veena patil

ಸಾಲವಾಗದಿರಲಿ….ಸುಳಿ

ವೀಣಾ ಹೇಮಂತ್ ಗೌಡ ಪಾಟೀಲ್

ಕರುನಾಡ ಬೆಳಗು

ಮೇಡಂ, ನಿಮ್ಮ ಮನೆಯ ಬಟ್ಟೆಗಳನ್ನ ಇಸ್ತ್ರಿ ಮಾಡಲು ನನಗೆ ಕೊಡುತ್ತೀರಾ? ಎಂದು ಆಕೆ ಕೇಳಿದಾಗ ಕೆಲಸದ ಒತ್ತಡದಿಂದ ಮನೆ ಕೆಲಸದ ಜೊತೆಗೆ ಇಸ್ತ್ರಿ ಮಾಡಿಕೊಳ್ಳಲು ಸಾಧ್ಯವಾಗದೇ ಹೋದ ಕಾರಣ ಆಕೆಗೆ ಕೇವಲ ಶರ್ಟುಗಳನ್ನು ಇಸ್ತ್ರಿ ಮಾಡಿಕೊಡಲು ಒಪ್ಪಿಕೊಂಡೆ.

ಆಕೆಯ ಮಕ್ಕಳು ನನ್ನ ಸಂಸ್ಥೆಯಲ್ಲಿ ನೃತ್ಯ ತರಬೇತಿಗೆ ಬರುತ್ತಿದ್ದರು. ಪ್ರತಿ ತಿಂಗಳು ಫೀ ಹಣವನ್ನು ತೆರಲು ತಾಪತ್ರಯ ಪಡುತ್ತಿದ್ದ ಆಕೆಯನ್ನು ಒಂದು ದಿನ ಕೂರಿಸಿಕೊಂಡು ಕಾರಣವನ್ನು ಕೇಳಿದಾಗ ಆಕೆ ಹೇಳಿದ್ದು ಹೀಗೆ.
ಮೇಡಂ.. ನನ್ನ ಗಂಡನಿಗೆ ಕಾರ್ಯಕ್ರಮಗಳಲ್ಲಿ ಅಡುಗೆ ಕೆಲಸದಲ್ಲಿ ಸಹಾಯ ಮಾಡುವ, ಊಟಕ್ಕೆ ಬಡಿಸುವ, ಪಾತ್ರೆ ತಿಕ್ಕುವ, ತೊಳೆಯುವ ಕೆಲಸಗಾರರನ್ನು ಒದಗಿಸುವ ಕಾಂಟ್ರಾಕ್ಟ ಕೆಲಸ ಇದೆ. ಆ ಕೆಲಸದಿಂದ ನಮ್ಮ ಜೀವನ ನಿರ್ವಹಣೆ ಅಷ್ಟೇನು ಕಷ್ಟವಲ್ಲ, ಆದರೆ ಇರುವ ಮೂರು ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಸಾಧ್ಯವಾಗುವುದಿಲ್ಲ. ಮಕ್ಕಳ ಓದಿನ ಕಾರಣ ಪಕ್ಕದ ಜಿಲ್ಲಾ ಕೇಂದ್ರದಿಂದ ಮರಳಿ ತವರಿಗೆ ಬಂದು, ತವರು ಮನೆಗೆ ಹತ್ತಿರದಲ್ಲಿಯೇ ಮನೆ ಮಾಡಿಕೊಂಡಿದ್ದು ನನ್ನ ತಂದೆ ತಾಯಿ ಕೂಡ ಮಾಡುವ ಅಡುಗೆ ಕೆಲಸಕ್ಕೆ ನಾನು ಸಹಾಯ ಮಾಡುತ್ತೇನೆ ಜೊತೆಗೆ ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದಳು.

ತುಸು ಸಹಾನುಭೂತಿಗೆ ಒಳಗಾದ ನಾನು ನಮ್ಮ ನೃತ್ಯ ಶಿಕ್ಷಕಿಯೊಂದಿಗೆ ಮಾತನಾಡಿ ಆಕೆಯ ಮೂರು ಜನ ಮಕ್ಕಳಲ್ಲಿ ಒಬ್ಬಾಕೆಗೆ ಶುಲ್ಕ ರಹಿತ ತರಬೇತಿ ನೀಡುವುದಾಗಿಯೂ ಪರೀಕ್ಷೆಯ ಶುಲ್ಕವನ್ನು ಮಾತ್ರ ಆಕೆಯೇ ಭರಿಸಬೇಕೆಂದು ಹೇಳಿ ಅಂತೆಯೇ ಕಳೆದ ವರ್ಷದಿಂದ ತರಬೇತಿ ಕೊಡುತ್ತಿದ್ದೇವೆ.

