ಅಧಿಕ ಪ್ರಮಾಣದ ಪರೀಕ್ಷಾ ಶುಲ್ಕ ಸೇರಿದಂತೆ ಮಿಲಿಯಾಂತರ ಅಭ್ಯರ್ಥಿಗಳ ವೆಚ್ಚಕ್ಕೆ ಯಾರು ಹೊಣೆ? ಎಲ್ಲದಕ್ಕೂ ಮಿಗಿಲಾಗಿ ಎನ್ ಟಿ ಎ ಪ್ರದರ್ಶಿಸುತ್ತಿರುವ ಬೇಜವಾಬ್ದಾರಿ, ಅಸಮರ್ಥತೆ ಮತ್ತು ಪಾರದರ್ಶಕತೆಯ ಕೊರತೆಯು ಮಿಲಿಯಾಂತರ ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ.

ವ್ಯಾಪಾರೀಕರಣ, ಅನಾರೋಗ್ಯ ಪೀಡಿತ ಸ್ಪರ್ಧೆ ಮತ್ತು ವ್ಯಾಪಕ ಭ್ರಷ್ಟಾಚಾರವು ಜಾರಿಯಲ್ಲಿರುವಾಗ, ಒಂದು ಕೇಂದ್ರೀಕೃತ ಪರೀಕ್ಷೆಯು ಭ್ರಷ್ಟಾಚಾರದ ಏಕಸ್ವಾಮ್ಯಾಧಿಕಾರವನ್ನುಂಟು ಮಾಡಬಲ್ಲದೆ ಹೊರತು, ಈ ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ.

ಈ ಹಿನ್ನೆಲೆಯಲ್ಲಿ, ನೀಟ್ ಮತ್ತು ನೆಟ್ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮದ ಕುರಿತು ಸಮರೋಪಾದಿಯಲ್ಲಿ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು. ಶಿಕ್ಷಕರು ಮತ್ತು ಸೌಲಭ್ಯಗಳನ್ನು ಒದಗಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ಪ್ರಬಲ ಕೋಚಿಂಗ್ ಸಂಸ್ಥೆಗಳ ಮೇಲೆ ನಿಬಂಧನೆ ವಿಧಿಸಬೇಕು.

ಪ್ರಕರಣವು ತಾರ್ಕಿಕ ಅಂತ್ಯ ತಲುಪುವವರೆಗೂ ನೀಟ್ ಕೌನ್ಸಿಲಿಂಗ್ ಅನ್ನು ತಡೆಹಿಡಿಯಬೇಕು. ನೆಟ್ ಮರುಪರೀಕ್ಷೆಯ ದಿನಾಂಕವನ್ನು ಕೂಡಲೇ ಪ್ರಕಟಿಸಿ, ನೇರವಾಗಿ ಯುಜಿಸಿಯೇ ಪರೀಕ್ಷೆಯನ್ನು ನಡೆಸಬೇಕು ಹಾಗೂ ರಾಜ್ಯ ಮಟ್ಟದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕೆಂದು ಎಂದು ಆಗ್ರಹಿಸಿದರು.

ಎಐಡಿಎಸ್ಓ ಜಿಲ್ಲಾ ಸಂಘಟನಕಾರರಾದ ಪ್ರದೀಪ್, ವೆಂಕಟೇಶ್, ಕೋಟೇಶ್, ಶ್ರೀಧರ್, ಮೆಹರಾಜ್,ಮಂಜುನಾಥ್, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!