
ವಿಠಲ ಕೃಷ್ಣಾಂಗಣದಿ ವಸಂತ ಕುಷ್ಟಗಿ -86 ಸಾಧನಾ ಹಬ್ಬ
‘ ಕೃಷ್ಣನೇ ವಸಂತ ‘ – ಶ್ರೀ ಹರಿದಾಸ ವಸಂತ ರತ್ನ ಸಮ್ಮಾನ್ ಕೃಷ್ಣನಿಗೆ ಅರ್ಪಣೆ :ಪ್ರಮೋದಾಚಾರ್ಯ ಪೂಜಾರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29 – ಹರಿದಾಸ ಸಾಹಿತ್ಯ ಕನ್ನಡ ಸಾಹಿತ್ಯ ಲೋಕದ ಪರಮುಖ ಪ್ರಾಕಾರ. ಹರಿದಾಸರ ಚಿಂತನೆಗಳ ಭಕ್ತಿ ಸಾಹಿತ್ಯದ ಪ್ರಸಾರ, ಪ್ರಚಾರ ಮಾತ್ರವಲ್ಲ, ದಾಸರ ಆಶಯಗಳನ್ನು ಅರಿತು ಅನುಭವಿಸುತ್ತಾ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮಹತ್ವದ ಸಂಕಲ್ಪ. ನಮ್ಮೆಲ್ಲರ ಸ್ನೇಹದ ನಿಲುಕಿನಲ್ಲಿದ್ದ ಹಿರಿಯ ಸಾಹಿತಿ ವಸಂತ ಕುಷ್ಟಗಿ ಈ ಎಲ್ಲ ಚಿಂತನೆಗಳನ್ನು ತಮ್ಮ ನಿತ್ಯ ಬದುಕಿನಲ್ಲಿ ಅನುಷ್ಠಾನ ಮಾಡಿದವರು ಎಂದು ಕೊಪ್ಪಳ ರಾಯರ ಮಠದ ಪ್ರಧಾನ ಅರ್ಚಕರು ಪಂಡಿತ್ ಶ್ರೀ ರಘು ಪ್ರೇಮಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಅವರು ಕೊಪ್ಪಳದ ಶ್ರೀ ವಿಠ್ಠಲ ಕೃಷ್ಣ ಮಂದಿರದಲ್ಲಿ ” ನುಡಿಸಿರಿ ಆಚಾರ್ಯ ವಸಂತ ಕುಷ್ಟಗಿ ಪ್ರತಿಷ್ಠಾನ, ಕಲಬುರಗಿ ” ಏರ್ಪಡಿಸಿದ್ದ 2ನೇ ವರ್ಷದ ‘ ವಸಂತರ 86 ನೇ ಸಾಧನ ಹಬ್ಬ – ಸಾಧ್ವಿ ಐದೇತೆ ಶ್ರೀಮತಿ ಶಕುಂತಲಾ ವಸಂತ ಕುಷ್ಟಗಿ ಸ್ಮರಣೆಯಲ್ಲಿ ನೀಡಲಾಗುವ ‘ ಶ್ರೀ ಹರಿದಾಸ ಶಿರಿಬಾಗಿಣ ಹಾಗೂ ‘ ಶ್ರೀ ಹರಿದಾಸ ವಸಂತ ರತ್ನ ಸಮ್ಮಾನ್-2 ‘ ಪ್ರಶಸ್ತಿ ಪ್ರದಾನ, ಉಪನ್ಯಾಸ ಮತ್ತು ಹರಿಕೀರ್ತನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನಮಾಡಿ, ಆಶೀರ್ವಚನನೀಡಿ ಮಾತನಾಡಿದರು. ಹೈದರಾಬಾದ ಕರ್ನಾಟಕದಲ್ಲಿ ಆಗ ರಜಾಕರ ಹಾವಳಿ ಅದರ ವಿರುದ್ಧ ಸೆಟೆದು ನಿಂತ ಭಾರತೀಯರು ಹಿಂದೂಸ್ಥಾನದಲ್ಲಿ ವಿಲೀನಗೊಳ್ಳಲು ಹೋರಾಟಕ್ಕಿಳಿದಿದ್ದರು. ಅದು ಮುದ್ರಣ ವ್ಯವಸ್ಥೆಯೇ ಇಲ್ಲದ ಸಂದರ್ಭ. ಆ ಕಾಲಘಟ್ಟದಲ್ಲಿ ವಸಂತರು ಬಾಲ್ಯಾವಸ್ಥೆಯ ಹುಡುಗ. ಎಲ್ಲರಲ್ಲೂ ರಾಷ್ಟ್ರದ ಬಗ್ಗೆ ಪ್ರೇಮವನ್ನು ತುಂಬುವ ಲೇಖನಗಳನ್ನು ರಚಿಸಿ, ಸಂಗ್ರಹಿಸಿ ಕೈಬರಹದಲ್ಲಿ
‘ ಉದಯ ‘ ಪತ್ರಿಕೆಯನ್ನು ಸಿದ್ಧಪಡಿಸಿ, ಬಾನಂಚಲ್ಲಿ ಕಪ್ಪು ಸರಿದು ಬೆಳಕು ಹರಿಯುವ ಮೊದಲು ಈ ಪತ್ರಿಕೆಯನ್ನು ಮುಟ್ಟಿಸುತ್ತಿದ್ದರು. ಈ ಸಂಕಲ್ಪ ರಾಷ್ಟ್ರದ ಬಗ್ಗೆ ಅವರಲ್ಲಿದ್ದ ಅಪಾರ ಪ್ರೇಮವನ್ನು ಬಿಂಬಿಸುತ್ತದೆ. ರಾಷ್ಟ್ರ,ಸನಾತನ, ಆಧ್ಯಾತ್ಮ, ಸಾಹಿತ್ಯ,ಭಾಷೆ, ಸಾಮಾಜಿಕ ನ್ಯಾಯ ಎಲ್ಲಾ ಆಯಾಮಗಳಲ್ಲಿ ಅವರ ಬರಹ ಹಾಗೂ ಉಪನ್ಯಾಸಗಳು ಭಕ್ತಿಯ ಸೆಲೆಯಾಗಿ ಮೂಡಿಬಂದಿವೆ. ಅವರ ನಂಟಿಗೆ ಜೋಡಿಕೊಂಡ ಪ್ರತಿ ಭಾರತೀಯಲ್ಲಿ ಕ್ರಾಂತಿಕಾರಿ ಸಂಕಲ್ಪವನ್ನು ನೀಡುತ್ತಿದ್ದವು. ಈ ಎಲ್ಲ ನೆಲೆಯಿಂದ ಅವರೊಬ್ಬ ರಾಷ್ಟ್ರ ಕಟ್ಟುವ ಮಹಾನ್ ಚೇತನರು ಎಂದೇ ಉಲ್ಲೇಖಿಸಬೇಕಾಗುತ್ತದೆ ಎಂದು ಆಚಾರ್ಯರು ವಿಶ್ಲೇಷಿಸಿದರು.