ಮುಂದೆ ವಾರಕ್ಕೊಮ್ಮೆ ನಾನು ಕರೆ ಮಾಡಿದಾಗ ಇಸ್ತ್ರಿಮಾಡುವ ಬಟ್ಟೆಗಳನ್ನು ಒಯ್ಯಲು ಬಂದಾಗಲೊಮ್ಮೆ ಆಕೆ ನನಗೆ ಸಾವಿರಗಳ ಲೆಕ್ಕದಲ್ಲಿ ಹಣ ಕೇಳಲು ಆರಂಭಿಸಿದಳು. ಮೊದಲು ಒಂದೆರಡು ಬಾರಿ ನಾನು ಕೊಟ್ಟ ಹಣವನ್ನು ನಿಗದಿತ ಸಮಯಕ್ಕೆ ಆಕೆ ಮರಳಿಸಲೇ ಇಲ್ಲ…. ನಾನೇ ಪದೇ ಪದೇ ಕೇಳಬೇಕಾಯಿತು. ಇದರಿಂದ ನನಗೆ ಹಣ ಕೊಡಲು
ತೊಂದರೆಯಾಯಿತು.ನಂತರ ಯಾವಾಗ ಬಟ್ಟೆಗಳನ್ನು ತೆಗೆದುಕೊಳ್ಳಲು ಬಂದರೂ ಆಕೆ ಹಣ ಕೇಳುವುದು ನಾನು ಆಕೆ ಕೇಳಿದಷ್ಟು ಹಣ ಇಲ್ಲ ಎಂದರೆ ಇಷ್ಟಾದರೂ ಕೊಡಿ ಎಂದು ಐನೂರು ಸಾವಿರ ರೂಗಳನ್ನಾದರೂ ಪಡೆಯದೆ ಆಕೆ ಮರಳುತ್ತಿರಲಿಲ್ಲವಾಗಿ ಇದು ತುಸು ಹೆಚ್ಛೇ ಅಸಹನೆಯನ್ನು ಮೂಡಿಸಿತ್ತು ನನ್ನಲ್ಲಿ.

ಮತ್ತೊಂದು ಬಾರಿ ಆಕೆ ಹೀಗೆ ಹಣ ಕೇಳಿದಾಗ ತುಸು ಬೇಸರದಿಂದ ಇಷ್ಟೊಂದು ದುಡ್ಡಿನ ತಾಪತ್ರಯದಿಂದ ಒದ್ದಾಡುವುದಾದರೆ ಬೇರೆ ಬೇರೆ ತರಗತಿಗಳಿಗೆ ಯಾಕೆ ಹಾಕಿದ್ದೀರಾ? ಯಾವಾಗಲೂ ಹಣದ ಸಮಸ್ಯೆ ಎನ್ನುವುದಾದರೆ ಜಾಣರಾದ ನಿಮ್ಮ ಮಕ್ಕಳನ್ನು ಟ್ಯೂಷನ್ ಗೆ ಯಾಕೆ ಕಳುಹಿಸುತ್ತೀರಾ ಎಂದು ನಾನು ಕೇಳಿದೆ. ( ಬೇರೆ ಕಡೆಗಳಲ್ಲಿ ಆಕೆ ಸಂಪೂರ್ಣ ಶುಲ್ಕವನ್ನು ಪಾವತಿ ಮಾಡುವ ಸುದ್ದಿ ಕೂಡ ನನಗೆ ದೊರೆತಿತ್ತು! ಆದರೂ ಒಬ್ಬರಿಗೆ ಶುಲ್ಕ ರಹಿತವಾಗಿ ಕಲಿಸಬೇಕೆಂಬ ನಮ್ಮ ಮಾತಿನಿಂದ ನಾವೇನು ಹಿಂದೆಗೆದಿರಲಿಲ್ಲ)

