
ರೆಡ್ಡಿ ಕುಲದ ಮಹಾಮಾತೆ ಹೇಮರೆಡ್ಡಿ ಮಲ್ಲಮ್ಮ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಆಕೆ ಹೆಣ್ಣು, ಅಬಲ್ ಎಂಬಂತೆ ಜನರಿಂದ ಬಿಂಬಿಸಲ್ಪಟ್ಟರೂ ಸಬಲೆಯಾಗಿದ್ದಳು. ಎಲ್ಲಿ ಬಾಗಬೇಕು, ಎಲ್ಲಿ ಎದ್ದು ನಿಲ್ಲಬೇಕು ಎಂಬುದು ಆಕೆಗೆ ಗೊತ್ತಿತ್ತು. ಗುರು ಹಿರಿಯರಿಗೆ, ಅತ್ತೆ ಮಾವನಿಗೆ, ಕೈಹಿಡಿದ ಪತಿಯ ಜೊತೆ ಗೌರವಾದರದಿಂದ ನಡೆದುಕೊಳ್ಳುತ್ತಿದ್ದ ಆಕೆ ಮೈದುನ ದುಶ್ಚಟಗಳಿಗೆ ಬಲಿಯಾದಾಗ ಆತನನ್ನು ಸರಿದಾರಿಗೆ ತರಲು ಕಠೋರವಾಗಿ ನಡೆದುಕೊಂಡಳು. ನಾದಿನಿಯರನ್ನು, ನೆಗೆಣ್ಣಿಯರನ್ನು ಪ್ರೀತಿ ವಿಶ್ವಾಸದಿಂದ ಒಲಿಸಿಕೊಂಡಳು. ಆ ಪರಶಿವನನ್ನು ಸದಾ ಕಾಲ ಭಕ್ತಿ ಭಾವದಿಂದ ಪೂಜಿಸಿ ಆತನ ಪರಮ ಸಾನಿಧ್ಯ ಪಡೆದಳು.
ಗುರುವಿನ ಮಠದಾಗ ತಿರುಗಿ ಹೋದವರಾರು ಗುರುವಿನ ಮಗಳು ಗುರು ತಾಯಿ ಮಲ್ಲಮ್ಮ ಹೇಮರೆಡ್ಡೇರ ಸೊಸಿ….. ಎಂದು ನಮ್ಮ ಜನಪದರು ತಾಯಿ ಮಲ್ಲಮ್ಮನನ್ನು ಹಾಡಿ ಹೊಗಳಿದ್ದಾರೆ. ಸಂತ ಕವಿ ಶಿಶುನಾಳ ಶರೀಫರು ಮಲ್ಲಮ್ಮನ ಕುರಿತು ಗೀತೆಯನ್ನು ರಚಿಸಿದ್ದಾರೆ
ಹೇಮರೆಡ್ಡಿ ಮಲ್ಲಮ್ಮ ಇಂದಿನ ಆಂಧ್ರಪ್ರದೇಶದಲ್ಲಿರುವ ಶ್ರೀಶೈಲ ಪ್ರಾಂತದ ದಕ್ಷಿಣದಲ್ಲಿರುವ ರಾಮಪುರದ ನಾಗಿರೆಡ್ಡಿ ಮತ್ತು ಗೌರಮ್ಮ ಎಂಬ ದಂಪತಿಗಳಿಗೆ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿಯ ಆಶೀರ್ವಾದದಿಂದ ಹುಟ್ಟಿದ ಮಗಳು.
