
ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಸಮಯೋಚಿತ ಬಜೆಟ್ ಮಂಡಿಸಿದ ಸಿದ್ದರಾಮಯ್ಯ
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅನಿಸಿಕೆ
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ನಾಗರೀಕರಿಂದ ರಾಯರಡ್ಡಿಗೆ ಅಭಿನಂದನಾ ಸಮಾರಂಭ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 09-ನಾಡಿನ ಜನರ ಬಗ್ಗೆ ಬದ್ಧತ, ಕಳಕಳಿ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಸಮಯೋಚಿತ ಆಯವ್ಯಯ ಮಂಡಿಸಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಅತೀ ಹೆಚ್ಚಿನ ಯೋಜನೆಗಳನ್ನು ಜಾರಿಗೊಳಿಸಲು ಕಾರಣೀಕರ್ತರಾದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಿಗೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸಮಸ್ತ ನಾಗರೀಕರ ಪರವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ಮತ್ತು ನನ್ನ ನಡುವೆ ೪೦ ವರ್ಷಗಳ ರಾಜಕೀಯ ಮೀರಿದ ಬಾಂಧವ್ಯ ಇದೆ. ನಮ್ಮಿಬ್ಬರ ಆತ್ಮೀಯತೆ ಗಟ್ಟಿಯಾಗಲು ಜನಪರ ಚಿಂತನೆಯಾಗಿದೆ. ಬದ್ಧತೆಯಿಂದ ಜನರಿಗೆ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ರಾಜಕಾರಣಕ್ಕೆ ಬಂದಿದ್ದೇನೆ ಹೊರತು ಅಧಿಕಾರದ ಆಸೆಗಲ್ಲ ಎಂದರು.
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಸಮಾಜದ ಎಲ್ಲಾ ವರ್ಗದ ಜನರನ್ನು ತೃಪ್ತಿಪಡಿಸಲಾಗಿದೆ. ಎಲ್ಲರಿಗೂ ಆದ್ಯತೆ ನೀಡಲಾಗಿದೆ. ಈ ಬಾರಿ ಬಜೆಟ್ ತಯಾರಿ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರು ಹೃದಯ ವೈಶಾಲ್ಯತೆಯಿಂದ ನನಗೆ ಹೆಚ್ಚಿನ ಜವಾಬ್ದಾರಿ ಕೊಟ್ಟಿದ್ದರು. ಅಂದಾಜು ೪ ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗಿದೆ ಎಂದರು.
ಬಜೆಟ್ ಕುರಿತು ಏನೂ ಗೊತ್ತಲ್ಲದ ಕೆಲ ವಿರೋಧ ಪಕ್ಷದ ನಾಯಕರು ಬಾಯಿಗೆ ಬಂದಂತೆ ಮಾತಾಡುತ್ತಾರೆ. ಅವರಿಗೆ ಜವಾಬ್ದಾರಿ ಗೊತ್ತಿಲ್ಲ. ಹಗುರವಾಗಿ ಮಾತನಾಡುವುದು ಸರಿಯಲ್ಲ. ಮಾತನಾಡುವಾಗ ಬಾಯಿ ಹಿಡಿತದಲ್ಲಿರಬೇಕು. ಹಿಂದು-ಮುಸ್ಲಿಂರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕಾನೂನು ಗೊತ್ತಲ್ಲದೇ ಶಾಸಕನಾದರೆ ಏನೂ ಪ್ರಯೋಜನವಿಲ್ಲ. ರಾಜ್ಯದಲ್ಲಿ ಶೇ.೧೬ರಷ್ಟಿರುವ ಅಲ್ಪಸಂಖ್ಯಾತರಿಗೆ ೪೫೦೦ ಕೋಟಿ ರೂ. ಬಜೆಟ್ ಕೊಡಲಾಗಿದೆ. ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಂರಲ್ಲ ಎನ್ನುವುದನ್ನು ವಿರೋಧ ಪಕ್ಷದವರು ತಿಳಿದುಕೊಳ್ಳಬೇಕು. ಬಜೆಟ್‌ನಲ್ಲಿ ಕೇವಲ ಶೇ.೧ರಷ್ಟು ಮುಸ್ಲಿಂರ ಪಾಲಾಗಿದೆ. ಅದು ಅವರ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ. ರಾಜ್ಯ ವಲಯದಲ್ಲಿ ಸಿದ್ದರಾಮಯ್ಯ ಅವರು ಸಮತೋಲನ ಆಯವ್ಯಯ ಮಂಡಿಸಿದ್ದಾರೆ ಎಂದರು.
