
ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ : ವೀಣಾ ಹೇಮಂತ್ ಗೌಡ ಪಾಟೀಲ್
ಕರುನಾಡ ಬೆಳಗು ಸುದ್ದಿ
ಉತ್ತರ ಭಾರತದ ಸಮುದ್ರ ತಟದಲ್ಲಿರುವ ಸೌರಾಷ್ಟ್ರದಲ್ಲಿ ನೆಲೆಸಿರುವ ರತ್ನಪಡಿ ವ್ಯಾಪಾರಿ ಆದಯ್ಯ . ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೌರಾಷ್ಟ್ರದ ಸೋಮನಾಥನ ಅನನ್ಯ ಭಕ್ತ. ತಂದೆ ತಾಯಿ ಮತ್ತು ಪತ್ನಿ ಯೊಂದಿಗೆ ಸೋಮನಾಥನ ದೇವಸ್ಥಾನಕ್ಕೆ ಅನತಿ ದೂರದಲ್ಲಿ ವಾಸವಾಗಿದ್ದ ಆತ ದಿನವೂ ಸೋಮನಾಥನ ದರ್ಶನ ಮಾಡದೆ ಹನಿ ನೀರನ್ನೂ ಸೇವಿಸುತ್ತಿರಲಿಲ್ಲ.
ಒಂದು ದಿನ ಆತನ ಇನ್ನಿತರ ಸ್ನೇಹಿತರೊಂದಿಗೆ ದಕ್ಷಿಣ ಭಾರತದ ಶ್ರೀಮಂತ ರಾಜ್ಯಗಳಿಗೆ ಮುತ್ತು,ರತ್ನ ಮತ್ತು ಹವಳಗಳನ್ನು ಮಾರಲು ಹೊರಡಲು ನಿಶ್ಚಯಿಸಿದ ಆತ ತನ್ನ ತಂದೆ ತಾಯಿಯ ಆಶೀರ್ವಾದ ಮತ್ತು ಪತ್ನಿಯ ಒಪ್ಪಿಗೆ ಪಡೆದು ಹೊರಟನು.
ದಕ್ಷಿಣ ಭಾರತದ ಕನ್ನಡ ನಾಡಿನ ಜೈನರ ಬೀಡಾದ ಕವಿರಾಜಮಾರ್ಗದಲ್ಲಿ ತಿರುಳ್ಗನ್ನಡ ನಾಡು ಎಂದು ವರ್ಣಿತವಾದ ಕನ್ನಡ ನಾಡಿನ ಕೊಪ್ಪಳ ಲಕ್ಕುಂಡಿ ಭಾಗಗಳಲ್ಲಿ ತನ್ನ ವ್ಯಾಪಾರವನ್ನು ಪೂರೈಸಿ ಇಂದಿನ ಲಕ್ಷ್ಮೇಶ್ವರ ಎಂಬ ಹೆಸರಿನಿಂದ ಕರೆಯಲ್ಪಡುವ ಅಂದಿನ ಪುಲಿಗೆರೆಗೆ ಹೊರಟನು.
ಮುಂಜಾನೆ ಪ್ರಾತಃವಿಧಿಗಳನ್ನು ತೀರಿಸಿ ರಾಜ ಸಭೆ ನಡೆಯುವಲ್ಲಿ ಬಂದು ತನ್ನ ಪರಿಚಯ ಪತ್ರವನ್ನು ಕಳುಹಿಸಿದ ಆತನಿಗೆ ಮಹಾರಾಜರಿಂದ ಕರೆ ಬಂದಿತು. ಆದಯ್ಯ ತಾನು ಮುತ್ತು,ರತ್ನ, ಹವಳ ,ವಜ್ರ ವೈಢೂರ್ಯ ಗಳನ್ನು ಮಾರುವ ವ್ಯಾಪಾರಿ ಎಂದು ತಾವು ಖರೀದಿಸುವರೆಂಬ ವಿಶ್ವಾಸದಿಂದ ಇಲ್ಲಿಗೆ ಬಂದಿರುವುದಾಗಿ ಹೇಳಿದನು. ರಾಜ ಮನೆತನದ ಎಲ್ಲರೂ ತಮಗಿಷ್ಟವಾದ ಮುತ್ತು ರತ್ನಗಳ ಒಡವೆಗಳನ್ನು ಖರೀದಿಸಲು ಮುಗಿಬಿದ್ದರು.