ತಂದೆ ತಾಯಿಯರ ಒಳ್ಳೆಯ ಗುಣನಡತೆ,ಗುರುಭಕ್ತಿ, ಕಾಯಕ ನಿಷ್ಠೆ ಪ್ರಾಮಾಣಿಕತೆಗಳು ಮಗಳಲ್ಲೂ ಒಡ ಮೂಡಿದವು. ಬೇರಿನಂತೆ ಮರವಲ್ಲವೇ. ಒಳ್ಳೆಯ ಸಂಸ್ಕಾರವಂತೆಯಾಗಿ ಬೆಳೆದ ಮಲ್ಲಮ್ಮ ಪ್ರಾಪ್ತ ವಯಸ್ಕಳಾದಾಗ ಆಕೆಯನ್ನು ಹತ್ತಿರದಲ್ಲಿಯೇ ಇದ್ದ ಕುಮಾರಗಿರಿ ಬಳಿಯ ವೆಂಕಟರೆಡ್ಡಿ ಅವರ ಮಗ ಭರಮಗೌಡನಿಗೆ ಕೊಟ್ಟು ಮದುವೆ ಮಾಡಲಾಯಿತು. ಭರಮಗೌಡ ಕೊಂಚ ಮಂದ ಬುದ್ಧಿಯವನು. ಬಹಳ ಮುಗ್ಧ ಮತ್ತು ಹೇಳಿದ್ದನ್ನು ಮಾತ್ರ ಅನುಸರಿಸುವ ಸಾಧು ಬುದ್ಧಿಯವನು. ಆದರೆ ಮಲ್ಲಮ್ಮ ಎದೆಗುಂದಲಿಲ್ಲ… ಗಂಡ ಹೇಗೇ ಇದ್ದರೂ ಪತಿಯೇ ಪರದೈವ ಎಂಬಂತೆ ಆತನ ಸೇವೆಯನ್ನು ಮಾಡುತ್ತಿದ್ದಳು.
ಹೊಸದಾಗಿ ಬಂದಾಗ ಮನೆಯಲ್ಲಿ ಅತ್ತೆ, ಮಾವ, ಭಾವ, ಓರಗಿತ್ತಿಯರು, ನಾದಿನಿಯರು ಮತ್ತು ಅವರ ಗಂಡಂದಿರು ಹೀಗೆ ತುಂಬು ಸಂಸಾರ. ಮಲ್ಲಮ್ಮನ ಸಾತ್ವಿಕ ಮತ್ತು ಎಲ್ಲದಕ್ಕೂ ಹೂಗುಡುವ ಗುಣವನ್ನು ಕಂಡ ಓರಗಿತ್ತಿಯರು ಮತ್ತು ನಾದಿನಿಯರು ತಮ್ಮೆಲ್ಲಾ ಕೆಲಸಗಳನ್ನು ಆಕೆಯ ಮೇಲೆ ಹೇರಿ ಆರಾಮವಾಗಿ ಕಾಲ ಕಳೆಯುತ್ತಿದ್ದರು. ಮಲ್ಲಮ್ಮ ಕೊಂಚವೂ ಬೇಸರಿಸದೇ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದಳು. ಅಷ್ಟೆಲ್ಲ ಕೆಲಸ ಮಾಡಿ ಮುಗಿಸುವ ಮಲ್ಲಮ್ಮನಿಗೆ ಒಳ್ಳೆಯ ಆಹಾರವನ್ನು ಕೂಡ ಕೊಡುತ್ತಿರಲಿಲ್ಲ.
ಎಲ್ಲರೂ ಊಟ ಮಾಡಿದ ಮೇಲೆ ಉಳಿದ ಹೊತ್ತಿದ ಅಂಬಲಿ ಆಕೆಯ ಆಹಾರವಾಗಿರುತ್ತಿತ್ತು. ಇದು ಕೂಡ ಭಗವಂತನ ಕೃಪೆ ಎಂದು ಭಾವಿಸುವ ಮಲ್ಲಮ್ಮ ತನ್ನ ಪಾಲಿಗೆ ಬಂದ ಅಂಬಲಿಯನ್ನೇ ಲಿಂಗ ಪೂಜೆ ಮಾಡಿ ದೇವರಿಗೆ ನೈವೇದ್ಯ ಮಾಡಿ ಸೇವಿಸುತ್ತಿದ್ದಳು.
ಮನೆಯಲ್ಲಿ ಚೀಲಗಟ್ಟಲೆ ಜೋಳ, ಜೋಳದ ನುಚ್ಚುಗಳನ್ನು, ಕುಟ್ಟುವ, ಬೀಸುವ ಕಲ್ಲಿನಲ್ಲಿ ಬೀಸಲು ಹಚ್ಚುತ್ತಿದ್ದರು ಅತ್ತೆ. ಮಲ್ಲಮ್ಮನಿಗೆ ಆಕೆಯ ನೆಗೆಣ್ಣೀರು ತಮ್ಮ ಕೆಲಸಗಳನ್ನು ಕೂಡ ವಹಿಸಿ ಹೊರಟುಬಿಡುತ್ತಿದ್ದರು. ಕೊಂಚವೂ ಬೇಸರಿಸದೇ ಮಲ್ಲಮ್ಮ ತನ್ನ ಪಾಲಿನ ಬಂದ ಎಲ್ಲ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದಳು.