ಆಗ ಆಕೆ ಕೊಟ್ಟ ಸುಧೀರ್ಘವಾದ ವಿವರಣೆಯನ್ನು ಕೇಳಿ ನಾನು ದಂಗಾದೆ… ಹಾಗೇನು ಇಲ್ಲ ಮೇಡಂ. ತವರು ಮನೆಗೆ ಹತ್ತಿರ ಮನೆ ಮಾಡಿಕೊಂಡು ಬಂದ ಮೇಲೆ ಸಂಘಗಳಲ್ಲಿ ಧನಸಹಾಯ ಪಡೆದು ಎರಡು ತ್ರಿಚಕ್ರ ವಾಹನಗಳನ್ನು ಖರೀದಿಸಿ ಬಾಡಿಗೆಗೆ ಬಿಟ್ಟಿದ್ದೇವೆ. ಸಣ್ಣಪುಟ್ಟ ಕೇಟರಿಂಗ್ ಮಾಡುತ್ತೇವೆ, ಇಸ್ತ್ರಿ ಅಂಗಡಿ ತೆರೆದಿದ್ದೇನೆ. ಇನ್ನು ಸಂಘಗಳಲ್ಲಿ ಮಾಡಿರುವ ಸಾಲಕ್ಕೆ ಪ್ರತಿವಾರವೂ ಅಲ್ಲಿ ಹಣ ಕಟ್ಟಲೇಬೇಕು. ಅಲ್ಲಿ ಕೇಳಿದಾಗ ಇಲ್ಲಿ, ಇಲ್ಲಿ ಕೇಳಿದಾಗ ಮತ್ತೊಬ್ಬರ ಬಳಿ ದುಡ್ಡನ್ನು ಸಾಲವಾಗಿ ಪಡೆದು ಹಣ ಕಟ್ಟುತ್ತೇನೆ. ಮನೆ ಖರ್ಚನ್ನು ನಿಭಾಯಿಸಿಕೊಂಡು ಇದ್ದುದರಲ್ಲಿಯೇ ಒಂದು ಪುಟ್ಟ ಸೈಟನ್ನು ಖರೀದಿಸಿದ್ದು ಅದರ ಕಂತನ್ನು ಕೂಡ ಕಟ್ಟುವುದಿದೆ ಎಂದು ನಾಲ್ಕೈದು ಸಂಘಗಳ ಹೆಸರುಗಳನ್ನು ಹೇಳಿದಳು.

ಆಕೆಯ ತಿಂಗಳ ಒಟ್ಟು ಆಯ ವ್ಯಯಗಳನ್ನು ಕೇಳಿ ತಿಳಿದಾಗ ಒಂದೆಡೆ ಆಕೆಯ ಭಂಡ ಧೈರ್ಯಕ್ಕೆ ಮೆಚ್ಚುಗೆ ಎನಿಸಿದರೂ ಮತ್ತೊಂದೆಡೆ ತನ್ನ ಹಣಕಾಸಿನ ತೊಂದರೆಗೆ ನಮ್ಮನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದು…. ಅದೂ ಪ್ರತಿ ಬಾರಿ ನಮಗೆ ಸಾಲ ಕೊಟ್ಟವರಂತೆ ಹಣ ಕೇಳುವುದು ತುಸು ಹೆಚ್ಛೇ ಬೇಸರವನ್ನು, ರೇಜಿಗೆಯನ್ನು ಹುಟ್ಟಿಸಿತು.

ಇಷ್ಟೆಲ್ಲಾ ಒದ್ದಾಡುವ ಬದಲು ಇದ್ದುದರಲ್ಲಿಯೇ ಜೀವನ ಸಾಗಿಸುವ ಕುರಿತು ಯಾಕೆ ಯೋಚಿಸಬಾರದು ಎಂಬ ನನ್ನ ಪ್ರಶ್ನೆಗೆ ಹೀಗೆಲ್ಲ ಮಾಡುವುದರಿಂದಲೇ ನಮ್ಮಂತ ಬಡವರು ಮನೆ ಕಟ್ಟಿಕೊಂಡು ಜೀವನ ಸಾಗಿಸೋಕೆ ಸಾಧ್ಯ ಮೇಡಂ! ಮುಂದೆ ಮಕ್ಕಳು ದೊಡ್ಡವರಾದರೆ ಮನೆ ಕಟ್ಟಿಸೋಕೆ ಆಗುತ್ತಾ ? ಅವರ ಓದಿನ ಖರ್ಚು ವೆಚ್ಚಗಳು ಹೆಚ್ಚಾಗುತ್ತಾ ಹೋಗುತ್ತವೆ ಎಂದು ಆಕೆ ಹೇಳಿದಳು.

