

ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ
ಕುಷ್ಟಗಿ: ಚಿತ್ರದುರ್ಗದ ರೇಣುಕ ಸ್ವಾಮಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವವರ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಜಂಗಮ ಸಮಾಜ ಹಾಗೂ ತಾಲೂಕಾ ವೀರ ಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಜ್ಯದ ಮುಖ್ಯ ಮಂತ್ರಿಗಳಿಗೆ ತಹಸೀಲ್ದಾರ ಶೃತಿ ಮಳ್ಳಪ್ಪಗೌಡರ ಮೂಲಕ ಮನವಿ ಸಲ್ಲಿಸಿದರು.
ಜಂಗಮ ಸಮಾಜದ ಅಧ್ಯಕ್ಷ ಶಿವಕುಮಾರ ಗಂಧದಮಠ ಮಾತನಾಡಿ ಇತ್ತೀಚೆಗೆ ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣದ ಕಹಿ ಮರೆಯುವ ಮೊದಲೇ ಇನ್ನೊಂದು ಇಂತಹದೇ ಭೀಕರ, ಅಮಾನುಷ ಹತ್ಯೆ ಪ್ರಕರಣ ನಡೆದಿರುವುದು ನಮ್ಮ ಸಮಾಜದ ಶಾಂತಿಯನ್ನು ಕದಡಿದೆ. ರಾಜ್ಯದಲ್ಲಿ ನಮ್ಮ ಸಮುದಾಯದವರ ಮೇಲೆ ಪದೆ ಪದೆ ಹತ್ಯೆ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿರುವುದು ಖಂಡನೀಯವಾಗಿದೆ. ಚಿತ್ರದುರ್ಗದ ರೇಣುಕಸ್ವಾಮಿ ಅವರನ್ನು ಚಿತ್ರನಟ ದರ್ಶನ್ ಮತ್ತು ಆತನ ಸಹಚರರು ಬೆಂಗಳೂರಿನ ಶೆಡ್ವೊಂದರಲ್ಲಿ ಬರ್ಭರವಾಗಿ ಕೊಲೆ ಮಾಡಿ ಶವವನ್ನು ರಾಜಕಾಲುವೆಯಲ್ಲಿ ಬಿಸಾಡಿ ಹೋಗಿರುವುದು ಅಮಾನವೀಯವಾಗಿದೆ ಎಂದರು.
ರೇಣುಕಸ್ವಾಮಿಯ ವಿರುದ್ಧ ದರ್ಶನ್ ಮತ್ತು ಅವನ ಗೆಳತಿ ಪವಿತ್ರಾ ಗೌಡ ಅವರು ಪೊಲೀಸರಿಗೆ ದೂರು ನೀಡಿ ಕಾನೂನಾತ್ಮಕ ಶಿಕ್ಷೆಯನ್ನು ಕೊಡಿಸಲು ಅವಕಾಶವಿದ್ದರೂ ಸಹಿತ ತಮ್ಮ ಸಹಚರರೊಂದಿಗೆ ಕಾನೂನನ್ನು ಕೈಗೆ ತೆಗೆದುಕೊಂಡು ಅಮಾನುಷವಾಗಿ ಕೊಲೆ ಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದರು. ಸರಕಾರವು ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮೃತ ರೇಣುಕಸ್ವಾಮಿ ಕುಟುಂಬಕ್ಕೆ ಸೂಕ್ತ ಭದ್ರತೆ, ಪರಿಹಾರ ಒದಗಿಸಿ, ನ್ಯಾಯ ದೊರಕಿಸಿಕೊಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ಕ್ರಮವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರವಿಕುಮಾರ ಹಿರೇಮಠ. ದೊಡ್ಡಯ್ಯ ಗದ್ದಡಕಿ. ಮಹಾಂತಯ್ಯ ಅರಳೆಲಿಮಠ, ರಾಮಲಿಂಗಯ್ಯ ಹಿರೇಮಠ, ಶೇಖರಯ್ಯ, ಗುರುಮೂರ್ತಯ್ಯ ಹಿರೇಮಠ, ಮಂಜುನಾಥ ಚಪ್ಪನ್ನಮಠ, ಅಮರೇಶ, ಈಶ್ವರಯ್ಯ, ಬಸವರಾಜ, ಮಹಾಂತೇಶ, ಮಲ್ಲಯ್ಯ ಮ್ಯಾಗೇರಿಮಠ, ವೀರೇಶ ಕಡೇಕೊಪ್ಪ ಸೇರಿದಂತೆ ಅನೇಕರು ಇದ್ದರು.