ಶ್ರೀ ಹರಿದಾಸರ ಬಗ್ಗೆ ವಿಶೇಷ ಒಲವು ಹೊಂದಿದ್ದ ವಸಂತ ಕುಷ್ಟಗಿ ಹರಿದಾಸ ಸಾಹಿತ್ಯದ ಪ್ರಾಮಾಣಿಕ ವಿದ್ಯಾರ್ಥಿಯಾಗಿದ್ದರು.ಅಂತೆಯೇ ಅವರಿಂದ ಅನೇಕ ಸಂಶೋಧನಾತ್ಮ ಕೃತಿಗಳು ಈ ಕ್ಷೇತ್ರದಿಂದ ಸರಸ್ವತ ಲೋಕಕ್ಕೆ ಒದಗಿ ಬಂದಿವೆ. ಇಂಥ ಸಾತ್ವಿಕ ಹರಿಯ ದಾಸರ ಹೆಸರಿನಲ್ಲಿ ‘ ಪ್ರತಿಷ್ಠಾನ ಸ್ಥಾಪನೆ ‘ ಇದರ ನೆರಳಿನಲ್ಲಿ ಹರಿದಾಸ ಸಾಹಿತ್ಯದ ಚಿಂತನೆ, ಅಧ್ಯಯನ, ಬೋಧನೆ, ಪ್ರಸಾರ ಹಾಗೂ ಪ್ರಚಾರ ಮಾಡುವ ಗುರುತಿಸಿ, ಗೌರವಿಸುವ ಆ ಮೂಲಕ ದಾಸಸಾಹಿತ್ಯದ ಪೋಷಣೆಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಸುಸ್ತುತ್ಯಾರ್ಹವಾದ ಕ್ರಿಯೆ ಎಂದು ಪ್ರತಿಕ್ರಿಯಿಸಿದರು.
ಕೊಪ್ಪಳ, ಕರ್ನಾಟಕ, ಭಾರತದ ಸೀಮೆಯೂ ದಾಟಿ ಸಾಗರರಾಚೆಯ ನಾಡಲ್ಲಿ ದಾಸ
ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸುತ್ತಾ ಇದನ್ನು ಅರಿಯುವಲ್ಲಿ ಮೂಡಿಸುತ್ತಾ ಭಕ್ತಿ ಸಾಹಿತ್ಯದ ಈ ಪ್ರಾಕಾರವನ್ನು ಬೆಳೆಸುತ್ತಿರುವ ” ಸೌರಭ ದಾಸ ಸಾಹಿತ್ಯ ವಿಶ್ವವಿದ್ಯಾಲಯದ ” ರೂವಾರಿ ಪಂಡಿತ್ ಶ್ರೀ ಪ್ರಮೋದಾಚಾರ್ಯ ಪೂಜಾರ ಯೋಗ್ಯರು.
ಶ್ರೀ ಹರಿಯ ಇಂತಹ ಸೇವಕರನ್ನು ಗುರುತಿಸಿ, ತನ್ನ ಎರಡನೇ ಚರಣದ ಪ್ರಶಸ್ತಿ ನೀಡುತ್ತಿರುವುದು ತಮಗೆ ತೃಪ್ತಿ ನೀಡಿದೆ ಎಂದು ಆಚಾರ್ಯರು ಸಹಮತ ವ್ಯಕ್ತಪಡಿಸಿದರು.
ಹರಿದಾಸರಂತೆ ಬದುಕಿ ತೋರಿಸಿದ ವಸಂತ ಕುಷ್ಟಗಿ ಅವರ ಹೆಸರಿನ ಈ ಪ್ರಶಸ್ತಿಯ ಭೂಷಣವು ಪ್ರಮೋದಾಚಾರ್ಯರಿಗೆ ದಾಸರ ಸೇವೆಗೆ ಹೊಸದೊಂದು ಜವಾಬ್ದಾರಿಯನೇ ತಂದಿಟ್ಟಂತಾಗಿದೆ ಎಂದು ಕಿವಿಮಾತುಹೇಳಿದರು.
ವಸಂತ ಕುಷ್ಟಗಿ ಹೆಸರಿನ ಈ ಪ್ರತಿಷ್ಠಾನವು ಎಲ್ಲಿಯೂ ನಿಲ್ಲದೆ ಎಂದೂ ನಿಲ್ಲದೆ ಎಲ್ಲ ಕಾಲದಿ ನಿರಂತರತೆ ಪಡೆಯಲಿ, ಹೆಚ್ಚು ವಿಸ್ತಾರಗೊಳ್ಳಲಿ ಎಂದು ರಘುಪ್ರೇಮಾಚಾರ್ಯರು ಹಾರಯಿಸಿದರು.
