
ಸರ್ಕಾರಿ ಶಾಲೆ ದತ್ತು ಪಡೆದ ರೋಟರಿ ಕ್ಲಬ್ ಹಂಪಿ ಪರ್ಲ್ಸ್
ಕರುನಾಡ ಬೆಳಗು ಸುದ್ದಿ
ವಿಜಯನಗರ, 30- ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರದ ಜೊತೆಗೆ ಸಂಘ, ಸಂಸ್ಥೆಗಳೂ ಕೈಜೋಡಿಸುತ್ತಿರುವುದು ಸ್ವಾಗತಾರ್ಹ. ಮಕ್ಕಳು ಶ್ರದ್ಧೆಯಿಂದ ಶಿಕ್ಷಣ ಪಡೆದು, ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಹೇಳಿದರು.
ಹೊಸಪೇಟೆಯ ೮೮ ಮುದ್ಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ರೋಟರಿ ಕ್ಲಬ್ ಹಂಪಿ ಪರ್ಲ್ಸ್ ಹೊಸಪೇಟೆ, ಕಿರ್ಲೋಸ್ಕರ್ ಪೆರಸ್ ರೂರಲ್ ಟ್ರಸ್ಟ್ ಬೇವಿನಹಳ್ಳಿ ಸಹಯೋಗದಲ್ಲಿ ಹ್ಯಾಪಿ ಸ್ಕೂಲ್ ಯೋಜನೆಯಡಿ ಶಾಲೆಗೆ ನೀಡಲಾದ ಪೀಠೋಪಕರಣ, ಶುದ್ಧ ಕುಡಿಯುವ ನೀರಿನ ಘಟಕ, ನೋಟ್ ಪುಸ್ತಕ, ಪೆನ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಶಕಗಳ ಹಿಂದೆ ಸರ್ಕಾರಿ ಬಹುತೇಕ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇರುತ್ತಿರಲಿಲ್ಲ. ನೆಲದ ಮೇಲೆಯೇ ಕುಳಿತು ಕಲಿಯುವ ಸ್ಥಿತಿಯಿತ್ತು ಎಂದು ತಮ್ಮ ಬಾಲ್ಯವನ್ನು ನೆನೆಪಿಸಿಕೊಂಡ ಅವರು, ಇಂದು ದಾನಿಗಳಿಂದ ಪುಸ್ತಕ ಪಡೆದ ಮಕ್ಕಳು ಭವಿಷ್ಯದಲ್ಲಿ ಇತರರಿಗೆ ಕೊಡುಗೈ ದಾನಿಗಳಾಗಬೇಕು. ಈ ನಿಟ್ಟಿನಲ್ಲಿ ಕಲಿಕೆಯತ್ತ ಹೆಚ್ಚು ಒತ್ತು ನೀಡಬೇಕು ಎಂದು ಶುಭ ಹಾರೈಸಿದರು.
ಕಿರ್ಲೋಸ್ಕರ್ ಪೆರಸ್ ರೂರಲ್ ಟ್ರಸ್ಟ್ ಬೇವಿನಹಳ್ಳಿ ಕಾರ್ಯಕಾರಿ ಉಪಾಧ್ಯಕ್ಷ ಪಿ.ನಾರಾಯಣ ಮಾತನಾಡಿ, ನಮ್ಮ ಶಾಲೆ- ನಮ್ಮ ಜವಾಬ್ದಾರಿ ಯೋಜನೆಯಡಿ ಈ ಶಾಲೆಯನ್ನು ರೋಟರಿ ಕ್ಲಬ್ ಹಂಪಿ ಪರ್ಲ್ಸ್ ದತ್ತು ಪಡೆದುಕೊಂಡಿದ್ದು ಅಭಿನಂದನೀಯ. ಮಕ್ಕಳಿಗೆ ಅಗತ್ಯವಿರುವ ಪೀಠೋಪಕರಣ ಮತ್ತಿತರರು ಸೌಲಭ್ಯಗಳನ್ನು ಕಲ್ಪಿಸಿದ್ದಕ್ಕೆ ಖುಷಿಯಿದೆ. ಮುಂದಿನ ದಿನಗಳಲ್ಲೂ ಶಾಲೆಯ ಅಭಿವೃದ್ಧಿ ನೆರವಾಗುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ.ಉಮಾಪತಿ ಮಾತನಾಡಿ, ಜಿಲ್ಲಾ ಅಂಬೇಡ್ಕರ್ ಸಂಘ ದಶಕಗಳಿಂದ ನಾನಾ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಅದರಂತೆ ಅಂಬೇಡ್ಕರ್ ಅವರ ಸಿದ್ಧಾಂತದಡಿ ಶಿಕ್ಷಣಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಶಾಲೆಗೆ ಸುಣ್ಣ- ಬಣ್ಣದ ಖರ್ಚು ವೆಚ್ಚ ವಹಿಸಿಕೊಂಡಿದ್ದೇವೆ. ಅಭಿವೃದ್ಧಿಯಿಂದ ವಂಚಿತ ಸ್ಲಂಗಳಲ್ಲಿರುವ ಶಾಲೆಗಳ ಪ್ರಗತಿಗೆ ಸಮುದಾಯದ ಸಹಭಾಗಿತ್ವ ಅಗತ್ಯವೆಂದು ಒತ್ತು ಹೇಳಿದರು.
