
ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ಜಿಲ್ಲಾ ಪಂಚಾಯತಿಯಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಮಾರ್ಚ್-15 ರಿಂದ ಮೇ-31ರವರೆಗೆ ಹಮ್ಮಿಕೊಳ್ಳಲಾಗಿರುವ ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನದ ಐಇಸಿ ಕಾರ್ಯಕ್ರಮವನ್ನು ಏಪ್ರಿಲ್ 02 ರಂದು ಕೊಪ್ಪಳ ತಾಲೂಕಿನ ವನಬಳ್ಳಾರಿ ಗ್ರಾಮ ಪಂಚಾಯತಿಯ ಜಿನ್ನಾಪುರ ಚಿಕ್ಕತಾಂಡಾ ಹಾಗೂ ದೊಡ್ಡ ತಾಂಡಾದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿದ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಬರಗಾಲ ಇರುವುದರಿಂದ ಕೂಲಿ ಬಯಸಿ ಬೇರೆ ಕಡೆಗೆ ಗುಳೆ ಹೋಗುವುದನ್ನು ತಡೆದು ಸ್ಥಳೀಯವಾಗಿ ನಿರಂತರವಾಗಿ 60 ದಿನಗಳ ಕೂಲಿ ಕೆಲಸ ನೀಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಆಯುಕ್ತಾಲಯವು ಈ ಅಭಿಯಾನವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜರುಗಿಸುವಂತೆ ನಿರ್ದೇಶನ ನೀಡಿದೆ.
ಬೇಸಿಗೆ ಇರುವುದರಿಂದ ಕೂಲಿಕಾರರಿಗೆ ಕೃಷಿ ಚಟುವಟಿಕೆಗಳಲ್ಲಿ ಕೆಲಸ ನಿರ್ವಹಿಸಲು ಯಾವುದೇ ರೀತಿಯ ಕೆಲಸ ಇರುವುದಿಲ್ಲ. ಇದರಿಂದ ಕೆಲಸಕ್ಕಾಗಿ ಗುಳೆ ಹೋಗುವುದನ್ನು ನಿಯಂತ್ರಿಸಬಹುದಾಗಿದೆ. ಒಂದು ಕುಟುಂಬಕ್ಕೆ 100 ದಿನಗಳ ಕೂಲಿ ಕೆಲಸ ನೀಡಲಾಗುತ್ತಿದ್ದು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಪ್ರತಿಯೊಂದು ಕುಟುಂಬ 60 ದಿನಗಳನ್ನು ಪೂರೈಸಬೇಕೆನ್ನುವ ಉದ್ದೇಶ ಹೊಂದಿದೆ. ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಿಯಾಯಿತಿ ನೀಡಿದೆ. ಪ್ರತಿ ಸಾಮುದಾಯಿಕ ಕಾಮಗಾರಿಯಲ್ಲಿ ಶೇ.60ರಷ್ಟು ಮಹಿಳೆಯರು ಕಾಮಗಾರಿ ನಿರ್ವಹಿಸುತ್ತಿದ್ದಲ್ಲಿ ಶೇ.10ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೆಲಸ, ಸಮಾನ ಕೂಲಿ ಪಾವತಿಸಲಾಗುತ್ತದೆ. ಕೆಲಸದ ಅಳತೆಗನುಗುಣವಾಗಿ ಕೂಲಿ ಪಾವತಿಸಲಾಗುತ್ತಿದ್ದು ಎಲ್ಲಾ ಕೂಲಿಕಾರರು ಹಾಲಿ ಇರುವ ರೂ.349/-ಕ್ಕೆ ನಿರ್ಧರಿಸಿದಂತೆ ಕೆಲಸವನ್ನು ನಿರ್ವಹಿಸಿ ಪೂರ್ತಿ ಪ್ರಮಾಣದಲ್ಲಿ ಕೂಲಿ ಪಡೆಯಬೇಕೆಂದರು.