ಕನ್ನಡ ನುಡಿಗೆ ಸಿರಿಯಾಗಿ ಬದುಕು ಬಾಳಿದ ವಸಂತ ಕುಷ್ಟಗಿ ಯವರ ಶಿಷ್ಯ ಕೂಟದಲ್ಲಿ ತಾನು ಒಬ್ಬ ಎಂದು ಹೇಳಿಕೊಂಡ ರಂಗಕರ್ಮಿ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ವಿನೋದ ವಿಠಲ ಅಂಬೇಡ್ಕರ್ ಅವರು ಸಂತ ಸಾಧನ ಹಬ್ಬಕ್ಕೆ ದೀಪಾ ಬೆಳಗಿಸಿ ಚಾಲನೆ ನೀಡಿದರು. ಬಾದಾಮಿಯ ‘ ದೃವರಂಗ ‘ ಕ್ಕೆ ಪೋಷಕರಾಗಿ ಪ್ರೋತ್ಸಾಹಿಸಿದ ಕ್ಷಣ. ಬಾದಾಮಿಯ ಬತ್ತೇರೇಶನ ಬೆಟ್ಟದಷ್ಟು ಪುಸ್ತಕ ರಚಿಸಿ ಪ್ರಕಾಶನಗೊಳಿಸಿದ ಬಾದಾಮಿಯ ಶಕ್ತಿ ಕನ್ನಡಕ್ಕೆ ಧಾರೆಯಾದ ವ್ಯಕ್ತಿ. ಇವರು ತಮ್ಮ ತಂದೆ ವಿಠಲ ರಾಯರ ಒಡನಾಡಿಯಾಗಿದ್ದರು. ಈ’ಟಿವಿ ಜಿ’ಟಿವಿ ವರದಿಗಳ ನೆಲೆಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ರೂಪಿಸುವ ರೂವಾರಿ ತಾನಾದಾಗ ಕುಷ್ಟಗಿಯವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದನ್ನು ಸ್ಮರಿಸಿಕೊಂಡರು. ಬಾದಾಮಿಯಿಂದ ಬೀದರಿನ ತನಕ ಬೀದರಿನಿಂದ ಬೆಂಗಳೂರು ತನಕ ವಸಂತರ ಕಸ್ತೂರಿ ಕನ್ನಡದ ಕಂಪು ಎಂದೆಂದೂ ಘಮಘಮಿಸುತಿರಲಿ ಎಂದು ಪ್ರತಿಷ್ಠಾನಕ್ಕೆ ಶುಭ ಕೋರಿದರು.
‘ ಶ್ರೀ ಹರಿದಾಸ ವಸಂತ ರತ್ನ ಸಮ್ಮಾನ್ -2 ‘ ಪ್ರಶಸ್ತಿಯನ್ನು ಒಪ್ಪಿಸಿಕೊಂಡು ಮಾತನಾಡಿದ ಪಂಡಿತ್ ಪ್ರಮೋದಾಚಾರ್ಯ ಪೂಜಾರ ಮಾತನಾಡಿ, ಶ್ರೀಮದಾಚಾರ್ಯ ಆನಂದತೀರ್ಥರು ಹೇಳುವಂತೆ, ‘ ತನ್ನ ಕರತಲಕ್ಕೆ ಬರುವವರನ್ನೆಲ್ಲ ತನ್ನಲ್ಲೇ ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿರುವ ಶ್ರೀ ಕೃಷ್ಣ ಪರಮಾತ್ಮನೇ ” ವಸಂತ “. ಆದ್ದರಿಂದ ವಸಂತ ಕುಷ್ಟಗಿ ಅವರ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಈ ಸನ್ಮಾನ ಪ್ರಶಸ್ತಿ ಶ್ರೀ ಕೃಷ್ಣನಿಗೆ ಸಲ್ಲಬೇಕು ಎಂದು ಪ್ರತಿಪಾದಿಸಿದರು. ಯೋಗ ಯೋಗವೋ ಅನಾಯಾಸವೊ ಗೌರವ ಸಮ್ಮಾನ ಕಾರ್ಯಕ್ರಮ ವಿಠಲ ಕೃಷ್ಣನ ಸನ್ನಿಧಾನದಲ್ಲಿ ಏರ್ಪಾತಾಗಿದೆ. ಹಾಗಾಗಿ ಈ ಸಮ್ಮಾನವನ್ನು ನೆಪ ಮಾತ್ರಕ್ಕೆ ನನ್ನ ಕೈಗಳನು ಬಳಸಿ ಕೃಷ್ಣನೇ ಸ್ವೀಕರಿಸಿದ್ದಾನೆ. ತರುವಾಯ ಅದನ್ನು ದಾಸ ಸಾಹಿತ್ಯಕ್ಕೆ ಕೊಡಮಾಡಿದ್ದಾನೆ ಎಂದು ಅನಿಸಿಕೆಯನ್ನು ತೆರೆದಿಟ್ಟರು.