ರೋಟರಿ ಕ್ಲಬ್ ಹಂಪಿ ಪರ್ಲ್ಸ್ ಹೊಸಪೇಟೆ ಅಧ್ಯಕ್ಷೆ ವೀಣಾ ಕೊತ್ತಂಬ್ರಿ ಪ್ರಸ್ತಾವಿಕವಾಗಿ ಮಾತನಾಡಿ, ಶಾಲೆಯ ಮುಖ್ಯಗುರುಗಳ ಬೇಡಿಕೆಯಂತೆ ನಲಿ-ಕಲಿ ಮಕ್ಕಳಿಗೆ ೬೦ ಕುರ್ಚಿ, ೬ ಟೇಬಲ್, ೧೦ ಬೆಂಚ್, ೧ ಶುದ್ಧ ಕುಡಿಯುವ ನೀರಿನ ಘಟಕ, ೨ ಗ್ರೀನ್ ಬೋರ್ಡ್ ಒದಗಿಸಲಾಗಿದೆ ಎಂದು ವಿವರಿಸಿದರು.
ವೇದಿಕೆ ಮೇಲೆ ನಗರಸಭೆ ಸದಸ್ಯ ಬಿ.ಜೀವರತ್ನಂ, ಮಾಜಿ ಸದಸ್ಯ ಪಂಪಾಪತಿ, ರೋಟರಿ ಕ್ಲಬ್ ಹಂಪಿ ಪರ್ಲ್ಸ್ ಕಾರ್ಯದರ್ಶಿ ವಿದ್ಯಾ ಸಿಂಧಗಿ, ಪ್ರಮುಖರಾದ ಶೇಷು, ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷಿö್ಮÃದೇವಿ, ರೋಟರಿ ಕ್ಲಬ್ ಸದಸ್ಯ ಅಶ್ವಿನ್ ಕೊತ್ತಂಬ್ರಿ, ಬಿಆರ್‌ಪಿ ರೂಪಾ, ಸಿಆರ್‌ಪಿ ಅಶೋಕ, ಸ.ಪ್ರಾ.ಶಿ. ಸಂಘದ ಅಧ್ಯಕ್ಷ ಕೆ.ಬಸವರಾಜ, ಕಾರ್ಯದರ್ಶಿ ಮಲ್ಲಯ್ಯ, ಖಜಾಂಚಿ ದ್ಯಾಮಾನಾಯ್ಕ, ಮುಖ್ಯಗುರು ಎಸ್.ರಮೇಶ್, ಸಹ ಶಿಕ್ಷಕಿಯರಾದ ರಾಧಾ ಸಿ.ಎಸ್., ಪಾರ್ವತಿ ವಿ.ಬಿ. ಹಾಗೂ ರೋಟರಿ ಕ್ಲಬ್ ಹಂಪಿ ಪರ್ಲ್ಸ್ ಹೊಸಪೇಟೆ ಸದಸ್ಯರು ಮತ್ತಿತರರು ಉಸ್ಥಿತರಿದ್ದರು.