
ಲೋಕಸಭಾ ಚುನಾವಣೆ : ಬಹಿರಂಗ ಪ್ರಚಾರ ಅವಧಿ ಮುಕ್ತಾಯ
ಕರುನಾಡ ಬೆಳಗು ಸುದ್ದಿ
ವಿಜಯನಗರ, 5- ಮತದಾನದ 48 ಗಂಟೆ ಪೂರ್ವದಲ್ಲಿ ಅಂದರೆ ಮೇ 05ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರದ ಅವಧಿ ಮುಕ್ತಾಯವಾಗಿದ್ದು, ಈ ಸಮಯದಲ್ಲಿ ಅಭ್ಯರ್ಥಿಗಳು ಗರಿಷ್ಠ 05 ಜನ ಮೀರದಂತೆ ಮನೆಮನೆಗೆ ತೆರಳಿ ಮತಯಾಚನೆ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
ಪ್ರಜಾ ಪ್ರಾತಿನಿಧ್ಯಕಾಯ್ದೆ 1951 ಕಲಂ 126ರನ್ವಯ ಬಹಿರಂಗ ಪ್ರಚಾರದ ಅವಧಿ ಮುಕ್ತಾಯಗೊಂಡ ನಂತರ ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ಹೆಚ್ಚಿಸಲು ಹೊರಗಿನಿಂದ ಕರೆತಂದಿರುವ ಈ ಕ್ಷೇತ್ರದ ಮತದಾರರಲ್ಲದೇ ಇರುವ ಬೆಂಬಲಿಗರು, ರಾಜಕೀಯ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರು, ಮೆರವಣಿಗೆ ಪದಾಧಿಕಾರಿಗಳು, ಪ್ರಚಾರ ಕಾರ್ಯಕರ್ತರು ಇತ್ಯಾದಿಯವರು ಈ ಕ್ಷೇತ್ರದಲ್ಲಿ ಉಪಸ್ಥಿತರಿರುವಂತಿಲ್ಲ.
ಈ ಬಗ್ಗೆ ನಿಗಾವಹಿಸಲು ಮಾದರಿ ನೀತಿ ಸಂಹಿತೆ ತಂಡಗಳಿಂದ ಕ್ಷೇತ್ರದಲ್ಲಿನ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ವಸತಿ ಗೃಹಗಳು, ಅತಿಥಿ ಗೃಹಗಳು ಹಾಗೂ ಲಾಡ್ಜಗಳ ಪರಿಶೀಲನೆಯನ್ನು ಕೈಗೊಳ್ಳಲಾಗುತ್ತದೆ.
ಕ್ಷೇತ್ರದ ಗಡಿಗಳಲ್ಲಿನ ಚೆಕ್‌ಪೋಸ್ಟಗಳಲ್ಲಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳನ್ನು ಪರಿಶೀಲಿಸಿ ಅವರು ಈ ಕ್ಷೇತ್ರದ ಮತದಾರರೇ ಎಂಬುದರ ಬಗ್ಗೆ ಕಂಡು ಹಿಡಿಯಲು ಅವರ ಗುರುತಿನ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.