ಆಕೆಯನ್ನು ಪರೀಕ್ಷಿಸಲೆಂದೇ ಮನೆಯಲ್ಲಿ ಸಾಕಷ್ಟು ಆಳುಗಳಿದ್ದೂ ಕೂಡ ಆಕೆಯನ್ನು ಹಸುಗಳನ್ನು ಮೇಯಿಸಿಕೊಂಡು ಬರಲು ಅಡವಿಗೆ ಕಳುಹಿಸುತ್ತಿದ್ದರು. ಅಲ್ಲಿಯೂ ಕೂಡ ಮಲ್ಲಮ್ಮ ಹಸುಗಳನ್ನು ಹೊಡೆದುಕೊಂಡು ಅಡವಿಗೆ ಹೋಗಿ ಹಸುಗಳನ್ನು ಮೇಯಲು ಬಿಟ್ಟು, ಅಲ್ಲಿ ಅಡವಿಯಲ್ಲಿ ಸಿಕ್ಕ ಶಿವಲಿಂಗಕ್ಕೆ ಪೂಜೆ ಮಾಡಿ ಧ್ಯಾನಕ್ಕೆ ಕೂರುತ್ತಿದ್ದಳು. ಆಕೆಯ ಧ್ಯಾನ ಅದೆಷ್ಟು ಸಶಕ್ತವಾಗಿರುತ್ತಿತ್ತೆಂದರೆ ಹಸುಗಳು ಕೂಡ ಆಕೆಗೆ ಧ್ಯಾನಭಂಗ ಮಾಡದೆ ಅಲ್ಲಿಯೇ ಮೇಯುತ್ತಿದ್ದವು. ಇಲ್ಲವೇ ಮರದ ನೆರಳಿನಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದವು.
ಒಂದೊಮ್ಮೆ ಮಲ್ಲಮ್ಮ ಮನೆಗೆ ಬಂದ ಭಿಕ್ಷುಕನಿಗೆ ನೀಡಲು ತನ್ನ ಬೊಗಸೆಯಲ್ಲಿ ಅತ್ತೆ ಹಾಕಿದ ಒಲೆಯೊಳಗೆ ಉರಿಯುತ್ತಿದ್ದ ನಿಗಿನಿಗಿ ಕೆಂಡಗಳನ್ನು ಮಲ್ಲಯ್ಯನ ಧ್ಯಾನ ಮಾಡಿ ಭಿಕ್ಷುಕನ ಜೋಳಿಗೆಗೆ ಹಾಕಿದಾಗ ಅದು ಧಾನ್ಯವಾಗಿ ಪರಿವರ್ತನೆಯಾಯಿತು. ಇದನ್ನು ಕಂಡು ಜನರು ಮಲ್ಲಮ್ಮನಿಗೆ ಬೆಂಕಿ ದಾನದ ಮಲ್ಲಮ್ಮ ಎಂದು ಕರೆದರು.
