
ವಿವಿಧೆಡೆ ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,1-ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ 07 ರಂದು ನಡೆಯುವ ಮತದಾನ ದಿನದಂದು ತಪ್ಪದೇ ಎಲ್ಲಾ ನರೇಗಾ ಕೂಲಿಕಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕಂಪ್ಲಿ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಒ ಶ್ರೀಕುಮಾರ್ ಅವರು ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಕಂಪ್ಲಿ ಇವರ ಸಂಯುಕ್ತಾಶ್ರಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ತಾಲ್ಲೂಕಿನ ಸಣಾಪುರ, ನೆಲ್ಲುಡಿ ಮತ್ತು ದೇವಲಾಪುರ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಹಬ್ಬವಿದ್ದಂತೆ. ಅದರಲ್ಲಿ ಮತದಾನವು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಹಾಗಾಗಿ ಯಾರೂ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಮನವರಿಕೆ ಮಾಡಿದರು.
ಮತದಾರರನ್ನು ಸೆಳೆಯಲು ಎಲ್ಲಾ ಗ್ರಾಮ ಪಂಚಾಯತ್‍ವಾರು ಪಿಂಕ್ ಮತ್ತು ಪರಿಸರ ಸ್ನೇಹಿ ಮತಕೇಂದ್ರಗಳನ್ನು ಸ್ಥಾಪಿಸಲಾಗುವುದು. ಯಾವುದೇ ಆಸೆ ಆಮೀಷಕ್ಕೆ ಒಳಗಾಗದೇ ಎಲ್ಲರೂ ಮತದಾನ ಮಾಡಬೇಕು ಎಂದು ತಿಳಿಸಿದರು.
ಯುವ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ಸುಭದ್ರಗೊಳಿಸುವಲ್ಲಿ ಮುಖ್ಯಪಾತ್ರ ವಹಿಸಬೇಕು ಎಂದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದಿನಕೂಲಿ ಹೆಚ್ಚಳವಾಗಿದ್ದು, ಯಾರೂ ಗುಳೆ ಹೋಗಬಾರದು. ನಿಮ್ಮೂರಲ್ಲಿಯೇ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
ಈ ವೇಳೆ ತಾಲ್ಲೂಕು ಐಇಸಿ ಸಂಯೋಜಕ ಹನುಮೇಶ್, ಬಿಎಫ್‍ಟಿ ಭಾಷಾ, ಜಿಕೆಎಂ ಸಿರಿಶಾ, ನೆಲ್ಲುಡಿ ಗ್ರಾಪಂ (ಗ್ರಾಉ) ಸಹಾಯಕ ನಿರ್ದೇಶಕ ಮಲ್ಲನಗೌಡ, ದೇವಲಾಪುರ ಗ್ರಾಪಂ ಪಿಡಿಓ ಶಶಿಕಾಂತ್ ಸೇರಿದಂತೆ ಕೂಲಿಕಾರರು ಸೇರಿದ್ದರು.