ಮಹಿಳಾ ಭಾಗವಹಿಸುವಿಕೆ ಹೆಚ್ಚಳಕ್ಕೆ ಪ್ರೋತ್ಸಾಹಿಸಲು ಮಹಿಳಾ ಕಾಯಕ ಬಂಧುಗಳ ನೇಮಕವಾಗಲು ಪ್ರತಿ ಪುರುಷ ಕಾಯಕ ಬಂಧುವಿಗೆ ರೂ.4/- ಹಾಗೂ ಮಹಿಳಾ ಕಾಯಕ ಬಂಧುವಿಗೆ ರೂ.5/-ಪಾವತಿಸಲಾಗುತ್ತದೆ. ಬೇಸಿಗೆ ನಿಮಿತ್ಯ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಿಗೆ ಆದ್ಯತೆ ನೀಡಿರುವುದರಿಂದ ಈ ಕಾಮಗಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಕೆಲಸಕ್ಕೆ ಹಾಜರಾಗಬೇಕೆಂದು. ಮಹಾತ್ಮಾ ಗಾಂಧಿ ನರೇಗಾದಡಿ ವೈಯಕ್ತಿಕ ಕಾಮಗಾರಿಗಳಾದ ಜಾನುವಾರು ಶೆಡ್, ಮೇಕೆಶೆಡ್, ಕೃಷಿಹೊಂಡ, ಕೋಳಿಶೆಡ್, ಹಂದಿಶೆಡ್, ಬದು ನಿರ್ಮಾಣ ಕಾಮಗಾರಿ ಅನುಷ್ಠಾನಿಸಲು ಅವಕಾಶ ಇರುತ್ತದೆ.
ಜಮೀನು ಸ್ಥಳಾವಕಾಶ ಇಲ್ಲದವರು ಸಾಮೂಹಿಕ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸಿ ಯೋಜನೆಯಡಿ ಕೂಲಿ ಹಣವನ್ನು ಪಡೆಯಬಹುದಾಗಿದೆ. ಬರಗಾಲ ಇರವುದರಿಂದ ಕೂಲಿಕಾರರು 60 ದಿನಗಳ ಕಾಲ ಕೂಲಿ ಕೆಲಸ ನಿರ್ವಹಿಸಿದಲ್ಲಿ ರೂ.20,940/- ಕೂಲಿ ಹಣ ದೊರೆಯುತ್ತದೆ. ಬಿತ್ತನೆಯ ಸಮಯದಲ್ಲಿ, ಮಕ್ಕಳ ಶಾಲಾ ಶಿಕ್ಷಣ ಉದ್ದೇಶಕ್ಕಾಗಿ ಬಳಕೆಗೆ ಸಹಕಾರಿಯಾಗುತ್ತದೆ ಎಂದರು.
ನಂತರ ಕೂಲಿಕಾರರಿಗೆ ಲೋಕಸಭಾ ಚುನಾವಣೆಯ ಮತದಾನ ಜಾಗೃತಿಯ ಸ್ವೀಪ್ ಕಾರ್ಯಕ್ರಮ ಜರುಗಿತು. ಮೇ-7ರಂದು ಲೋಕಸಭಾ ಚುನಾವಣೆ ಜರುಗಲಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ಪ್ರತಿ ಮತ, ದೇಶದ ಅಭಿವೃದ್ದಿಗೆ ಹಿತ, ಅರಿತುಕೊಂಡು ನಾವೆಲ್ಲರೂ ಮತ ಚಲಾವಣೆಯಲ್ಲಿ ಭಾಗವಹಿಸೋಣ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಶ್ರೀಶೈಲಪ್ಪ, ಗಣಕಯಂತ್ರ ನಿರ್ವಾಹಕ ಬಸವರಾಜ ಕುರಿ, ಗ್ರಾಮ ಕಾಯಕ ಮಿತ್ರ ಸುನಿತಾ ಸಂಗಳದ, ನರೇಗಾ ಸಹಾಯಕ ಶಾಂತಪ್ಪ ಮ್ಯಾದನೇರಿ, ತಾಂಡಾದ ಗೋವಿಂದಪ್ಪ, ಗಂಗಾಧರ ಪೂಜಾರ ಸೇರಿದಂತೆ, ತಾಂಡಾದ ಮಹಿಳಾ ಕೂಲಿಕಾರರು ಭಾಗವಹಿಸಿದ್ದರು.