ನೀರಾವರಿ ಆಗಲು ೧ ಲಕ್ಷ ಕೋಟಿ ರೂ. ಬೇಕು. ಆರ್ಥಿಕ, ತಾಂತ್ರಿಕ ಮತ್ತು ಕಾನೂನು ಸಮಸ್ಯೆ ಇರುವುದರಿಂದ ನದಿ ನೀರನ್ನು ಕೆರೆಗಳಿಗೆ ತುಂಬಿಸಿ, ಬಳಕೆಗೆ ಯೋಗ್ಯವಾಗಿದೆ. ಇಷ್ಟೆಲ್ಲ ತಿಳಿಯದ ಬಿಜೆಪಿಯವರು ಹಾಕಿದ ಅಡ್ಡಗಲ್ಲಿಗೆ ಅಡಿಗಲ್ಲು ಅನ್ಬೇಕಾ? ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ೩೪ ಲಕ್ಷ ಬೋರ್‌ವೆಲ್ ಇವೆ. ೧೮ ಲಕ್ಷ ರೂ. ಸಬ್ಸಿಡಿ ಕೊಡಲಾಗುತ್ತಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಲಾಗಿದೆ. ಸರ್ಕಾರ ಜನಪರ, ಬಡವರ ಪರ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ೫ ಸಾವಿರ ಕೋಟಿ ರೂ. ನೀಡಲಾಗಿದೆ. ೯೭೦ ಕೋಟಿ ರೂ. ಅನುದಾನದಲ್ಲಿ ೩೮ ಕೆರೆಗಳನ್ನು ತುಂಬಿಸಲು ಮಂಜೂರಾತಿ ಸಿಕ್ಕಿದೆ. ಇದಕ್ಕೆ ಸಮರ್ಪಕವಾಗಿ ಭೂಮಿ ಸಿಗುತ್ತಿಲ್ಲ. ಇದ್ದ ಕೆರೆಗಳಿಗೆ ನೀರು ತುಂಬಿಸುವಂತೆ ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಧೋಳದಿಂದ ಬನ್ನಿಕೊಪ್ಪದವರೆಗಿನ ಕೆರೆಗಳು ಭರ್ತಿಯಾಗುತ್ತವೆ. ಅಭಿವೃದ್ಧಿ ಕೆಲಸದಲ್ಲಿ ಸಹಕಾರ ಇರಬೇಕು. ಎಪ್ರಿಲ್ ತಿಂಗಳಲ್ಲಿ ಕೆರೆ ತುಂಬಿಸುವ ಕಾಮಗಾರಿಯ ಟೆಂಡರ್ ಆಗುತ್ತವೆ ಎಂದರು.
ವೇದಿಕೆ ಅಲಂಕರಿಸದೆ ರೈತರಿಗೆ ಗೌರವ ನೀಡಿದ ರಾಯರಡ್ಡಿ
ಯಲಬುರ್ಗಾ ಟ್ಟಣದ ಬಯಲು ರಂಗಮಂದಿರದಲ್ಲಿ ಸಮಸ್ತ ನಾಗರೀಕರ ಪರವಾಗಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ವೇದಿಕೆಯಲ್ಲಿ ರಾಯರಡ್ಡಿ ಅವರು ವೇದಿಕೆ ಅಲಂಕರಿಸದೆ ರೈತರು, ಆರೋಗ್ಯ ಅಧಿಕಾರಿಗಳು, ಕ್ರೀಡಾಪಟುಗಳು, ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೇ ಬಜೆಟ್ ಕುರಿತು ಅವರು ಹಂಚಿಕೊಂಡ ಅಭಿಪ್ರಾಯಗಳನ್ನು ಆಲಿಸುತ್ತಾ ವೇದಿಕೆ ಮುಂಭಾಗದಲ್ಲಿ ಮುಖಂಡರು, ಸಾರ್ವಜನಿಕರ ಜೊತೆ ಕುಳಿತುಕೊಂಡಿರುವುದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಎಲ್ಲರೂ ರಾಯರಡ್ಡಿ ಈಸ್ ಡಿಫರೆಂಟ್ ಎಂದು ಹಾಡಿ ಹೊಗಳಿದರು.
ಇದೇ ವೇಳೆಯಲ್ಲಿ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ್, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಟಿಎಚ್ಒ ಅಮರೇಶ ನಾಗರಾಳ, ಡಾ.ಶೇಖರ ಭಜಂತ್ರಿ, ಡಾ.ಸಿ.ಎಂ.ಹಿರೇಮಠ, ಕ್ರೀಡಾ ಅಧಿಕಾರಿ ಜಾಬಗೌಡ್ರ, ಗಣ್ಯರಾದ ರಾಘವೇಂದ್ರಾಚಾರ್ ಜೋಶಿ, ಯಂಕಣ್ಣ ಯರಾಶಿ, ವೀರನಗೌಡ ಬಳೂಟಗಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಕೆರಿಬಸಪ್ಪ ನಿಡಗುಂದಿ, ಶೇಖರಗೌಡ ಉಳ್ಳಾಗಡ್ಡಿ, ರಾಮಣ್ಣ ಸಾಲಭಾವಿ, ಚಂದ್ರಶೇಖರ ಭಾನಾಪುರ, ಆನಂದ ಉಳ್ಳಾಗಡ್ಡಿ, ಡಾ.ನಂದಿತಾ ಶಿವನಗೌಡ ದಾನರಡ್ಡಿ, ಹನುಮಂತಗೌಡ ಪಾಟೀಲ್, ಹಂಪಯ್ಯಸ್ವಾಮಿ ಹಿರೇಮಠ, ಸುಧೀರ ಕೊರ್ಲಹಳ್ಳಿ, ಬಿ.ಎಂ.ಶಿರೂರು, ಮಲ್ಲನಗೌಡ ಪಾಟೀಲ್, ಶರಣಪ್ಪ ಗಾಂಜಿ, ಮಲ್ಲಿಕಾರ್ಜುನ ಜಕ್ಕಲಿ, ಯಲ್ಲಪ್ಪ ಹಂದ್ರಾಳ, ಮಹಾಂತೇಶ ಗಾಣಿಗೇರ, ಹೇಮರೆಡ್ಡಿ ರಡ್ಡೇರ್, ಶಂಕರ ಬಣಕಾರ, ಮಲ್ಲಮ್ಮ ಗೊಂದಿ, ಸಾವಿತ್ರಿ ಗೊಲ್ಲರ್, ಫರೀದಾ ಬೇಗಂ, ಶರಣಮ್ಮ ಪೂಜಾರ್, ಪುನೀತ ಕೊಪ್ಪಳ ಸೇರಿದಂತೆ ಮತ್ತಿತರರು ಇದ್ದರು.