
ಮನೆಯಲ್ಲೇ ಖುಷಿಯಿಂದ ಮತ ಚಲಾಯಿಸಿದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 25- ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ವಿವಿಧ ವಾರ್ಡ್ ಗಳಲ್ಲಿನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಂದ ಇಂದು ಅಂಚೆ ಮತದಾನ ಮಾಡಿಸಲಾಯಿತು. ಜಿಲ್ಲಾಧಿಕಾರಿಗಳ ನಿಯೋಜಿತ ಚುನಾವಣೆ ಅಧಿಕಾರಿಗಳ ತಂಡ ಮನೆ ಮತದಾನ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಸಿದರು.
ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಗೆ ಮನೆಯಲ್ಲೆ ಮತದಾನ ಮಾಡಲು ಚುನಾವಣೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದವರು ಮನೆಯಲ್ಲೇ ಮತದಾನ ಮಾಡಿ ಖುಷಿಪಟ್ಟರು. ಹಿರಿಯ ನಾಗರಿಕರ ಕುಟುಂಬಸ್ಥರು ಕೂಡ ಭಾರತ ಚುನಾವಣೆ ಆಯೋಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷ್ಣಾಪುರದ ವಿಶೇಷಚೇತನರಾದ ಚಿಲಕೂರಿ ಶ್ರೀನಿವಾಸ ಅವರು ಮತ ಚಲಾಯಿಸಿ ಮಾತನಾಡಿ ಮೇ-7 ರಂದು ಜರುಗುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ. ಮತದಾನ ಪ್ರಕ್ರಿಯೆಯಿಂದ ಯಾರು ಸಹ ದೂರ ಉಳಿಯಬಾರದು. ಚುನಾವಣೆ ಆಯೋಗವು ನಮ್ಮಂತವರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದಾಪುರ ಗ್ರಾಮದಲ್ಲಿ ವಿಶೇಷಚೇತರ 9, ಹಿರಿಯ ನಾಗರಿಕರು 4 ಮತ ಚಲಾಯಿಸಿದರು ಒಟ್ಟು 13 ಅಂಚೆ ಮತದಾನವಾಯಿತು.
ಈ ವೇಳೆ ತಹಶಿಲ್ದಾರಾದ ಎಂ.ಕುಮಾರ ಸ್ವಾಮಿ, ಕಂದಾಯ ನಿರೀಕ್ಷರಾದ ಶರಣಪ್ಪ, ಸೆಕ್ಟರ್ ಅಧಿಕಾರಿಗಳಾದ ಮಲ್ಲಿಕಾರ್ಜುನ, ಕಿಶೋರ್ , ನಾಗರಾಜ್, ಗ್ರಾಮ ಲೆಕ್ಕಾಧಿಕಾರಿಗಳಾದ ಗ್ರಾಮ ಮರುಳಸಿದ್ದಪ್ಪ ಸೇರಿದಂತೆ ಇತರರು ಇದ್ದರು.