
ಸೌಜನ್ಯವೆತ್ತ ಶಕ್ಷಕಿ ಮಾಲಾ ಮೇಡಂ
: ಶಿ,ಕಾ ಬಡಿಗೇರ
ಕರುನಾಡ ಬೆಳಗು
‘ನಹೀ ಜ್ಞಾನೇನ ಸದೃಶಂ’, ಎನ್ನುತ್ತದೆ ಭಗವದ್ಗೀತೆ. ಜ್ಞಾನಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ ಬೇರೊಂದಿಲ್ಲ ಎಂಬುದೇ ಇದರ ಅರ್ಥ. ಜ್ಞಾನ ಸಂಪಾದನೆ ಸರಳ ಅಲ್ಲ. ಗುರು ಕಾಣಿಕೆ ಸಲ್ಲಿಸಿಯೇ ಅದನ್ನು ಪಡೆಯಬೇಕೆಂಬುದು ಸರ್ವ ವಿದಿತ. ಅಂಥ ಕಠಿಣ ನಿಲುವು ಅನುಸರಿಸಿ ಜ್ಞಾನ ಪಡೆದು ಅಕ್ಷರ ಲೋಕದಲ್ಲಿ ಎದ್ದು ನಿಂತ ಲೇಖಕಿ ಮಾಲಾ ಡಿ ಬಡಿಗೇರ. ಕೊಪ್ಪಳ ತಾಲೂಕು ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಅವರು ಅಭಿನಂದನೆಗೆ ಅರ್ಹರು.
ಎಲ್ಲರಿಗೂ ಸಂಪತ್ತು, ಜ್ಞಾನ , ವಿವೇಕ, ಪರೋಪಕಾರ ಮನಸ್ಥಿತಿ ಸಿಗದು. ಕೆಲವರಿಗೆ ಮಾತ್ರ ಇಂಥ ಅವಕಾಶಗಳು ಲಭ್ಯವಾಗುತ್ತವೆ. ‘Courtesy seeks rare souls’
ಅನ್ನುವುದು ಆಫ್ರಿಕಾದ ಒಂದು ಸುಭಾಷಿತ. ಅಂಥ ವಿರಳಾತೀ ವಿರಳರಲ್ಲಿ ಒಬ್ಬರು ಮಾಲಾ ದೇವೇಂದ್ರಪ್ರ ಬಡಿಗೇರ.
ನೆಲಮೂಲ: ಇವರು ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ‘ಹಿರೇಕುಂಬಿ’
ಹೆಸರಿನ ಗ್ರಾಮದವರು. ೧೯೫೨ ರಲ್ಲಿ ತಾಯಿಯ ತವರು ‘ಚುಳಕಿ’ಯಲ್ಲಿ ಜನಿಸಿದರು. ಕಿತ್ತು ತಿನ್ನುವ ಬಡತನ.
ಇಡೀ ಸಂಸಾರದ ಹೊಣೆ ಹೊತ್ತ ಅಪ್ಪ ಕೆಲಸವಿಲ್ಲದೇ ಅದೆಷ್ಟೋ ದಿನಗಳನ್ನು ಅಲೆಮಾಯಾಗಿ ಕಳೆದದ್ದು ಇದೆ.
ಗುರಪ್ಪ ಪತ್ತಾರ. ಕನ್ನಡ ಚಲನಚಿತ್ರ ಹಾಸ್ಯ ಕಲಾವಿದ ದಿ. ನರಸಿಂಹರಾಜು ಅವರನ್ನು ಪೂರ್ಣ ಹೋಲುವ ಹೋಲಿಕೆ. ನಿಷ್ಟಾವಂಥ ವ್ಯಕ್ತಿ. ದುಡಿದು ಬದುಕು ಕಟ್ಟಿಕೊಳ್ಳುವಲ್ಲಿ ಸೋತು, ಹೊಟ್ಟೆ ಪಾಡಿಗೆ ಹುಬ್ಬಳ್ಳಿ ಶಹರಕ್ಕೆ ವಲಸೆ ಬರುತ್ತಾರೆ. ಹುಬ್ಬಳ್ಳಿಯ ‘ದುರ್ಗದಬೈಲು’ ಪ್ರದೇಶದಲ್ಲಿ ತಂದೆ ಗುರಪ್ಪ ಪತ್ತಾರ ತಮ್ಮ ಮನೆತನದ ವೃತ್ತಿ ಅಕ್ಕಸಾಲಿಕೆಯನ್ನು ಮಾಡುತ್ತಿದ್ದರು.