ಮನೆಯವರೆಲ್ಲರ ಅತಿಯಾದ ಮೋಹದಿಂದ ಕೆಟ್ಟು ಹೋಗಿದ್ದ ಮೈದುನ ವೇಮನ ಮಹಾಕವಿಯಾಗಿ ರೆಡ್ಡಿ ಕುಲದ ಉದ್ಧಾರಕನಾಗಿ ಬದಲಾಗಿದ್ದು ಮಲ್ಲಮ್ಮನಿಂದಲೇ. ಹಲವಾರು ದುಶ್ಚಟಗಳನ್ನು ಕಲಿತ ಮೈದುನ ವೇಶ್ಯೆಯ ಸಹವಾಸವನ್ನು ಕೂಡ ಮಾಡಿದ್ದ. ಒಂದೊಮ್ಮೆ ದೇವಸ್ಥಾನದಲ್ಲಿ ಮಲ್ಲಮ್ಮನ ಮೂಗುತಿಯನ್ನು ಕಂಡು ಅದಕ್ಕೆ ಆಸೆ ಪಟ್ಟ ಆ ವೇಶ್ಯಾ ಸ್ತ್ರಿಯ ಅಪೇಕ್ಷೆಯಂತೆ ವೇಮನ ಮಲ್ಲಮ್ಮನ ಬಳಿ ಆ ಮೂಗುತಿಯನ್ನು ಕೇಳಿದ. ಮಲ್ಲಮ್ಮ ಇದು ನನ್ನ ತವರು ಮನೆಯಿಂದ ಬಂದ ಉಡುಗೊರೆ ಆದರೂ ನಿನಗೆ ಒಂದು ಷರತ್ತಿನ ಮೇಲೆ ಇದನ್ನು ಕೊಡುತ್ತೇನೆ ಎಂದು ಹೇಳಿ, ಆ ಮೂಗುತಿಯನ್ನು ನೆಲದ ಮೇಲೆ ಇಟ್ಟು ಸಂಪೂರ್ಣ ನಿರ್ವಾಣ ಸ್ಥಿತಿಯಲ್ಲಿ ಹಿಂದೆ ಬಾಗಿ ಆ ವೇಶ್ಯ ಸ್ತ್ರೀಯು ಮೂಗುತಿಯನ್ನು ತೆಗೆದುಕೊಳ್ಳಬೇಕು ಮತ್ತು ಆ ದೃಶ್ಯವನ್ನೇ ವೇಮನ ತದೇಕಚಿತನಾಗಿ ನೋಡಲೇಬೇಕು ಎಂಬುದು ಆಕೆಯ ಷರತ್ತು. ಇದಕ್ಕೊಪ್ಪಿದ ವೇಮನ ಮೂಗುತಿಯನ್ನು ಅತ್ತಿಗೆಯಿಂದ ಪಡೆದು ವೇಶ್ಯಾ ಬಳಿ ಸಾರಿ ಅತ್ತಿಗೆಯ ಷರತ್ತನ್ನು ಹೇಳಿದ. ಅದನ್ನು ಕೇಳಿದ ಆಕೆ ತಕ್ಷಣವೇ ಶರತ್ತಿಗೆ ಒಪ್ಪಿ ನಿರ್ವಾಣ ಸ್ಥಿತಿಯಲ್ಲಿ ಮೂಗುತಿಯನ್ನು ಪಡೆದಳು. ಆಕೆಯನ್ನು ನಿರ್ವಾಣ ಸ್ಥಿತಿಯಲ್ಲಿ ನೋಡಿದ ವೇಮನ ಭಯಂಕರ ಕ್ಷೋಭೆ ವಿಕಾರಗಳಿಗೊಳಗಾಗಿ ಮಾನವನ ದೇಹ ಎಂದರೆ ಇಷ್ಟೇಯೇ ಎಂದು ಜಿಗುಪ್ಸೆಗೊಂಡು ಅಲ್ಲಿಂದ ಓಡಿ ಹೋದನು. ಜ್ಞಾನೋದಯವಾದ ನಂತರ ವೇಮನ ಅತ್ತಿಗೆಯ ಪಾದಕ್ಕೆ ಬಿದ್ದು ಕ್ಷಮೆ ಕೇಳಿ ಮುಂದೆ ಮನೆ ಬಿಟ್ಟು ಹೋಗಿ ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹಾಕವಿಯಾದ, ಸಮಾಜೋದ್ಧಾರಕನಾದ.