ತಮ್ಮ ಬಾಲ್ಯದ ದಿನಗಳಲ್ಲಿ ಹನುಮಸಾಗರದ ಶ್ರೀನಿವಾಸನ ಮಂದಿರಕ್ಕೆ ಆಗಮಿಸಿದ್ದರು. ಆಗ ತಾವು ದೇವರ ದೇವರ ಪೂಜೆಯಲ್ಲಿ ತೊಡಗಿದ್ದಾಗ ಅವರನ್ನು ಕಂಡು ಅನಂದಿತನಾಗಿದ್ದೆ. ಅವರ ಜೊತೆಯಲ್ಲಿ ದಾಸ ಸಾಹಿತ್ಯದ ಬಲ ಹರಿವುಗಳ ಬಗ್ಗೆ ಚರ್ಚೆ ಮಾಡುವ ವಿಚಾರ ವಿನಿಮಯ ನಡೆಸುವ ದೊರೆತಿತ್ತು. ಅಂದು ನಡೆಸಿದ ಚಿಂತನ ಮಂಥನದಲ್ಲಿ ಸಿಕ್ಕ ಸುಖದ ಋಣವೇ ಈ ಪ್ರಶಸ್ತಿಯ ರೂಪದಲ್ಲಿ ಆಶೀರ್ವಾದವಾಗಿ ತಮಗೆ ದೊರೆತಿದೆ. ಸೂಚ್ಯವಾಗಿ ಶ್ರೀ ರಘು ಪ್ರೇಮಚಾರ್ಯರು ವಚನದಲ್ಲಿ ತಿಳಿಸಿದಂತೆ , ಪ್ರಶಸ್ತಿ ತಮ್ಮ ದಾಸ ಸಾಹಿತ್ಯದ ಸೇವೆಗೆ ಮತ್ತಷ್ಟು ಜವಾಬ್ದಾರಿ ತಂದಿಟ್ಟಿದೆ. ಗೌರವವನ್ನು ಶ್ರೀ ಕೃಷ್ಣನಿಗೂ ಮೂಲಕ ಹರಿದಾಸರಿಗೂ ಸಮರ್ಪಿಸುತ್ತೇನೆ ಎಂದು ಪ್ರಮೋದಾಚಾರ್ಯರು ಹೇಳಿದರು.
