
ಶೋಷಿತರು ರಾಜಕೀಯ ಮುನ್ನಲೆಗೆ ಬಂದಾಗ ಸಮಾಜದ ಅಭಿವೃದ್ದಿ ಸಾಧ್ಯವಾಗುತ್ತದೆ : ಅಸಾಂಗ್ ವಾಂಖೇಡ್
ಕರುನಾಡ ಬೆಳಗು ಸುದ್ದಿ
ವಿಜಯನಗರ,29- ಜಾತಿ ಮತ್ತು ರಾಜಕೀಯ ವ್ಯವಸ್ಥೆಗಳ ಸಂಭಂದ ಇಂದು ನಿನ್ನೆಯದಲ್ಲ. ಕೆಳವರ್ಗದವರು ರಾಜಕೀಯ ಮುನ್ನಲೆಗೆ ಬಂದಾಗ ಸಮಾಜವು ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಒ.ಯು.ಸಿ. ಎಲ್.ಜೆ.ಯ ಸಂಪಾದಕರಾದ ಅಸಾಂಗ್ ವಾಂಖೇಡ್ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಬುದುವಾರ ನಡೆದ ಜಾತಿ ಮತ್ತು ಸಮಕಾಲೀನ ರಾಜಕೀಯ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕವೇ ರಾಜಕೀಯ ಮೀಸಲಾತಿ ಹಕ್ಕನ್ನು ಒದಗಿಸಿಕೊಟ್ಟಿದ್ದಾರೆ.
ಪ್ರಸ್ತುತ ರಾಜಕಾರಣದಲ್ಲಿ ರಾಜಕೀಯ ಹಾಗೂ ಆರ್ಥಿಕವಾಗಿ ಬಲಿಷ್ಠವಾಗಿರುವ ಜಾತಿಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು, ಇದರ ಸೋಗಿನಲ್ಲಿ ತುಳಿತಕ್ಕೊಳಗಾದ ತಳ ಸಮುದಾಯಗಳು ನಿರ್ಲಕ್ಷಕ್ಕೊಳಪಡುತ್ತಿವೆ. ದೇಶದ ಅನೇಕ ರಾಜ್ಯಗಳಲ್ಲಿ ರಾಜಕೀಯ ಅಧಿಕಾರ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಸ್ತಾಂತರವಾಗುತ್ತಿದೆ. ಆದರೆ ಪ್ರಬಲ ಜಾತಿಗಳ ಕೈಗೆ ಅಧಿಕಾರ ಸೇರುತ್ತಿದೆ. ಬಹುತೇಕ ಸಂಧರ್ಭದಲ್ಲಿ ಪಕ್ಷ ಅಥವಾ ವ್ಯಕ್ತಿ ಬದಲಾದರೂ ಜಾತಿ ಬದಲಾಗುವುದಿಲ್ಲ. ಅಧಿಕಾರದ ಲಾಲಾಸೆಯಿಂದ ಪರಕಾಷ್ಟೇ ತಲುಪಿದ ರಾಜ್ಯದ ಹಿತಾಸಕ್ತಿಗಳು ನೈಪತ್ಯಕ್ಕೆ ಸರಿದಿವೆ.
ಬಹುತೇಕ ನಾಯಕರು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮರೆತು ಜಾತಿ-ಜಾತಿಗಳ ನಡುವೆ ದೋಷರೋಪಣೆ ಮಾಡುವ ಮೂಲಕ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಸಾಮಾಜಿಕ ನ್ಯಾಯ, ಸಮತೆ ಹಾಗೂ ಸಹೋದರತ್ವಕ್ಕೆ ಧಕ್ಕೆಯಾಗಿದೆ. ಈ ಕುರಿತು ಹೊಸ ತಲೆಮಾರಿನವರು ಅಂಬೇಡ್ಕರ್ ಅವರನ್ನು ಮತ್ತಷ್ಟು ಓದುವುದರ ಮೂಲಕ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಭಾಗದ ಪ್ರಾಧ್ಯಪಕರಾದ ಡಾ.ಹೆಚ್.ಡಿ ಪ್ರಶಾಂತ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಪ್ರಾಧ್ಯಾಪಕರಾದ ಡಾ.ಎ.ಶ್ರೀಧರ್, ಡಾ.ಜನಾರ್ಧನ, ಗೋವರ್ಧನ ಮತ್ತು ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಗೀತಮ್ಮ ಕೆ. ಅವರು ನಿರೂಪಿಸಿದರು.