ಮುಂದಿನ ಕೆಲವೇ ದಿನಗಳಲ್ಲಿ ರಾಜನ ಆಸ್ಥಾನದ ಜೈನ ಕುಲಕ್ಕೆ ಸೇರಿದ ಮಂತ್ರಿಯೋ ರ್ವನ ಪುತ್ರಿಯೊಂದಿಗೆ ಆದಯ್ಯನಿಗೆ ಪ್ರೇಮಾಂಕುರವಾಗಿ, ಆಕೆಯ ತಂದೆ ತಾಯಿಗಳ ವಿರೋಧದ ನಡುವೆಯೂ ಮಹಾರಾಜರ ಮತ್ತು ಮಂತ್ರಿ ಪುತ್ರಿಯು ಆದಯ್ಯನ ಮೇಲೆ ಇಟ್ಟಿರುವ ಅಚಲ ವಿಶ್ವಾಸದ ಬಲದಿಂದ ವಿವಾಹದಲ್ಲಿ ಪರ್ಯವಸಾನವಾಯಿತು. ಮಾವನ ಮನೆಯ ಹಿಂಭಾಗದಲ್ಲಿ ವಸತಿ ಹೂಡಿದ ಅಪ್ಪಟ ಶೈವ ಭಕ್ತನಾಗಿದ್ದ ಆದಯ್ಯನಿಗೆ ಸುಮಾರು 700ಕ್ಕೂ ಹೆಚ್ಚು ಬಸದಿಗಳು ಇರುವ ಲಕ್ಷ್ಮೇಶ್ವರದಲ್ಲಿ ಒಂದೇ ಒಂದು ಶಿವನ ದೇವಸ್ಥಾನವಿಲ್ಲದೆ ಇದ್ದುದು ಬಹಳ ಬೇಸರವನ್ನುಂಟು ಮಾಡಿತು. ಈ ಕುರಿತು ಅನೇಕ ಬಾರಿ ಮಹಾರಾಜರಲ್ಲಿ ಮನವಿ ಮಾಡಿಕೊಂಡಿದ್ದನಾತ.
ಒಂದು ಬಾರಿ ಶಿವ ಗಣಂಗಳಿಗೆ ಊಟದ ವ್ಯವಸ್ಥೆ ಮಾಡಿದ್ದ ಆದಯ್ಯ ಮತ್ತು ಆತನ ಪತ್ನಿ ಅವರಿಗಾಗಿ ಕಾಯುತ್ತಿದ್ದಾಗ ತಮ್ಮ ಮನೆಗೆ ಆಗಮಿಸಿದ ಜೈನ ಕುಲಬಾಂಧವರಿಗೆ ಇವರ ಮನೆಯ ಸಂಪೂರ್ಣ ಊಟವನ್ನು ಹೇಳದೆ ಕೇಳದೆ ದೌರ್ಜನ್ಯದಿಂದ ಒಯ್ದು ಉಣಬಡಿಸಿದರು ಆದಯ್ಯನ ಅತ್ತೆ ಮಾವ. ಊಟದ ಸಮಯಕ್ಕೆ ಬಂದು ನೋಡಿದ ಶಿವಗಣಗಳಿಗೆ ಅಲ್ಲಿ ಕಂಡದ್ದು ಚೆಲ್ಲಾಪಿಲ್ಲಿಯಾಗಿ ಬಿದ್ದ ಆಹಾರ ವಸ್ತುಗಳು ಮತ್ತು ಎಚ್ಚರ ತಪ್ಪಿ ಬಿದ್ದ ಆದಯ್ಯನ ಪತ್ನಿ. ಕುಪಿತರಾದ ಶಿವಗಣಗಳು ಅಲ್ಲಿಂದ ಹೊರಟು ಹೋದರು.