ಹೀಗೆ ಎಲ್ಲ ರೀತಿಯ ಕಠಿಣ ಪರೀಕ್ಷೆಗಳನ್ನು ಕಂಡ ಹೇಮರೆಡ್ಡಿ ಮಲ್ಲಮ್ಮನ ಕುರಿತು ಸಂಬಂಧಿಗಳು ಹೊರಿಸಿದ ಸಲ್ಲದ ಆರೋಪಗಳನ್ನು ಮಿಥ್ಯವೆಂದು ಸಾರಲು ಆ ಭಗವಾನ್ ಶಂಕರನೇ ಪತ್ನಿ ಸಮೇತನಾಗಿ ಬರಬೇಕಾಯಿತು. ಆಗ ಕುಟುಂಬ ಆದಿಯಾಗಿ ಹೇಮರೆಡ್ಡಿ ಮಲ್ಲಮ್ಮನನ್ನು ಊರವರೆಲ್ಲ ತಪ್ಪಿತಸ್ಥಳಲ್ಲವೆಂದು ಒಪ್ಪಿಕೊಂಡರು. ಮಲ್ಲಮ್ಮನ ಭಕ್ತಿಗೆ ಮೆಚ್ಚಿದ ಪರಶಿವನು ಆಕೆಗೆ ವರವನ್ನು ಕೇಳಲು ಹೇಳಿದಾಗ ಸಮಸ್ತ ರೆಡ್ಡಿ ಕುಲ ಎಂದೂ ಆರ್ಥಿಕ ತೊಂದರೆಯಿಂದ ಬಳಲಬಾರದು ಎಂಬ ದೃಷ್ಟಿಯಿಂದ ಮಲ್ಲಮ್ಮ ರೆಡ್ಡಿ ಕುಲದ ಜನರಿಗೆ ಬಂಗಾರದ ಕಡ್ಡಿ ಹೊಂದಿರುವಷ್ಟಾದರೂ ಶ್ರೀಮಂತಿಕೆ ಇರಲೇಬೇಕು ಎಂದು ಬೇಡಿಕೊಂಡಳು. ಆಕೆಯ ಬೇಡಿಕೆಯ ಫಲವಾಗಿ ಇಂದಿಗೂ ಸಮಸ್ತ ರೆಡ್ಡಿ ಕುಲವನ್ನು ರೆಡ್ಡಿ ಬಂಗಾರದ ಕಡ್ಡಿ ಎಂದೇ ಕರೆಯುತ್ತಾರೆ.
ಹೇಮರೆಡ್ಡಿ ಮಲ್ಲಮ್ಮ ಶತಶತಮಾನಗಳಿಂದ ರೆಡ್ಡಿ ಕುಲದೇವಿಯಾಗಿ ಎಲ್ಲರಿಂದಲೂ ಪೂಜಿಸಲ್ಪಡುತ್ತಾ ಅಜರಾಮರಳಾಗಿದ್ದಾಳೆ. ಪ್ರತಿ ವರ್ಷ ಮೇ ಹತ್ತರಂದು ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಜರುಗುತ್ತದೆ. ಮಲ್ಲಮ್ಮನು ಓಡಾಡಿದ ಶ್ರೀಶೈಲ ಪ್ರಾಂತ್ಯದಲ್ಲಿ ಅತಿ ದೊಡ್ಡ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನವನ್ನು, ಆಕೆ ವಾಸಿಸಿದ್ದಳೆನ್ನಲ್ಲಾದ ಸ್ಥಳದ ಬಳಿಯಲ್ಲಿಯೇ ರೆಡ್ಡಿ ಕುಲಬಾಂಧವರು ನಿರ್ಮಿಸಿದ್ದಾರೆ, ಮಲ್ಲಮ್ಮ ಬಳಸುತ್ತಿದ್ದ ವನಕೆ ಹೊರಳು ಕಲ್ಲು ಬೀಸುವ ಕಲ್ಲು ಪೂಜಿಸುತ್ತಿದ್ದ ಶಿವಲಿಂಗದ ವಿಗ್ರಹಗಳು ಅಲ್ಲಿ ಇದ್ದು ಹೇಮರೆಡ್ಡಿ ಮಲ್ಲಮ್ಮನಿಗೆ ಉಡಿ ತುಂಬುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ನೋಡಲು ಎರಡು ಕಣ್ಣುಗಳು ಸಾಲದು. ಬನ್ನಿ ನಾವು ಕೂಡ ಸ್ತ್ರೀ ಕುಲದ ಹೆಮ್ಮೆಯ ಕಳಶ ಮಲ್ಲಮ್ಮ ತಾಯಿಯನ್ನು ಪೂಜಿಸಿ ಆಕೆಯ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ.