
ಕನಕದಾಸ ಜಯಂತಿ ಪೂರ್ವಭಾವಿ ಸಭೆ
ಸಿಎಂ ಸಿದ್ದರಾಮಯ್ಯರಿಂದ ಕೊಪ್ಪಳದ ಕನಕದಾಸ ಮೂರ್ತಿ ಅನಾವರಣ
ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೭- ಜನವರಿಯಲ್ಲಿ ವಿಶ್ವಮಾನವ ಕನಕದಾಸರ ಮೂರ್ತಿ ಅನಾವರಣ ಕಾರ್ಯಕ್ರಮ ಹಿನ್ನೆಲೆ ನ.30ರಂದು ನಡೆಯಲಿರುವ ಕನಕದಾಸ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತದೆ ಎಂದು ಕರ್ನಾಟಕಕುರುಬರ ಬೋರ್ಡಿಂಗ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಹೇಳಿದರು.
ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ದಿ. ಕರ್ನಾಟಕ ಕುರುಬರ ಬೋರ್ಡಿಂಗ್ ವತಿಯಿಂದ ಸೋಮವಾರ ಹಮ್ಮಿಕೊಂಡ ಕನಕದಾಸ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಕಳೆದ ಮೂರು ವರ್ಷದಿಂದ ಕನಕದಾಸ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಈ ಬಾರಿ ಜಿಲ್ಲಾದ್ಯಂತ ಅದ್ದೂರಿಯಾಗಿ ಕನಕದಾಸ ಜಯಂತಿ ಆಚರಣೆ ಮಾಡಬೇಕೆಂಬ ಅಭಿಲಾಷೆ ಸಮಾಜದ ಅನೇಕ ಮುಖಂಡರಲ್ಲಿತ್ತು. ಆದರೆ, ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ಭಕ್ತ ಕನಕದಾಸರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಜನವರಿಯಲ್ಲಿ ನಡೆಯಲಿರುವ ಹಿನ್ನಲೆ ನ.30ರಂದು ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಜನವರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಕನಕದಾಸ ಮೂರ್ತಿ ಅನಾವರಣ ಹಾಗೂ ಸಮಾಜದ ಸಮುದಾಯ ಭವನದ ಭೂಮಿಪೂಜೆ ಸೇರಿದಂತೆ ಇತರೆ ಕಾರ್ಯಕ್ರಮ ನಡೆಯಲಿದೆ, ಅಂದೇ ವಿಜೃಂಭಣೆಯಿಂದ ನಾವೆಲ್ಲರೂ ಕನಕದಾಸರ ಜಯಂತಿ ಆಚರಿಸೋಣ
ಎಂದು ತಿಳಿಸಿದರು.
ಸನ್ಮಾನ: ಇತ್ತೀಚಿಗೆ ರಾಜ್ಯ ಸಹಕಾರಿ ಪ್ರಶಸ್ತಿ ಗೆ ಭಾಜನರಾದ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಮತ್ತು ಅಮರೇಶ ಉಪಲಾಪುರ ಅವರನ್ನು ಕಾಳಿದಾಸ ಶಿಕ್ಷಣ ಸಂಸ್ಥೆ ಮತ್ತು ದಿ.ಕರ್ನಾಟಕ ಕುರುಬರ ಬೋರ್ಡಿಂಗ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಈ ವೇಳೆ ಸಮಾಜದ ಮುಖಂಡರಾದ ಅಮರೇಶ ಉಪಲಾಪುರ, ಭರಮಪ್ಪ ಹಟ್ಟಿ, ರಾಮಣ್ಣ ಹಳ್ಳಿಗುಡಿ, ಜಗದೀಶ ಕರ್ಕಿಹಳ್ಳಿ, ಜಂಬಣ್ಣ ನಂದ್ಯಾಪುರ, ಸೋಮಣ್ಣ ಭೈರಾಪುರ, ಹನುಮಂತ ಹಳ್ಳಿಕೇರಿ, ಆನಂದ ಕಿನ್ನಾಳ, ಮುದ್ದಪ್ಪ ಬೇವಿನಹಳ್ಳಿ, ಬಸವರಾಜ ಲೇಬಗೇರಿ, ಕಾಳಿದಾಸ ವಿದ್ಯಾಸಂಸ್ಥೆ ಪ್ರಾಚಾರ್ಯ ನಾಗನಗೌಡ ಜುಮ್ಮನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.