ಇದರಿಂದ ನೊಂದ ಆದಯ್ಯ ಮತ್ತು ಅವನ ಪತ್ನಿ ಮಹಾರಾಜರಲ್ಲಿ ದೂರನ್ನು ಒಯ್ದರು. ಅಲ್ಲಿ ಜೈನರು ಮತ್ತು ಶೈವರ ನಡುವೆ ಮಾತಿನ ಚಕಮಕಿ ನಡೆದು ಸ್ವತಃ ಜೈನನೇ ಆದ ಮಹಾರಾಜನು ಆದಯ್ಯನಿಗೆ ನಿನ್ನೂರು ಸೌರಾಷ್ಟ್ರಕ್ಕೆ ಕೇವಲ ಒಂದು ತಿಂಗಳಲ್ಲಿ ಕಾಲ್ನಡಿಗೆಯಲ್ಲಿ ಹೋಗಿ ಸೋಮನಾಥನ ಶಿವಲಿಂಗವನ್ನು ತಂದಲ್ಲಿ ಶಾಂತಿನಾಥ ಬಸದಿಯನ್ನು ಶಿವನ ದೇವಾಲಯವಾಗಿ ಪರಿವರ್ತಿಸಿ ನಿನ್ನ ಸುಪರ್ದಿಗೆ ಕೊಡುವೆನು ಎಂದು ಆದಯ್ಶನಿಗೆ ಶರತ್ತು ಹಾಕಿದನು. ಇದಕ್ಕೆ ಬದ್ಧನಾಗಿ ಆದಯ್ಯ ಪುಲಿಗೆರೆಯಿಂದ ಉತ್ತರದ ಸೌರಾಷ್ಟ್ರದ ಕಡೆ ಕಾಲ್ನಡಿಗೆಯಲ್ಲಿ ಪಯಣ ಬೆಳೆಸಿದನು.
ಕಾಡು ಮೇಡು ಗುಡ್ಡಗಳಲ್ಲಿ ಸುತ್ತುತ್ತಾ, ನಿರ್ಜನ ಪ್ರದೇಶಗಳಲ್ಲಿ ಒಂದೇ ಸಮನೆ ನಡೆಯುತ್ತಾ ಹೊರಟ ಆದಯ್ಯನ ಕಾಲುಗಳಲ್ಲಿ ಸುಡುವ ಬಿಸಿಲಿನಿಂದಾಗಿ ಬೊಬ್ಬೆಗಳು ಉಂಟಾಗಿ ಒಡೆದು ಕೀವು ರಕ್ತ ಸೋರಲಾರಂಭಿಸಿತು. ಬಿಟ್ಟುಬಿಡದೆ ಜ್ವರ ಕಾಡಲಾರಂಭಿಸಿತು. ಆದರೂ ಛಲ ಬಿಡದೆ ತೂರಾಡುತ್ತಾ ಸೌರಾಷ್ಟ್ರದೆಡೆ ನಡೆದನು ಆದಯ್ಯ. ಇನ್ನೇನು ಕಣ್ಣು ಕತ್ತಲಿಟ್ಟಂತಾಗಿ ತೂರಾಡುತ್ತಾ ಬೀಳುವ ಸ್ಥಿತಿಯಲ್ಲಿ ಆದಯ್ಯ ಇದ್ದಾಗ ಎದುರಿಗೆ ರಥದಲ್ಲಿ ಸೌರಾಷ್ಟ್ರದಲ್ಲಿದ್ದ ಆದಯ್ಯನ ಮೊದಲ ಪತ್ನಿ ಸೋಮನಾಥನ ಮೂರ್ತಿಯನ್ನು ತೆಗೆದುಕೊಂಡು ಬರುತ್ತಿದ್ದಳು. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತ ಣಿಂದೆತ್ತಣ ಸಂಬಂಧವಯ್ಯ ಎಂಬಂತೆ ಆದಯ್ಯನ ಮನದಾಸೆಯನ್ನು ದೂರದ ಸೌರಾಷ್ಟ್ರದಲ್ಲಿ ಕುಳಿತೆ ಅರಿತ ಪತ್ನಿ… ಇದನ್ನೇ ವಿಧಿವಿಲಾಸ ಎಂದು ಕರೆಯುವುದಲ್ಲವೇ. ಅದಕ್ಕೆ ಇರಬೇಕು ನಮ್ಮ ಪೂರ್ವಜರು ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂದು ಹೇಳಿದ್ದು. ತಂದೆ ತಾಯಿ ಸೋದರ ಸಂಬಂಧಿಗಳು ರಕ್ತ ಹಂಚಿಕೊಂಡು ಹುಟ್ಟಿದರೆ ಕೇವಲ ಋಣದಿಂದ ಜೊತೆಯಾಗುವ ಪತ್ನಿ ವಿಶೇಷವಲ್ಲವೇ!!