ತುಸು ಯೋಚಿಸಿದ ನಾನು ಆಕೆಗೆ ಹೀಗೆ ಹೇಳಿದೆ
‘ ನಿಮ್ಮ ಆತ್ಮ ಗೌರವಕ್ಕಿಂತ ಹೆಚ್ಚು ಬೇರಾವುದು ಇಲ್ಲ. ಅವರಿವರ ಬಳಿ ಪದೇ ಪದೇ ಹಣ ಕೇಳುವುದು, ನಿಗದಿತ ಸಮಯಕ್ಕೆ ಮರಳಿಸದೇ ಅವರಿಗೆ ಬೇಸರ ಹುಟ್ಟಿ ಅವರು ನಿಮ್ಮನ್ನು ನಿಕೃಷ್ಟವಾಗಿ ಕಾಣುವುದು ಇವೆಲ್ಲ ತಪ್ಪು ಅಂತ ನಿಮಗೆ ಅನಿಸೋದಿಲ್ಲವಾ?
ಪ್ರತಿದಿನವೂ ಸಾಲಕ್ಕೆ ದುಡ್ಡು ಹೊಂದಿಸಲು ಪರದಾಡುವ ಬದಲು ಒಂದಷ್ಟು ವಿಷಯಗಳಲ್ಲಿ ಹಿಡಿತ ತೋರಬಹುದಲ್ಲವೇ ಎಂದು ನಾನು ಹೇಳಿದೆನಾದರೂ
ಆಕೆಗೆ ಇದೆಲ್ಲಾ ಅರ್ಥ ಆಗಲೇ ಇಲ್ಲ.

ಪ್ರತಿ ಬಾರಿ ಇಸ್ತ್ರಿ ಮಾಡಲು ಬಟ್ಟೆಗಳನ್ನು ಒಯ್ಯಲು ಬಂದಾಗ ಹಣಕ್ಕಾಗಿ ಬೇಡಿಕೆ ಇಡುವ, ಪಟ್ಟು ಬಿಡದೆ ಒತ್ತಾಯದಿಂದ ವಸೂಲಿ ಮಾಡುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ನಾನೇ ಇಸ್ತ್ರೀ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಆಕೆಗೆ ಬಟ್ಟೆ ಕೊಡುವುದನ್ನು ಬಿಡಿಸಿ ಬಿಟ್ಟೆ. ತರಗತಿಯಲ್ಲಿ ಆಕೆಗೆ ಸಮಯ ಮಿತಿ ನೀಡುತ್ತಿದ್ದೇವೆ ಎಂಬುದು ನಿಜವಾದರೂ ಆಕೆಯಿಂದ ನಮಗೂ ತಾಪತ್ರಯ, ಕಿರಿಕಿರಿ ತಪ್ಪಿಲ್ಲ.

ಮೈಕ್ರೋ ಫೈನಾನ್ಸ್ ಗಳು, ಸಂಘ-ಸಂಸ್ಥೆಗಳು, ಮನೆ ಮನೆಗಳಿಗೆ ಬಂದು ಸಾಲ ಸೌಲಭ್ಯಗಳನ್ನು ನೀಡುತ್ತಿರುವುದು ನಂತರ ಕಂತಿನ ರೂಪದಲ್ಲಿ ವಸೂಲು ಮಾಡುತ್ತಿರುವುದು ಬಹಳಷ್ಟು ಕೆಳ ಮಧ್ಯಮ ವರ್ಗ ಮತ್ತು ಬಡ ಜನರಿಗೆ ಅನುಕೂಲವಾಗುತ್ತಿರುವುದೇನೋ ನಿಜ, ಆದರೆ
ಕತ್ತಿನ ಮೇಲೆ ಕುಳಿತಂತೆ ಸಾಲ ವಸೂಲಾತಿಯನ್ನು ಮಾಡುತ್ತಿರುವುದು ಕೂಡ ಅಷ್ಟೇ ನಿಜ.

