
ವಕೀಲರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ಸಂರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ ),೦೬- ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಹಾಗೂ ಚಿಕ್ಕಮಗಳೂರು ವಕೀಲ ಪ್ರೀತಂ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ನಗರದ ಹೊಸಪೇಟೆ ವಕೀಲರ ಸಂಘದಿಂದ ಬುಧವಾರ ಪ್ರತಿಭಟನೆ ಮಾಡಲಾಯಿತು.
ನಗರದ ನ್ಯಾಯಾಲಯದ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪುನಿತ್ ರಾಜಕುಮಾರ ವೃತ್ತದಿಂದ ತಹಶೀಲ್ದಾರರ ಕಚೇರಿವರೆಗೆ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಎ.ಕರುಣಾನಿಧಿ ಮಾತನಾಡಿ, ರಾಜ್ಯ ಸರಕಾರ 6ನೇ ಗ್ಯಾರಂಟಿಯಾಗಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಘೋಷಣೆ ಮಾಡಿದ ಪ್ರಕಾರ ಕೂಡಲೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಹಾಗೂ ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಅವರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ್ದು ಖಂಡನೀಯವಾಗಿದೆ. ಕೂಡಲೇ ಹಲ್ಲೆ ಮಾಡಿದ ಪೊಲೀಸರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ನಂತರ ಸಂಘದ ಅಧ್ಯಕ್ಷ ಕೆ.ವಿ.ಬಸವರಾಜ ಮನವಿ ಪತ್ರ ಓದಿ ತಹಸೀಲ್ದಾರ್ ಮೆಹತಾ ಅವರಿಗೆ ಸಲ್ಲಿಸಿದರು. ಮನವಿ ಪತ್ರದಲ್ಲಿ ಕಳೆದ ವಾರ ಚಿಕ್ಕಮಂಗಳೂರಿನಲ್ಲಿ ಹೆಲ್ಮೇಟ್ ಧರಿಸುವ ವಿಚಾರದಲ್ಲಿ ವಕೀಲ ಪ್ರೀತಂ ಎಂಬುವವರ ಮೇಲೆ ಪೋಲೀಸರು ತೀವ್ರವಾಗಿ ಹಲ್ಲೆ ನಡೆಸಿರುವುದನ್ನು ಹೊಸಪೇಟೆ ವಕಿಲರ ಸಂಘವು ತೀವ್ರವಾಗಿ ಖಂಡಿಸುತ್ತದೆ.
ಚಿಕ್ಕಮಂಗಳೂರಿನಲ್ಲಿ 19 ವಕೀಲರ ಮೇಲೆ ವಿನಾಕಾರಣ ಸುಳ್ಳು ಮೊಕದ್ದಮೆಗಳನ್ನು ಹಾಕಿರುವುದು ಪೋಲೀಸ್ ಅಧಿಕಾರದ ದುರುಪಯೋಗವಾಗಿದೆ. ಸ್ವಾತಂತ್ರ ಚಳುವಳಿಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ವಕೀಲ ಸಮುದಾಯವನ್ನು ಪೋಲೀಸರು ನಡೆಸಿಕೊಳ್ಳುವ ರೀತಿಯನ್ನು ಗಮನಿಸಿದರೆ ನಿಜಕ್ಕೂಆಶ್ಚರ್ಯವೆನಿಸುತ್ತದೆ. ಸಾಂವಿಧಾನಿಕ ಹಕ್ಕುಗಳು ಮತ್ತು ಕಾನೂನಿನ ಅಧಿಕಾರದ ನಿರ್ವಹಣೆಯಲ್ಲಿ ಸಂಯೋಜನೆಯ ಕೊರತೆಯುಂಟಾದಾಗ ಇಂತಹ ಘಟನೆಗಳು ಜರುಗುತ್ತವೆ. ಈ ಹಿನ್ನೆಲೆಯಲ್ಲಿ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿದೆ.
ಬೇಡಿಕೆಗಳು: ಚಿಕ್ಕ ಮಂಗಳೂರಿನಲ್ಲಿ ವಕೀಲ ಪ್ರೀತಂ ಕುಮಾರ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ನ್ಯಾಯಾಂಗದ ಸುಪರ್ದಿಯಲ್ಲಿ ತನಿಖೆ ನಡೆಸುವಂತೆ ಕ್ರಮ ವಹಿಸಬೇಕು ಮತ್ತು ಹಲ್ಲೆ ಮಾಡಿದ ಪೋಲೀಸರನ್ನು ಕೂಡಲೇ ಬಂಧಿಸಬೇಕು. ಚಿಕ್ಕ ಮಂಗಳೂರಿನ ವಕೀಲರ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು. ಗೃಹ ಸಚಿವರು ಈ ಕುರಿತಂತೆ ಸದನದಲ್ಲಿ ಹೇಳಿಕೆಯನ್ನು ನೀಡಬೇಕು ಹಾಗೂ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಈಗ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿಯೇ ಮಂಡನೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಎಸ್. ವಿ.ಜವಳಿ, ಕೆ.ಖಾಸಿಂ ಅಲಿ, ಎಚ್.ಎಸ್.ದಿವಾಕರ, ಮಕ್ಬೂಲ್ ಬಾಷಾ, ಡಿ.ವೀರನಗೌಡ, ತಾರಿಹಳ್ಳಿ ಹನುಮಂತಪ್ಪ, ಈ ಪುಷ್ಪಲತಾ, ಆರ್.ಎಂ.ಬಡಿಗೇರ, ಪಿ.ಶ್ರೀನಿವಾಸಮೂರ್ತಿ, ಎ.ಮರಿಯಪ್ಪ, ರಮೇಶಗೌಡ, ಎಚ್.ಮಹೇಶ್, ಪಿ.ನಾಗಭೂಷಣ, ಎಸ್.ಲೊಕೇಶಬಾಬು, ಸುರಭಿದುರ್ಗಾ,
ಮಹ್ಮದ್ ಹನೀಫ್, ವಕೀಲರಾದ ಯು.ಗೋಪಾಲ, ನೂರಬಾಷಾ, ದೆವೇಂದ್ರ, ಸದ್ದಾಂ ಹುಸೇನ್ ನೀಲಕಂಠ, ಮಹಾರಾಜ ರವಿ, ಮಂಜುನಾಥ, ಸಲೀಂ, ಮೌಲಾ ಟೆಂಗುಂಟಿ, ಎನ್.ಎಂ.ಸೌದಾಗರ್ ಮತ್ತಿತರರು ಇದ್ದರು.