ವಸಂತ ಕುಷ್ಠಗಿಯವರ ದೇಹದ ಗಮ್ಯದ ಬಳಿಕವೂ ಅವರು ಯಾವುದಕ್ಕಾಗಿ ತಮ್ಮ ದೇಹಸಿರಿಯನ್ನು ಸಮರ್ಪಿಸಿದ್ದರೋ ಅಂತಹ ದಾಸ ಸಾಹಿತ್ಯ, ಸಾಮಾಜಿಕ ಕೆಲಸಗಳನ್ನು ನಡೆಸಿಕೊಂಡು ಮುನ್ನಡೆಯುವ ಮಕ್ಕಳಿದ್ದಾರೆ ಎಂದರೆ ಪ್ರತಿಷ್ಠಾನದ ಈ ನೆಲೆಯಿಂದ, ಮಕ್ಕಳು ಬೆಳೆಸಿಕೊಂಡ ಈ ಸ್ವಭಾವದ ರೂಪದಲ್ಲಿ ದಾಸ ಸಾಹಿತ್ಯದ ಸೆಲೆಯಿಂದ ವಸಂತರು ನಿಮ್ಮ ಬಳಿಯೇ ಇದ್ದಾರೆ ದೃತಿಗೆಡದಿರಿ ಎಂದು ಪರಿವಾರದವರಿಗೆ ತು ಪ್ರತಿಷ್ಠಾನಕ್ಕೆ ಗತಿ ಶಕ್ತಿ ತುಂಬುವ ಆಶೀರ್ವಾದವ ನೀಡಿದರು.
ಪ್ರತಿಷ್ಠಾನ ಸಾಧ್ವಿ ಐದೇತೆ ಶ್ರೀಮತಿ ಶಕುಂತಲಾ ವಸಂತ ಕುಷ್ಟಗಿ ಸ್ಮರಣೆಯಲ್ಲಿ ನೀಡಲಾಗುವ ‘ ಶ್ರೀ ಹರಿದಾಸ ಸಿರಿ ಬಾಗಿಣ ‘ ಶ್ರೀಮತಿ ಪದ್ಮಶ್ರೀ ಪೂಜಾರ ಇವರಿಗೆ ಸಮರ್ಪಿಸಲಾಯಿತು.
ಆ ಮೊದಲು ಶ್ರೀ ಹರಿವಿಠಲ – ಶ್ರೀಮದಾಚಾರ್ಯರು ಮತ್ತು ಹರಿದಾಸರ ಪದತಲದಿ ದಿವ್ಯಾತ್ಮರಾಗಿ ಸೇರಿಕೊಂಡ ಪ್ರೊ. ವಸಂತ ಕುಷ್ಟಗಿ ಅವರ ಭಾವ ಚಿತ್ರಕ್ಕೆ ಪರಿವಾರದ ಪುಟ್ಟ ಸದಸ್ಯ ಕುಮಾರಿಯರಾದ
ಶ್ರೀವರ್ಧಿನಿ ಹಾಗೂ ನವ್ಯಶ್ರೀ, ಪುಷ್ಪ ನಮನ ಸಲ್ಲಿಸಿದರು.
‘ ನಾ ಕಂಡಂತೆ ಆಚಾರ್ಯ ವಸಂತ ಕುಷ್ಟಗಿ ‘ ಎಂಬ ವಿಷಯದ ಮೇಲೆ ಉಪನ್ಯಾಸ ಮಂಡಿಸಿದ ಕುಷ್ಟಗಿ ಯವರ ವಿದ್ಯಾರ್ಥಿ ನವೋದಯ ಶಾಲೆಯ ವಿಶ್ರಾಂತ ಶಿಕ್ಷಕಿ ಶ್ರೀಮತಿ ರಾಧಾ ಜೋಶಿ ದೀಕ್ಷಿತರು, ಸಾಹಿತ್ಯ ಲೋಕದಲ್ಲಿ ಅಸ್ತಿತ್ವದಲ್ಲಿ ಉಳಿಯಬೇಕಾದರೆ ಗೆದ್ದಾಗ,ಹೊಗಳಿದಾಗ ಹಿಗ್ಗದೆ. ಸೋತಾಗ, ತೆಗಳಿದಾಗ ಕುಗ್ಗದೇ ಸಮಚಿತ್ತದಲ್ಲಿ ಸಾಹಿತ್ಯದ ಓದು ಹಾಗೂ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು.
