
oppo_1026
ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ದೂರು ವಿಚಾರಣೆ : 9 ಪ್ರಕರಣಗಳು ಇತ್ಯರ್ಥ
ಕರುನಾಡ ಬೆಳಗು ಸುದ್ದಿ
ವಿಜಯನಗರ, 11- ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಹಾಗೂ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರ ಸಮ್ಮುಖದಲ್ಲಿ ಜುಲೈ 11ರಂದು ದೂರು ವಿಚಾರಣೆ ನಡೆಯಿತು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲನಲ್ಲಿ ನಡೆದ ಸಭೆಯಲ್ಲಿ, ದೂರುದಾರರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ, ವಿಜಯನಗರ ಜಿಲ್ಲೆಗೆ ಸಂಬAಧಿಸಿದAತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾದ ಒಟ್ಟು 9 ದೂರುಗಳ ಮೇಲೆ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಯಿತು.
ಹೂವಿನಹಡಗಲಿ ತಾಲೂಕಿನ ದಾಸನಹಳ್ಳಿ ಗ್ರಾಮದ ಡಾಟಾ ಎಂಟ್ರಿ ಆಪರೇಟರ್‌ಗೆ 12 ತಿಂಗಳಿನಿಂದ ವೇತನ ನೀಡಿಲ್ಲ ಎನ್ನುವ ದೂರಿನ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಕೇಳಿದರು. ಡಾಟಾ ಎಂಟ್ರಿ ಆಪರೇಟರಗೆ ಇಂತಿಷ್ಟು ವೇತನ ಪಾವತಿಸಬೇಕು ಎಂದು ಗ್ರಾಮ ಪಂಚಾಯಿತಿಯಲ್ಲಿ ಪಾಸು ಮಾಡಿದ ಠರಾವಿನಂತೆ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಈಗಾಗಲೇ ವಿಚಾರಣಾ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅವರು ಸಭೆಗೆ ತಿಳಿಸಿದರು.
ಕೊಟ್ಟೂರಿನ ಅಜ್ಜಪ್ಪ ತಂದೆ ವಿರುಪಾಕ್ಷಪ್ಪ ವಾಲಿ ಅವರು ದಾಖಲಿಸಿದ, ತಂಗಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡ ಆರೋಪಿಯನ್ನು ಬಂಧಿಸಬೇಕು ಎನ್ನುವ ದೂರು ಮತ್ತು ಹೊಸಪೇಟೆಯ ಟಿ.ಎಚ್.ಅಶೋಕ್ ಅಭಿಷೇಕ ಅವರು ದಾಖಲಿಸಿದ, ತಂಗಿಗೆ ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎನ್ನುವ ದೂರಿನ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಈ ಎರಡು ಪ್ರಕರಣಗಳ ಕುರಿತು ಈಗಾಗಲೇ ಪರಿಶೀಲಿಸಿ ಆಯೋಗಕ್ಕೆ ವಿಚಾರಣಾ ವರದಿಯನ್ನು ಸಲ್ಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸಭೆಗೆ ತಿಳಿಸಿದರು.
ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಹೊಸ ಪ್ಲಾಟನ್ನು 1963ರಲ್ಲಿ ಹಂಚಿಕೆ ಮಾಡಿದ್ದು ಅವುಗಳನ್ನು ರದ್ದುಪಡಿಸಿ ಮರು ಹಂಚಿಕೆ ಮಾಡಿಕೊಡುವ ಬಗ್ಗೆ ದಾಖಲಾದ ದೂರಿನ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಪ್ರಕರಣದ ಬಗ್ಗೆ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಪಟ್ಟಾ ನೀಡುವ ಕಾರ್ಯಕ್ಕೆ ಸಮಾವಕಾಶ ನೀಡಲು ಆಯೋಗಕ್ಕೆ ಮಧ್ಯೆಂತರ ವರದಿ ಸಲ್ಲಿಸಲಾಗಿದೆ ಎಂದು ಹರಪನಹಳ್ಳಿ ಸಹಾಯಕ ಆಯುಕ್ತರ ಕಚೇರಿಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಆರ್‌ಎಂಎಸ್‌ಎ ಹಾಸ್ಟೇಲ್ ವಿದ್ಯಾರ್ಥಿನಿಯರು ವಾರ್ಡನ್ ವಿರುದ್ಧ ನೀಡಿದ ದೂರು ಹಾಗೂ ಹೊಸಪೇಟೆಯ ಪಿಬಿಎಸ್ ಶಾಲೆಯ ಗ್ರೂಪ್ ಡಿ ನೌಕರ ನೀಡಿದ ದೂರಿನ ಮೇಲೆ ವಿಚಾರಣೆ ನಡೆಯಿತು. ಇವೆರಡು ದೂರುಗಳ ಬಗ್ಗೆ ಪರಿಶೀಲಿಸಿ ಇತ್ಯರ್ಥಪಡಿಸಲಾಗಿದೆ ಎಂದು ವಸತಿ ನಿಲಯದ ಅಧಿಕಾರಿಗಳು ಪ್ರಕರಣದ ಕುರಿತು ಮಾಹಿತಿ ನೀಡಿದರು. ಇನ್ನುಳಿದ ಪ್ರಕರಣಗಳ ಬಗ್ಗೆ ಸಹ ಸಭೆಯಲ್ಲಿ ವಿಚಾರಣೆ ನಡೆಯಿತು.
ಸಭೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಸಹ ನಡೆಯಿತು. ಸಭೆಯಲ್ಲಿ ಹಾಜರಿದ್ದ ಕೆಲವು ಸಾರ್ವಜನಿಕರು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಗೆ ಭೇಟಿ ಮಾಡಿ ದೂರು ಸಲ್ಲಿಸಿದರು.
ದೂರುದಾರರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ತಾವುಗಳು ಸಲ್ಲಿಸಿದ ದೂರುಗಳ ಮೇಲೆ ವರದಿ ಸಲ್ಲಿಸಲು ಸಂಬAಧಿಸಿದ ಇಲಾಖೆಗೆ ಸೂಚಿಸಲಾಗುವುದು. ಅವರಿಂದ ಸ್ವೀಕೃತವಾದ ವರದಿಯನ್ನು ದೂರುದಾರರಿಗೆ ಕಳುಹಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕ ಅಹವಾಲುಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಎ.ದಿನೇಶ್ ಸಂಪತ್‌ರಾಜ್, ಅಧ್ಯಕ್ಷರ ಆಪ್ತಕಾರ್ಯದರ್ಶಿ ಅರುಣ್ ಪೂಜಾರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಮ್ ಪಾಶಾ ಹಾಗೂ ಇನ್ನೀತರರು ಇದ್ದರು. ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಅವರು ದಾಖಲಾದ ಪ್ರಕರಣಗಳನ್ನು ಸಭೆಗೆ ಓದಿ ಹೇಳಿದರು.