
ವಿಭಿನ್ನವಾಗಿ ನಡೆದ
ಜನತಾ ದರ್ಶನ
ಸೈಕಲ್ ಏರಿ ಜನರ ದರ್ಶನ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ) 16 – ಜಿಲ್ಲಾಡಳಿತದಿಂದ ತಾಲ್ಲೂಕು ಮಟ್ಟದ ‘ಜನತಾ ದರ್ಶನ’ ಕಾರ್ಯಕ್ರಮವು ಕೊಟ್ಟೂರಿನಲ್ಲಿ ವಿಭಿನ್ನವಾಗಿ ನಡೆಯಿತು.
ಜನತಾ ದರ್ಶನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಬೆಳಗ್ಗೆ 8.30ಕ್ಕೆ ಕೊಟ್ಟೂರಿಗೆ ಆಗಮಿಸಿ ಪಟ್ಟಣ ಸಂಚಾರ ಆರಂಭಿಸಿ ಸತತ ಎರಡೂವರೆ ಗಂಟೆಗಳ ಕಾಲ ಕೊಟ್ಟೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾನಾ ವಾರ್ಡ್ಗಳಿಗೆ ತೆರಳಿ ಸಾರ್ವಜನಿಕರ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆ ಮತ್ತು ಇತರ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ಪಟ್ಟಣದ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಸ್ಥಳದಿಂದ ಸೈಕಲ್ ಏರಿ ಸಂಚಾರ ಆರಂಭಿಸಿದ್ದು ವಿಶೇಷವಾಗಿತ್ತು. ಅಲ್ಲಿಂದ ವಿವಿಧೆಡೆ ತೆರಳಿ ಸಾರ್ವಜನಿಕರೊಂದಿಗೆ ಆಪ್ತವಾಗಿ ಮಾತನಾಡಿ ಹಲವಾರು ಮಾಹಿತಿ ಪಡೆದರು. ಸಂಚಾರ ನಡೆಸಿ ವಿಶೇಷವಾಗಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ಕೊಡುವಂತೆ ಜನಜಾಗೃತಿ ಮೂಡಿಸಿದರು.
ಪಟ್ಟಣದ ಉಜ್ಜಿಯಿನಿ ವೃತ್ತದ ಬಳಿಯಲ್ಲಿನ ಶಾಲೆ ಎದುರು ಇರುವ ಶೌಚಾಲಯಗಳ ವೀಕ್ಷಣೆ ನಡೆಸಿ ಅವುಗಳ ಸ್ವಚ್ಛತೆಗೆ ಕ್ರಮವಹಿಸಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಗಚ್ಚಿನಮಠದ ಆವರಣದಲ್ಲಿ ನಡೆಯುತ್ತಿದ್ದ ಕಾಮಗಾರಿಯ ಬಗ್ಗೆ ವಿಚಾರಣೆ ಮಾಡಿದರು. ಆನಂತರ ಬಳ್ಳಾರಿ ಕ್ಯಾಂಪ್ ಪ್ರದೇಶಕ್ಕೆ ತೆರಳಿ ಅಲ್ಲಿ ಪಟ್ಟಣ ಪಂಚಾಯಿತಿಯಿಂದ 50 ಮನೆ ಖಾತಾ ದಾಖಲೆ ಫಾರಂ ನಂ.3ಗಳನ್ನು ಸಾಂಕೇತಿಕವಾಗಿ ಕೆಲವರಿಗೆ ವಿತರಿಸಿದರು.
ಹೊಟೆಲ್ ಮಾಲೀಕರರೊಂದಿಗೆ ಮಾತನಾಡಿ ಶುಚಿತ್ವ ಕಾಯ್ದುಕೊಳ್ಳುವುದರ ಬಗ್ಗೆ ಮನವಿ ಮಾಡಿದರು. ಸಾರ್ವಜನಿಕ ಆಸ್ಪತ್ರೆಗೆ,ಕೃಷಿ ಉತ್ಪನ್ನ ಮಾರುಕಟ್ಟೆಗೆ,ರಾಗಿ ಖರೀದಿ ಕೇಂದ್ರ,ಬೀದಿ ಬದಿಯ ವ್ಯಾಪಾರಿಗಳೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು. ಬಸ್ ನಿಲ್ದಾಣದ ಆವರಣದಲ್ಲಿನ ಶೌಚಾಲಯಗಳ ವೀಕ್ಷಣೆ ನಡೆಸಲಾಯಿತು ಎಲ್ಲಕಡೆನೂ ಶುಚಿತ್ವ ಕಾಯ್ದುಕೊಳ್ಳಲು ಸೂಚಿಸಿದರು.
ಅಹವಾಲು ಸ್ವೀಕಾರ: ಬೆಳಗ್ಗೆ ಎರಡು ಗಂಟೆಗೂ ಹೆಚ್ಚು ಕಾಲ ಗ್ರಾಮ ಸಂಚಾರ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳು ವೇದಿಕೆಗೆ ಆಗಮಿಸಿದರು. ಕೊಟ್ಟೂರ ಸೇರಿದಂತೆ ಸುತ್ತಲಿನ ನಾನಾ ಹಳ್ಳಿಗಳ ಗ್ರಾಮಸ್ಥರ ಅಹವಾಲು ಆಲಿಸಿದರು. ಬೆಳಗ್ಗೆ 11.15ಕ್ಕೆ ಆರಂಭಗೊಂಡ ಕಾರ್ಯಕ್ರಮವು ಮಧ್ಯಾಹ್ನ 2.30 ಗಂಟೆವರೆಗೆ ಸತತವಾಗಿ ನಡೆಯಿತು. ಮೂರು ಗಂಟೆಗಳ ಕಾಲ ಸಾವಧಾನದಿಂದ ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು, ಕೆಲವು ಅರ್ಜಿಗಳ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು. ಬಾಕಿ ಅರ್ಜಿಗಳನ್ನು ಸಂಬಂದಿಸಿದ ಇಲಾಖೆಗಳಿಗೆ ವರ್ಗಾಯಿಸಲು ಸೂಚನೆ ನೀಡಿದರು. ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಲು ಆಯಾ ಇಲಾಖೆಗಳ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಗಡುವು ವಿದಿಸಿದರು.
ಅರ್ಜಿಗಳ ವಿವರ: ಜಿಲ್ಲಾಧಿಕಾರಿಗಳಿಂದ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 98 ಅರ್ಜಿಗಳು ಸ್ವೀಕೃತವಾದವು. 38 ಅರ್ಜಿಗಳು ಕಂದಾಯ ಇಲಾಖೆಗೆ, 6 ಅರ್ಜಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ, 4 ಭೂಮಾಪನ ಇಲಾಖೆಗೆ, 12 ಪಟ್ಟಣ ಪಂಚಾಯಿತಿಗೆ, ತಲಾ 7 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ, ತಲಾ 2 ತೋಟಗಾರಿಕಾ ಇಲಾಖೆ ಮತ್ತು ನೋಂದಣಿ ಇಲಾಖೆಗೆ, ತಲಾ ಒಂದು ಕಾರ್ಮಿಕ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ, ಜೆಸ್ಕಾಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆಗೆ, ಅಬಕಾರಿ ಇಲಾಖೆಗೆ ಸ್ವೀಕೃತವಾದವು.
ಸಮಾರಂಭದಲ್ಲಿ ಶಾಸಕ ನೇಮಿರಾಜ್ ನಾಯ್ಕ್, ತಹಸೀಲ್ದಾರ ಅಮರೇಶ ಜಿ.ಕೆ. ಸ್ವಾಗತಿಸಿದರು. ಸಿ.ಎಂ.ಗುರುಬಸವರಾಜ ನಿರೂಪಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ ವಂದಿಸಿದರು. ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ಕೊಟ್ಟೂರು ಗ್ರಾಮ ಲೆಕ್ಕಾಧಿಕಾರಿ ಹರೀಶ್ ಮತ್ತು ಸಿಬ್ಬಂದಿ ಇದ್ದರು.