
ಅಯೋಧ್ಯಾ ಕ್ರಾಪ್ ಅಕ್ಯಾಡೆಮಿಯಿಂದ
ರೈತರಗೆ ತಂತ್ರಜ್ಞಾನ ಹಾಗೂ ಮಾರುಕಟ್ಟೆ – ಪಾಟೀಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30- ರಾಜ್ಯ ಹಾಗೂ ಜಿಲ್ಲೆಯ ರೈತರ ಕೃಷಿ ಚಟುವಟಿಕೆಗಳಿಗೆ ಸೂಕ್ತ ತಂತ್ರಜ್ಞಾನ ನೆರವು ನೀಡುವುದು ಹಾಗೂ ಮಾರುಕಟ್ಟೆ ಕಲ್ಪಿಸಲು ಅಯೋಧ್ಯಾ ಕ್ರಾಪ್ ಅಕ್ಯಾಡೆಮಿ ಹುಟ್ಟುಹಾಕಲಾಗಿದೆ. ರೈತರನ್ನು ನೋಂದಣಿ ಮಾಡಿಕೊಂಡು ಅವರಿಂದಲೇ ಪ್ರಯೋಗಗಳನ್ನು ಮಾಡಲು ನಿರ್ಧರಿಸಿದ್ದೇವೆ ಎಂದು ಕೃಷಿ ವಿಜ್ಞಾನಿ ಹಾಗೂ ಸಂಸ್ಥೆ ಸಂಸ್ಥಾಪಕ ಡಾ.ಎಂ.ಬಿ.ಪಾಟೀಲ್ ಹೇಳಿದರು.
ರೈತರು ನಿಜವಾದ ವಿಜ್ಞಾನಿಗಳು. ಸಾಕಷ್ಟು ಶ್ರಮ ಹಾಕುತ್ತಾರೆ. ಆದರೆ, ವೈಜ್ಞಾನಿಕ ವಿಧಾನ, ಪ್ರಯೋಗಗಳು, ಮಾರುಕಟ್ಟೆ ಕಲ್ಪನೆ ಕಡಿಮೆ. ಸರ್ಕಾರ, ಕೃಷಿ ವಿವಿಗಳು ಯೋಜನೆ, ಮಾಹಿತಿ ನೀಡಿದರೂ ಈ ಬಗ್ಗೆ ನಿರಂತರ ಫಾಲೋ ಅಪ್ ಮಾಡುವುದಿಲ್ಲ. ಹೀಗಾಗಿ ಸಂಸ್ಥೆ ಹುಟ್ಟು ಹಾಕಿದ್ದೇವೆ. ಆಸಕ್ತ ರೈತರನ್ನು ಒಟ್ಟುಗೂಡಿಸಿಕೊಂಡು ಶೇಂಗಾ, ಕಡಲೆ, ಈರುಳ್ಳಿ, ಮೆಣಸಿನ ಕಾಯಿ ಬೆಳೆಗಳನ್ನು ಆಯ್ದುಕೊಂಡ ಪ್ರಯೋಗ ಮಾಡಲು ಮುಂದಾಗಿದ್ದೇವೆ. ಬೀಜ ಆಯ್ಕೆಯಿಂದ ಹಿಡಿದು, ಮಾರುಕಟ್ಟೆ ಕಲ್ಪಿಸುವವರೆಗ ನಾವೇ ನೆರವು ನೀಡುತ್ತೇವೆ. ವೈಜ್ಞಾನಿಕ ವಿಧಾನ, ಖರ್ಚು ಕಡಿಮೆ ಮಾಡುವುದು, ಮೂಲ ತಳಿಗಳನ್ನು ಉಳಿಸಿಕೊಳ್ಳುವಿಕೆ, ಗುಣಮಟ್ಟ ಕಾಯ್ದುಕೊಳ್ಳುವಿಕೆಗೆ ಆದ್ಯತೆ ನೀಡಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸದ್ಯಕ್ಕೆ ರೈತರಿಂದ ಯಾವುದೇ ಹಣ ಪಡೆಯುತ್ತಿಲ್ಲ. ಅವರನ್ನೇ ಒಳಗೊಂಡು ಗುಂಪುಗಳನ್ನು ರಚಿಸಲಾಗುವುದು. ನ.1ರಂದು ಅಕ್ಯಾಡೆಮಿ ಉದ್ಘಾಟನೆ ಕಾರ್ಯಕ್ರಮವಿದೆ. ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸುವರು. ನಿವೃತ್ತ ಐಎಎಸ್ ಅಧಿಕಾರಿ ಡಾ. ಅಶೋಕ ದಳವಾಯಿ ಕಾರ್ಯಕ್ರಮ ಉದ್ಘಾಟಿಸುವರು. ಬಸವರಾಜ ಪಾಟೀಲ್ ಸೇಡಂ, ಮನೋಹರ ಮಸ್ಕಿ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು, ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು ಭಾಗಿಯಾಗುವರು ಎಂದರು. ಸಂಸ್ಥೆ ಸಹ ಸಂಸ್ಥಾಪಕರಾದ ವಿಜಯಮಹಾಂತೇಶ ಬಳಿಗಾರ, ಮಲ್ಲಿಕಾರ್ಜುನ ಬಳಿಗಾರ ಇದ್ದರು.