ಮುಂದೆ ನಡೆದದ್ದು ಇತಿಹಾಸ… ಕೇವಲ ಒಂದೆರಡು ದಿನಗಳಲ್ಲಿ ತನಗೆ ನೀಡಿದ ಗಡುವಿನ ಮಿತಿಯಲ್ಲಿಯೇ ಆದಯ್ಶ ಸೌರಾಷ್ಟ್ರ ಸೋಮನಾಥನ ಮೂರ್ತಿಯೊಂದಿಗೆ ಶೈವ ಸಂಪ್ರದಾಯದ ಸಾವಿರಾರು ಜನರೊಂದಿಗೆ ಪುರ ಪ್ರವೇಶ ಮಾಡಿದನು. ಮಹಾರಾಜನು ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಬಸದಿಯನ್ನು ಸಂಪೂರ್ಣವಾಗಿ ಶೈವರ ಸುಪರ್ದಿಗೆ ಬಿಟ್ಟು ಕೊಟ್ಟನು. ವಿದ್ಯುಕ್ತವಾಗಿ ದೇವರ ಪ್ರತಿಷ್ಠಾಪನೆ ಆಗುವವರೆಗೂ ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸಿದರು ಆದಯ್ಯ ಮತ್ತು ಅವನ ಇಬ್ಬರು ಪತ್ನಿಯರು. ದೇಗುಲವೆಲ್ಲ ಮಾವಿನ ಮತ್ತು ತೆಂಗಿನ ತಳಿರು ತೋರಣ ಮತ್ತು ಹೂಗಳಿಂದ ಅಲಂಕರಿಸಲ್ಪಟ್ಟಿತ್ತು. ಪತ್ನಿ ಸಮೇತ ವೃಷಭಾರೂಢ ಸೋಮನಾಥನ ಮೂರ್ತಿಯು ಹೂಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿತ್ತು.
ದೀಪಗಳು ಜ್ವಾಜ್ವಲ್ಯಮಾನವಾಗಿ ಬೆಳಕನ್ನು ಹರಡಿದ್ದವು. ಅಗರ ಬತ್ತಿಗಳ ಸುವಾಸನೆ ಎಲ್ಲೆಡೆ ಹರಡಿತ್ತು. ಒಟ್ಟಿನಲ್ಲಿ ಮಧುರ ಸಂಭ್ರಮದ ವಾತಾವರಣ ಅಲ್ಲಿ ಮನೆ ಮಾಡಿತ್ತು ಸೌರಾಷ್ಟ್ರಸೋಮನಾಥನಿಗೆ ಮಹಾ ಮಂಗಳಾರತಿಯಾದ ನಂತರ ದೇವರ ಮೂರ್ತಿಗೆ ನೆಲಕ್ಕೆ ಕುಳಿತು ತಲೆಬಾಗಿ ನಮಸ್ಕರಿಸಿದ ಆದಯ್ಯನ ಮೊದಲ ಪತ್ನಿ ಅಲ್ಲಿಯೇ ಕೊನೆಯುಸಿರೆಳೆದಳು. ಪತಿಯ ಆಸೆ ಆಶಯಗಳನ್ನು ಪೂರೈಸಲು ಸಾವಿರಾರು ಮೈಲುಗಳ ದೂರವನ್ನು ಕ್ರಮಿಸಿ ಬಂದ ಆ ಮಹಾಸಾಧ್ವಿ ಸೋಮನಾಥನಲ್ಲಿ ಲೀನವಾದಳು.
ಅದಕ್ಕೆ ಇರಬೇಕು ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪತ್ನಿಗೆ ಅರ್ಧನಾರೀಶ್ವರ ಸ್ಥಾನವನ್ನು ನೀಡಿರುವುದು….. ಎಷ್ಟು ಸತ್ಯವಲ್ಲವೇ ನಮ್ಮ ಶಿವಶರಣರು ಬರೆದದ್ದು ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ ಎಂದು ಹೇಳಿರುವುದು.
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ್