
ಶೋಷಿತರ ಜಾಗೃತಿ ಸಮಾವೇಶ ಯಶಸ್ವಿಗೊಳಿಸಿ
– ಕೆ.ಎಂ. ರಾಮಚಂದ್ರಪ್ಪ
ಉಳ್ಳವರಿಂದ ಶೋಷಿತರ ಮೇಲೆ ದಬ್ಬಾಳಿಕೆ
ಸಂವಿಧಾನ ರಕ್ಷಣೆಗೆ ಹೋರಾಟ ಅನಿವಾರ್ಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 17- ದೇಶದ ಸಂವಿಧಾನ ಅಪಾಯದಲ್ಲಿದೆ. ಉಳ್ಳವರು ಶೋಷಿತರ ಮೇಲೆ ನಿರಂತರ ದಬ್ಬಾಳಿಕೆ ನಡೆಸುವ ಮೂಲಕ ಅವರ ಧ್ವನಿ ಹತ್ತಿಕ್ಕುವ ಹುನ್ನಾರ ನಡೆದಿದೆ. ಈ ನಿಟ್ಟಿನಲ್ಲಿ ಎಲ್ಲ ಶೋಷಿತ ಸಮುದಾಯಗಳು ಒಗ್ಗೂಡಿ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಹೇಳಿದರು.
ನಗರದ ಕಾಳಿದಾಸ ಸಮುದಾಯ ಭವನದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ, ಸಾಮಾಜಿಕ ಸಮಾನತೆ ಸಾರಿದ ಪುಣ್ಯ ಭೂಮಿ ನಮ್ಮದು. ಹಲವು ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಜಾರಿಗೊಳಿಸಿವೆ. ಆದರೆ, ಬಲಾಡ್ಯರು ಮಾತ್ರ ಶೋಷಿತರ ಹಕ್ಕನ್ನು ಕಬಳಿಸುತ್ತಿರುವುದು ಶೋಚನೀಯವಾಗಿದೆ. ದೇಶದಲ್ಲಿರುವ ಉಳ್ಳವರು ಶೋಷಿತರ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ಅನ್ಯಾಯ ಎಸಗಲಾಗಿತ್ತಿದೆ. ಇಷ್ಟಾದರೂ ಸಹ ದೇಶದ ಪ್ರಧಾನಿಗಳು ಶೋಷಿತರ ಪರವಾಗಿ ನಿಲ್ಲದಿರುವುದು ದುರಾದುಷ್ಟಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಿಧಾನ ನಮಗೆ ರಕ್ಷಣೆ ನೀಡಿದೆ, ಅದನ್ನು ನಾವು ಗೌರವಿಸಬೇಕಿದೆ. ಆದರೆ, ಇತ್ತೀಚಿಗೆ ದೇಶದ ಸಂಪತ್ತು ಉಳ್ಳವರ ಪಾಲಾಗುತ್ತಿದೆ. ಪುರೋಹಿತ ಶಾಹಿಗಳ ಕಪಿಮುಷ್ಠಿಯಲ್ಲಿ ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳು ಕಳೆದರೂ ಇನ್ನೂ ಶೋಷಿತರು ಶೋಷಿತರಾಗೇ ಬದುಕು ಕಟ್ಟಿಕೊಳ್ಳುವಂತ ದುಸ್ಥಿತಿ ನಿರ್ಮಾಣವಾಗಿದೆ. ಶೋಷಿತರು ಮುನ್ನೇಲೆಗೆ ಬರಬಾರದು ಎಂಬ ದುರುದ್ದೇಶ ಕೆಲವರದ್ದಾಗಿದೆ. ಸಂವಿಧಾನವನ್ನು ಬದಲಾವಣೆ ಮಾಡಿ, ಮನುಸ್ಮೃತಿ, ಮುನುವಾದವನ್ನು ಮತ್ತೇ ಜಾರಿಗೆ ತರಬೇಕೆಂಬ ಹುನ್ನಾರ ನಡೆಯುತ್ತಿದೆ. ಹೀಗಾಗಿಸಂವಿಧಾನ ರಕ್ಷಣೆಗೆ ನಾವೆಲ್ಲರೂ ಸಂಘಟಿತರಾಗಿ, ಒಂದೇ ವೇದಿಕೆ ಮೂಲಕ ಒಗ್ಗೂಡಿ ಸಂವಿಧಾನವನ್ನು ರಕ್ಷಿಸಬೇಕಿದೆ ಎಂದರು.
ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಎಚ್. ಕಾಂತರಾಜ್ ವರದಿ ಮಾಡಲಾಗಿದೆ. ಆದರೆ, ಇದನ್ನು ಉಳ್ಳವರು ಅವೈಜ್ಞಾನಿಕ ವರದಿ ಎನ್ನುವ ಮೂಲಕ ಕಾಂತರಾಜ್ ವರದಿಯನ್ನು ವಿರೋಧಿಸುತ್ತಿದ್ದಾರೆ. ಅಲ್ಲದೇ ಸಧ್ಯ ಕಾಂಗ್ರೆಸ್ ಸರ್ಕಾರದ ಕೆಲ ಸಚಿವರು, ಶಾಸಕರು ವರದಿ ಜಾರಿಗೊಳಿಸದಂತೆ ಸಿಎಂ ಸಿದ್ದರಾಮಯ್ಯ ಅವರ ಮೇಲೆಒತ್ತಡ ತರುವ ಕೆಲಸ ಮಾಡುತ್ತಿದ್ದಾರೆ.ಸಿದ್ದರಾಮಯ್ಯನವರು ಯಾವುದೇ ಒತ್ತಡಗಳಿಗೆ ಮಣಿಯದೇ ಎಚ್. ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ, ಅಂಗೀಕರಿಸಬೇಕೆಂಬ ಉದ್ದೇಶ ಕೋಟ್ಯಾಂತರ ಶೋಷಿತರ ಜನರ ಕನಸಾಗಿದ್ದು, ಅದನ್ನು ಈಡೇರಿಸುತ್ತಾರೇ ಎಂಬ ಉದ್ದೇಶ ನಮ್ಮೆಲ್ಲರದು ಎಂದರು.
ಸ್ವಾತಂತ್ರ್ಯ ನಂತರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಸಮುದಾಯಗಳನ್ನು ಮುನ್ನೆಲೆಗೆ ತರಬೇಕೇಂಬ ಉದ್ದೇಶದಿಂದ ಅಂದಿನಿಂದ ಇಂದಿನವರೆಗೂ ಹೋರಾಟ ನಡೆಸುತ್ತಾ ಬಂದರೂ ನಮಗೆ ನ್ಯಾಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಶೋಷಿತ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಜನವರಿ 28ರಂದು ಚಿತ್ರದುರ್ಗದ ಬಸವ ಮೂರ್ತಿ ಮಾದಾರ ಚನ್ನಯ್ಯ ಪೀಠದ ಮೈದಾನದಲ್ಲಿ ಶೋಷಿತರ ಜಾಗೃತಿಗಾಗಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಆಯೋಜಿಸಿದ್ದು, ರಾಜ್ಯದ ನಾನಾ ಜಿಲ್ಲೆಗಳಿಂದ ಐದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಜ.28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತರ ಜಾಗೃತಿ ಸಮಾವೇಶ ದೇಶದ ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಶೋಷಿತರ, ಹಿಂದುಳಿದವರ ಬದುಕು ಹಸನವಾಗಬೇಕಾದರೇ ಎಚ್. ಕಾಂತರಾಜ್ ಆಯೋಗದ ವರದಿ ಅನುಷ್ಠಾನ ತುಂಬಾ ಅವಶ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ, ನಮ್ಮ ಹಕ್ಕು ಪಡೆಯೋಣ ಎಂದರು.
ಹಾಲವರ್ತಿಯ ಜಡೇಶ್ವರ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.ಮಾಜಿ ಶಾಸಕ ಬಸವರಾಜ ಹಿಟ್ನಾಳ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಕುರುಬ ಸಂಘದ ರಾಜ್ಯಾಧ್ಯಕ್ಷ ಎಂ. ಈರಣ್ಣ, ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಅನಂತ್ ನಾಯಕ, ಆದರ್ಶ ಯಲ್ಲಪ್ಪ, ಕುರುಬ ಸಂಘದ ಖಂಜಾಚಿ ಕೃಷ್ಣಮೂರ್ತಿ, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಟಿ. ರತ್ನಾಕರ, ಯಮನೂರಪ್ಪ ಗೊರ್ಲೇಕೊಪ್ಪ, ಪರಶುರಾಮಪ್ಪ ಹರಪನಹಳ್ಳಿ, ನೀಲಕಂಠಪ್ಪ ಬಡಿಗೇರ, ಭರಮಪ್ಪ ನಗರ, ವೀರಣ್ಣ ಬಳೂಟಗಿ, ಸುಬ್ರರಾಜ್, ಶ್ಯಾಮಿದ್ ಮನಿಯಾರ್, ಕಳಕಪ್ಪ ಕಂಬಳಿ, ಕುರುಬ ಯುವ ಘಟಕದ ರಾಜ್ಯಾಧ್ಯಕ್ಷ ಭಗವಂತ ರಾಯ ಪಾಟೀಲ್, ರಾಮಕೃಪ್ಪ ಬೆಂಗಳೂರು ಸೇರಿದಂತೆ ಇತರರಿದ್ದರು.