ಸಾಲವನ್ನು ಪಡೆಯುವಾಗ ಮರಳಿ ಕಟ್ಟುತ್ತೇವೆ ಎಂದು
ಹಣವನ್ನು ಪಡೆದ ಜನರು ಅನಿವಾರ್ಯ ಕಾರಣಗಳಿಂದ ಹಣವನ್ನು ಮರಳಿಸದೆ ಹೋದಾಗ ಸಾಲ ಕೊಟ್ಟವರು ಸಹಜವಾಗಿಯೇ ಹಣ ವಸೂಲಿಗೆ ಇಳಿಯುತ್ತಾರೆ. ಕೊಡುವ ಮತ್ತು ತೆಗೆದುಕೊಳ್ಳುವ ಈ ವ್ಯವಹಾರದಲ್ಲಿ ಪರಸ್ಪರ ಬದ್ಧತೆ ಇದ್ದರೆ ಮಾತ್ರ ಅಂತಹ ವ್ಯವಹಾರಗಳು ಸಾಧ್ಯವಾಗುತ್ತವೆ… ಮತ್ತು ಆಗಬೇಕು ಕೂಡ.

ಇಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸದೆ, ಸಾಲ ಕೊಟ್ಟವರು ಮತ್ತು ಪಡೆದುಕೊಂಡವರಾರನ್ನೂ ದೂರದೆ
ನಾವು ಮಾಡಬಹುದಾದದ್ದು ಇಷ್ಟು.

* ನಮ್ಮ ಹಿರಿಯರು ಹೇಳಿದಂತೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ನಮಗಿರುವ ಆದಾಯದಲ್ಲಿ ಸಾಧ್ಯವಾದಷ್ಟು ಅನುಕೂಲಗಳನ್ನು ಕಲ್ಪಿಸಿಕೊಳ್ಳಬೇಕು.

*ಸಾಲ ಮಾಡಲೇಬಾರದು ಎಂಬ ಮಿತಿಯನ್ನು ನಮಗೆ ನಾವೇ ಕಡ್ಡಾಯವಾಗಿ ಹೇರಿಕೊಂಡು ಅದರಂತೆ ನಡೆಯಲು ಪ್ರಯತ್ನಿಸಬೇಕು.

*ಅವಕಾಶಗಳು ಇವೆ ಎಂದು ಆಕಾಶಕ್ಕೆ ಏಣಿ ಹಾಕದೆ ನಮ್ಮ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ನಮ್ಮ ಆರ್ಥಿಕ ಆಯವ್ಯಯಗಳನ್ನು ಸರಿದೂಗಿಸಬೇಕು.

*ಎಲ್ಲರೂ ಎಲ್ಲವನ್ನೂ ಎಲ್ಲಾ ಕಾಲದಲ್ಲಿಯೂ ಮಾಡಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತು ಯಾವುದಾದರೂ ಒಂದು ನಿಶ್ಚಿತ, ನಿಗದಿತ ಗಳಿಕೆಯ ದಿಕ್ಕಿನಲ್ಲಿ ಮುಂದುವರೆಯಬೇಕು.

*ಹಣಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಮುಖ ಕೆಡಿಸಿಕೊಂಡಾಗ ಆ ವ್ಯಕ್ತಿಯು ಸಾಮಾಜಿಕವಾಗಿ ಮೌಲ್ಯ ಕಳೆದುಕೊಳ್ಳುತ್ತಾನೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಧೈರ್ಯ ಇರಬೇಕು ನಿಜ, ಆದರೆ ಹುಂಬತನ, ಲಜ್ಜೆಗೇಡಿತನ ಇರಬಾರದು.

*ಎಲ್ಲರೂ ಎಲ್ಲರಿಗೂ, ಎಲ್ಲಾ ಸಮಯದಲ್ಲಿಯೂ ಸಹಾಯ ಮಾಡಲು ಸಾಧ್ಯವಿಲ್ಲ… ಬೇರೆಯವರ ಸಹಾಯ ಮಾಡುತ್ತಾರೆ ಎಂದು ಪದೇ ಪದೇ ಹಣಕಾಸಿನ ಸಹಾಯ ಕೇಳಿದಾಗ ಅವರಿಗೆ ಕಿರಿಕಿರಿಯಾಗಿ ನಿಮ್ಮನ್ನು ದೂರವಿಡಬಹುದು.

ಇಂತಹ ಕೆಲವು ಉಪಾಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಲದ ಸುಳಿಯಿಂದ
ನೀವೂ ತಪ್ಪಿಸಿಕೊಳ್ಳಿ ನಿಮ್ಮವರನ್ನು ಕೂಡ ರಕ್ಷಿಸಿ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!