
ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ, ಶ್ರೀಆಂಜನೇಯಸ್ವಾಮಿ ಜೋಡಿ ರಥೋತ್ಸವ
ಕರುನಾಡ ಬೆಳಗು ಸುದ್ದಿ
ವಿಜಯನಗರ, 2- ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಶ್ರಿ ಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಶ್ರಿ ಆಂಜನೇಯ ಸ್ವಾಮಿ ದೇವಸ್ಥಾನದ ಜೋಡಿ ರಥೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಇವರಿಂದ ಏಪ್ರೀಲ್ 17ರಂದು ನಡೆಯುವ ಮರಿಯಮ್ಮನಹಳ್ಳಿ ಪಟ್ಟಣದ ಜೋಡಿ ರಥೋತ್ಸವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏಪ್ರಿಲ್ 2ರಂದು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ದಿನೇದಿನೆ ಬಿಸಿಲು ಹೆಚ್ಚುತ್ತಿದ್ದರಿಂದ ಸಾರ್ವಜನಿಕರ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು. ಜನರಿಗೆ ಕುಡಿಯುವ ನೀರಿಗೆ ಅನುಕೂಲತೆ ಕಲ್ಪಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಅಕ್ರಮಗಳನ್ನು ತಡೆಗೆ ಕ್ರಮ ವಹಿಸಬೇಕು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗುವ ಹಾಗೆ ರಸ್ತೆ ಮಾರ್ಗದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶ್ರಿ ಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಶ್ರಿ ಆಂಜನೇಯ ಸ್ವಾಮಿ ಜೋಡಿ ರಥೋತ್ಸವ ಹಿನ್ನೆಲೆಯಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್ 14ರಂದು ಹನುಮಂತೋತ್ಸವ, ಏಪ್ರೀಲ್ 15ರಂದು ಗರುಡೋತ್ಸವ, ರಾತ್ರಿ 10 ಗಂಟೆಗೆ ಉಡಿತುಂಬುವ ಕಾರ್ಯಕ್ರಮ, ಏಪ್ರೀಲ್ 16ರಂದು ಬಿಳಿ ಆನೆ ಉತ್ಸವ, ಏಪ್ರೀಲ್ 18ರಂದು ಪೂರ್ಣಾಹುತಿ, ಕಂಕಣ ವಿಸರ್ಜನೆ, ವಸಂತೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಇದೆ ವೇಳೆ ಉಪ ತಹಸೀಲ್ದಾರು ಮತ್ತು ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಶ್ರಿ ಆಂಜನೇಯ ದೇವಸ್ಥಾನದ ಆಡಳಿತಾಧಿಕಾರಿಯಾದ ನಾಗರಾಜ್ ಹೆಚ್ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಹೊಸಪೇಟೆ ತಹಸೀಲ್ದಾರರಾದ ಶ್ರುತಿ ಎಂ.ಎನ್., ಮರಿಯಮ್ಮನಹಳ್ಳಿ ಪಿಎಸ್‌ಐ ಮೌನೇಶ, ಜೆಸ್ಕಾಂನ ದಯಾನಂದ ಜೆ., ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಭಿಯಂತರರು, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಇತರರು ಇದ್ದರು.