ಈ ಸಕ್ರಿಯತೆ ರೂಢಿಸಿಕೊಂಡರೆ ಅದುವೇ ಸಮಾಜದ ಜೊತೆಗೆ ನಮ್ಮನ್ನು ಬೆಸೆದು ಕೊಡುತ್ತದೆ ಎಂದು ಹುರಿದುಂಬಿಸುತ್ತಿದ್ದರು. ಅಪರೂಪದ ಗುರುವರೇಣ್ಯರು ಇವರು. ಅನೇಕರಿಗೆ ಇವರಿಂದ ಆದ ಜ್ಞಾನದ ಬೆಳಕನ್ನು ಮಾತುಗಳ ಮುಖಾಂತರ ಸಾಭೀಕರ ಮುಂದೆ ಪ್ರಜ್ವಲಿಸಿಟ್ಟರು.
ನಿಜಾಂ ಕರ್ನಾಟಕದಲ್ಲಿ ಕನ್ನಡ ಉಳಿಸಿ ಕಟ್ಟಿದ ಪರಿ. ಬೀದರ ಕಲಬುರಗಿ ನೆಲೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಸಾಲು ಸಾಲು ಕವಿಗಳ ದಿಂಡು, ಇವರ ಸಾಕ್ಷರತಾ ಪ್ರಚಾರದ, ಪ್ರಸಾರದ ಪಾಲು ಅಲ್ಲದೇ ವಸಂತ ಕುಷ್ಟಗಿ ಅವರ ಬದುಕು- ಬರಹ, ಒಡನಾಟ, ಮಾನವ ಸಂಬಂಧಗಳ ಎಳೆ ಎಳೆಯನ್ನು ಬಿಡಿಸಿಟ್ಟರು. ಮಾತುಗಳ ಮುಖಾಂತರ ಗುರುದಕ್ಷಿಣೆಯ ವಂದನಾರ್ಪಣೆ ಸಲ್ಲಿಸಿದರು.
ಜೀವರಾಶಿಗಳ ಹುಟ್ಟು- ಸಾವು ಗಿಡಮರಗಳ ತರಗೆಲೆಯಂತೆ ಚಿಗುರುವುದು ಉದುರುವುದು ಸರ್ವೇಸಾಮಾನ್ಯ. ಈ ನೈಸರ್ಗಿಕ ಪ್ರಕ್ರಿಯೆಯಂತೆ, ವಸಂತ ಕುಷ್ಟಗಿ ಅವರ ಬದುಕು ಬರಹ ಸಾಧನೆ ಹಾಗೂ ಅವರ ಆತ್ಮಕ್ಕೆ ಎಂದೂ ಸಾವಿಲ್ಲವೆಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರ ಪುತ್ರ ವೈದ್ಯ ಡಾ.ಅನಿರುದ್ಧ ಕುಷ್ಟಗಿ ಸ್ವರಚಿತ ಕಾವ್ಯದ ಮೂಲಕ ಆಶಯ ವ್ಯಕ್ತಪಡಿಸಿದರು. ಹೈದರಾಬಾದ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಪ್ರಸ್ತುತವಾದ ವಸಂತರ ರಾಷ್ಟ್ರಧರ್ಮ, ಅವರ ಬದುಕ ಜಟಕಾಬಂಡಿ ಗ್ರಹಧಾರಿಯಲ್ಲಿ ಸಾಗಿ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗುವಲ್ಲಿ ಅವರಿಗೆ ಸಹಯೋಗ ನೀಡಿದ, ಛಲದ ಗತಿಶಕ್ತಿಯಾದ ಅವರ ಅಶಕ್ತ ಊನವಾಗಿದ್ದ ಕಾಲು. ಅವರಲ್ಲಿ ರಾಷ್ಟ್ರ ಪ್ರೇಮ ತುಂಬಿಸುಸುವಷ್ಟು ನೆಲೆಗೊಂಡಿತ್ತು. ಸಂಸಾರ ಸಮಾಜ ಎರಡನ್ನೂ ಏಕೋ ಭಾವದಿಂದ ಕಾಣುತ್ತ ಜೀವನ ರೂಪಿಸಿಕೊಳ್ಳಲು ಅವರು ಬಲ ತುಂಬುತ್ತಿದ್ದರು ಎಂದು ತಂದೆಯೂ ಆದ ಮಾನವಾಂಥ:ಕರಣದ ಕುಷ್ಟಗಿಯವರನ್ನು ನೆನಪಿಸಿಕೊಂಡರು.
ದಾಸ ಸಾಹಿತ್ಯದ ಚಿಂತನೆ, ಚರ್ಚೆ, ಭಜನೆ, ಆಲಾಪನೆ ಎಲ್ಲವೂ ಪರಿವಾರದ ಪರಿಸರದಲ್ಲಿ ರೂಢಿಯಲ್ಲಿದ್ದದ್ದು ಬಾಲ್ಯದ ದಿನಗಳಿಂದಲೂ ನೋಡುತ್ತಾ ಬೆಳೆದಿದ್ದೇವೆ. ಶ್ರೀ ಹರಿಕಥಾಮೃತಸಾರ ವಸಂತರ ಉಸಿರಾಗಿತ್ತು. ಅವರ ತರುವಾಯದ ಈ ದಿನಗಳಲ್ಲಿ ಪ್ರತಿಷ್ಠಾನ, ಗೌರವ ಪ್ರದಾನ, ಇದರ ಸಿದ್ಧತೆ, ಕೊಡ ಮಾಡುವ ಪ್ರಕ್ರಿಯೆ ಪರಾಮರ್ಶೆ, ಮುಂದಿನ ಸಲಕ್ಕೆ ತಿದ್ದಿಕೊಳ್ಳುವ ಪ್ರಯತ್ನ ಇಲ್ಲೆಲ್ಲಾ ತಂದೆ ತಾಯಿಯರನ್ನು ಕಾಣುತ್ತಾ ಜೀವನಕ್ಕೆ ಉತ್ಸಾಹವನ್ನು ಮತ್ತೆ ಬೆರೆಸಿಕೊಳ್ಳುತ್ತಾ ಪುನೀತ ಭಾವ ಹೊಂದಲು ಸಾಧ್ಯವಾಗುತ್ತಿರುವುದು ಶ್ರೀವಾರಿಯ ಕೃಷ್ಣ ಅನುಗ್ರಹ ಎಂದೇ ಕರೆಯುವುದು ಸರಿಯಲ್ಲವೇ ಎಂದು ಭಾವುಕರಾದರು.
ಮೊಮ್ಮಕ್ಕಳಾದ ನವ್ಯಶ್ರೀ ಮತ್ತು ಬೃಂದಾ ಸಂಗೀತದ ಮೂಲಕ ಅಜ್ಜ ವಸಂತ ಕುಷ್ಟಗಿ ಅವರಿಗೆ ಹುಟ್ಟು ಹಬ್ಬದ ಕಾಣಿಕೆ ನೀಡಿದರು. ಶ್ರೀಮತಿ ಸುಪ್ರಿಯಾ ಹುನಗುಂದ ಮತ್ತು ಸಂಗಡಿಗರು ಹರಿ ಕೀರ್ತನೆ ನಡೆಸಿಕೊಟ್ಟರು. ಹಾರಯಿಕೆ ಕವಿ ವಸಂತ ಕುಷ್ಟಗಿ ಅವರ ಕಾವ್ಯಕ್ಕೆ ಗೇಯ ರೂಪನೀಡಿದ ಪ್ರಸ್ತುತಿ ಎಲ್ಲರನು ಭಾವಕರನ್ನಾಗಿಸಿತು.
ಗಣಪತಿ ಸ್ತೋತ್ರದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ದಿವ್ಯಾತ್ಮರಾದ ವಸಂತ ಕುಷ್ಟಗಿ ಅವರ ಧ್ವನಿಯ ಸುರುಳಿಯನ್ನು ಕೇಳಿಸಲಾಯಿತು.