
ಸಾರ್ವಜನಿಕರು ಆರೋಗ್ಯ ಕಾರ್ಡ್‍ಗಳ ಸದುಪಯೋಗ ಪಡೆಯಿರಿ:
ಡಿಹೆಚ್‍ಓ ಡಾ.ವೈ ರಮೇಶ್‍ಬಾಬು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,ಡಿ.18 – ಬಡವರು ಸಹಿತ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸರ್ಕಾರ ರೂಪಿಸಿರುವ “ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ – ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ” ಕಾರ್ಡ್‍ಗಳನ್ನು ಪಡೆದು, ಆರೋಗ್ಯ ಸಮಸ್ಯೆಗಳ ಚಿಕಿತ್ಸಾ ಸಂದರ್ಭದಲ್ಲಿ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ ರೂ.5 ಲಕ್ಷ ಹಾಗೂ ಎಪಿಎಲ್ ಕುಟುಂಬಗಳಿಗೆ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚದ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಆಯುಷ್ಮಾನ್ ಭವಃದಡಿ ಆರೋಗ್ಯ ಮೇಳಗಳಲ್ಲಿ ಆಯುಷ್ಮಾನ್ ಕಾರ್ಡ್‍ಗಳಿಗೆ ನೋಂದಾಯಿಸಿಕೊಳ್ಳುವ ಮೂಲಕ ಇದರ ಸದುಪಯೋಗಪಡೆದುಕೊಳ್ಳಬಹುದು. ಮೇಳಗಳಲ್ಲಿ ಅಂಗಾಂಗ ದಾನ ನೋಂದಣಿ ಕುರಿತು ಜಾಗೃತಿ ಸಹ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ನೋಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 1885 ಜನರು ಅಂಗಾಂಗ ದಾನ ನೋಂದಣಿ ಮಾಡಿಕೊಂಡಿದ್ದು, ಬಳ್ಳಾರಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಿಕೆಗಾಗಿ ಆರೋಗ್ಯ ಮೇಳಗಳಲ್ಲಿ ಪ್ರತಿಯೊಬ್ಬರಿಗೂ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994ರ ಕುರಿತು ಜಾಗೃತಿ ನೀಡಲಾಗುತ್ತಿದೆ. ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳಿಗೆ 3ವರ್ಷ ಜೈಲು ಶಿಕ್ಷೆ ರೂ.10 ಸಾವಿರ ದಂಡ, ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದಲ್ಲಿ ಮೊದಲ ಅಪರಾಧಕ್ಕೆ 3ವರ್ಷ ಜೈಲು ಶಿಕ್ಷೆ ಮತ್ತು ರೂ.10 ಸಾವಿರ ದಂಡ, 2ನೇ ಬಾರಿ ಅಪರಾಧಕ್ಕೆ 5ವರ್ಷ ಜೈಲು ಶಿಕ್ಷೆ ರೂ.50 ಸಾವಿರ ದಂಡ ವಿಧಿಸುವ ಅವಕಾಶವಿದೆ. ಅಲ್ಲದೇ ಗರ್ಭಿಣಿ ಮಹಿಳೆಗೆ ಕುಟುಂಬದ ಸದಸ್ಯರು ಭ್ರೂಣಲಿಂಗ ಪತ್ತೆಗೆ ಒತ್ತಾಯಿಸಿದರೆ. ಮೊದಲ ಅಪರಾಧಕ್ಕೆ 3ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ದಂಡ, ಪುನಃ 2ನೇ ಬಾರಿ ಭ್ರೂಣಲಿಂಗ ಪತ್ತೆ ಮಾಡಿಸಿದಲ್ಲಿ 5ವರ್ಷ ಜೈಲು ಶಿಕ್ಷೆ ಮತ್ತು ರೂ.1 ಲಕ್ಷ ದಂಡ ವಿಧಿಸಲಾಗುವುದು ಎಂದೂ ಡಿಹೆಚ್‍ಓ ಡಾ.ವೈ ರಮೇಶ್ ಬಾಬು ಅವರು ತಿಳಿಸಿದರು.