
ವಿಧ್ಯಾರ್ಥಿಗಳಿಗೆ ಕ್ರೀಡೆ ಮುಖ್ಯ
ಪತ್ರಕರ್ತ ರವೀಂದ್ರ ವಿ.ಕೆ
ಜಿಲ್ಲಾಮಟ್ಟದ ಚೆಸ್ ಸ್ಪರ್ಧೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 04- ಸ್ಪರ್ಧಾತ್ಮಕ ಯುಗದಲ್ಲಿ ಓದಿನೊಂದಿಗೆ ಕ್ರೀಡೆಯಲ್ಲೂ ಭಾಗಿಯಾಗುವುದು ಬಹುಮುಖ್ಯ. ಜಿಲ್ಲಾಮಟ್ಟದಲ್ಲಿ ಮೊದಲ ಬಾರಿಗೆ ಚೆಸ್ ತರಬೇತಿ ಶಿಬಿರ ಹಾಗೂ ಸ್ಪರ್ಧೆ ಏರ್ಪಡಿಸಿದ್ದು ಶ್ಲಾಘನೀಯ ಎಂದು ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ರವೀಂದ್ರ ವಿ.ಕೆ. ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆಸ್ ತರಬೇತಿ ಶಿಬಿರ ಹಾಗೂ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಅನೇಕ ಕ್ರೀಡಾ ಪ್ರತಿಭೆಗಳಿವೆ. ಅವುಗಳನ್ನು ಗುರುತಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಹಲವಾರು ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಮೊದಲ ಬಾರಿಗೆ ಜಿಲ್ಲೆಯಲ್ಲಿ ಚೆಸ್ ತರಬೇತಿ ಶಿಬಿರ ಹಾಗೂ ಸ್ಪರ್ಧೆ ಹಮ್ಮಿಕೊಂಡಿದ್ದು ಮಕ್ಕಳಿಗೆ ಖುಷಿ ನೀಡಿದೆ. ಇಂದು ಮಕ್ಕಳು ಮೊಬೈಲ್ ಗೇಮ್ ಗಳನ್ನೇ ನಿಜವಾದ ಕ್ರೀಡೆ ಎಂದುಕೊಂಡಿದ್ದಾರೆ. ಪಾಲಕರು ಮಕ್ಕಳನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕೆಲಸ ಮಾಡುತ್ತಿಲ್ಲ. ಪ್ರೀತಿ, ಮುದ್ದು ಮಾಡುವ ನೆಪದಲ್ಲಿ ಕಷ್ಟದ ಪರಿಸ್ಥಿತಿ ಎದುರಿಸುವುದನ್ನು ಕಲಿಸುತ್ತಿಲ್ಲ. ಚೆಸ್ ಉತ್ತಮ ಕ್ರೀಡೆ. ಜಿಲ್ಲಾ ಮಟ್ಟದಲ್ಲಿ ಅಸೋಸಿಯೇಷನ್ ಇಲ್ಲದಿದ್ದರೂ ಬೇರೆಯವರನ್ನು ಕರೆಸಿ ಆಯೋಜಿಸಿದ್ದು ಪ್ರಶಂಸನೀಯ. ನಮ್ಮಜಿಲ್ಲೆಯ ಮಕ್ಕಳು ರಾಜ್ಯ,ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದಲ್ಲಿ ಇಡೀ ಜಿಲ್ಲೆಗೆ ಹೆಮ್ಮೆ ತರಲಿದೆ ಎಂದು ಅಭಿಪ್ರಾಯಪಟ್ಟರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಮಾತನಾಡಿ, ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಉದ್ಯೋಗದಲ್ಲೂ ಅವಕಾಶ ದೊರೆಯುತ್ತವೆ. ಮಕ್ಕಳಲ್ಲಿ ಅಡಗಿದ ಪ್ರತಿಭೆ ಗುರುತಿಸುವ ಕೆಲಸವಾಗಬೇಕು. ಕೊಪ್ಪಳದಲ್ಲಿ ಚೆಸ್ ಸ್ಪರ್ಧೆ ಏರ್ಪಡಿಸಬೇಕೆಂಬ ಬೇಡಿಕೆ ಬಹುದಿನದಿಂದ ಇದೆ. ಆದರೆ, ಸೂಕ್ತ ಅಸೋಸಿಯೇಷನ್ ಗಳು ಸಿಕ್ಕಿರಲಿಲ್ಲ. ಕೊನೆಗೆ ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ಪದಾಧಿಕಾರಿಗಳನ್ನು ಸಂಪರ್ಕಿಸಿ ಶಿಬಿರ ಹಮ್ಮಿಕೊಂಡಿದ್ದೇವೆ. ನಮ್ಮ ಮಕ್ಕಳು ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದಾಗ ನಮ್ಮ ಶ್ರಮ ಸಾರ್ಥಕವಾಗಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ನಿರ್ಣಾಯಕ ಎಂ.ಐ.ಕಣಕೆ ಮಾತನಾಡಿ, ಮೊದಲ ಬಾರಿಗೆ ಕ್ರೀಡಾ ಇಲಾಖೆ ಆಸಕ್ತಿಯಿಂದ ಚೆಸ್ ಸ್ಪರ್ಧೆ ಏರ್ಪಡಿಸಿದ್ದು ಖುಷಿ ತಂದಿದೆ. ಗದಗ ಜಿಲ್ಲೆಯವನಾದರೂ ನಿರ್ಣಾಯಕರಾಗಿ ಕರೆಸಿ ಜವಾಬ್ದಾರಿ ನೀಡಿದ್ದಾರೆ. ಏಕಾಏಕಿ ರಾಜ್ಯಮಟ್ಟದ ಸ್ಪರ್ಧೆಗೆ ಮಕ್ಕಳನ್ನು ಕಳಿಸಿದರೆ ಅವರಿಗೆ ಅಲ್ಲಿನ ವಾತಾವರಣ ಅರ್ಥವಾಗದು. ಸ್ಪರ್ಧೆ ನಿಯಮ, ಸೂಚನೆ, ತಂತ್ರಗಳನ್ನು ಜಿಲ್ಲಾಮಟ್ಟದಲ್ಲೇ ನೀಡಬೇಕು. ಪಾಲಕರು ಇದಕ್ಕೆ ಸಹಕರಿಸಬೇಕು. ಬಹುತೇಕ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಸಿಗಲಿದೆ. ಉತ್ತಮ ಸಾಧನೆ ತೋರಿದವರು ಪರೀಕ್ಷೆ ಎದುರಿಸದೇ ನೇರವಾಗಿ ಉದ್ಯೋಗ ಪಡೆಯಬಹುದು ಎಂದು ತಿಳಿಸಿದರು.
ಖಾನಾಪುರ ಪಿಟಿಎಸ್ ಡಿವೈಎಸ್ಪಿ ನಿಂಗಪ್ಪ ಎನ್. ಕಾರ್ಯಕ್ರಮ ಉದ್ಘಾಟಿಸಿದರು. ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ ರವೀಂದ್ರ ವಿ.ಕೆ., ಗದಗ ಜಿಲ್ಲಾ ಚೆಸ್ ಸಂಸ್ಥೆ ಉಪಾಧ್ಯಕ್ಷ ಎಸ್.ಎಂ.ಪೂಜಾರ ಸೇರಿ ತರಬೇತುದಾರರು, ಮಕ್ಕಳ ಪಾಲಕರು ಇದ್ದರು.