ತಾಯಿ ಈರಮ್ಮ ಮನೆಗೆಲಸದ ಒಡತಿ.
ಮನೆಯ ಎಲ್ಲ ಮಕ್ಕಳನ್ನು ಜೋಪಾನ ಮಾಡುವ ಬಹುದೊಡ್ಡ ಹೊಣೆಗಾರಿಕೆ.
ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿ ವಾಸ.
ಹುಬ್ಬಳ್ಳಿಯ ರಾಜರ್ಷಿ ಜಗದ್ಗುರು ಗಂಗಾಧರ ಶಿವಯೋಗಿಗಳ
ಮೂರು ಸಾವಿರ ಮಠದ ವಿದ್ಯಾಲಯದಲ್ಲಿ ಶಿಕ್ಷಣ ಪಡೆದು, ಅಲ್ಲಿಯೇ ಬಿ ಎ ಪದವಿಯನ್ನು ಗಳಿಸಿಕೊಳ್ಳುತ್ತಾರೆ. ತಮ್ಮ ಬಿ ಇಡಿ ಅಧ್ಯಯನಕ್ಕೆ ಗಂಗಾವತಿಯ
ಟಿ ಎಂ ಎ ಈ ಶಿಕ್ಷಣ ಸಂಸ್ಥೆಗೆ ಸೇರಿ ಬಿ ಇಡಿ ಪದವಿ ೧೯೮೦ ರಲ್ಲಿ ಪಡೆದು ಹುಬ್ಬಳ್ಳಿಗೆ ಹಿಂತಿರುಗಿದರು.
೧೯೮೧ ರಲ್ಲಿ ಉಪ್ಪಿನ ಬೆಟಗೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರುತ್ತಾರೆ.
ಅದೇ ಊರಿನ ಬಿ ಈಡಿ ಪದವಿಧರ ದೇವೇಂದ್ರಪ್ಪ ಬಡಿಗೇರ ಅವರನ್ನು ಮದುವೆಯಾಗುತ್ತಾರೆ. ಕೆಲವು ವರುಷಗಳ ಬಳಿಕ ಈಗಿನ ಕುಕನೂರು ತಾಲೂಕು ಮಂಗಳೂರು ಹೋಬಳಿಗೆ ಪ್ರೌಢ ಶಾಲಾ ಶಿಕ್ಷಕಿಯಾಗಿ ವರ್ಗವಾಗುತ್ತಾರೆ. ಅನೇಕ ವರುಷಗಳ ಕಾಲ ಅದೇ ಗ್ರಾಮದಲ್ಲಿ ಸೇವೆ ಸಲ್ಲಿಸಿ, ಭಾಗ್ಯನಗರಕ್ಕೆ ವರ್ಗವಾಗಿ ಇಲ್ಲಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಬಳಿಕ
ಕಿನ್ನಾಳ ಪ್ರೌಢಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಪ್ರೌಢಶಾಲಾ ಪ್ರಧಾನ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾದರು. ಅನೇಕ ಮಕ್ಕಳ ಅಪರೂಪದ ಶಿಕ್ಷಕಿಯಾಗಿ , ಪಾಲಕರ ಮನಸ್ಸನ್ನು ಸೆಳೆಯುವಲ್ಲಿ ಸಫಲರಾಗುತ್ತಾರೆ.
ತಾಯಿ ಹೃದಯದ ಮಾಲಾ ಟೀಚರ್ ನಾಲ್ಕು ಮಕ್ಕಳನ್ನು ಪೋಷಿಸಿ, ಶಿಕ್ಷಣ ಒದಗಿಸಿ ಅವರು ತಮ್ಮ ಕಾಲಮೇಲೆ ನಿಲ್ಲುವಂತೆ ಮಾಡಿ, ಸಮಾಜದ ಪ್ರಬುದ್ದ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಅವರ ಶ್ರಮ ಕಾಣುತ್ತಿದೆ.
ಪತಿಯ ಬೆಂಬಲ:
ಅವರ ಪತಿ ದೇವೇಂದ್ರಪ್ಪ ಬಡಿಗೇರ ಅವರ ಸಾಹಿತ್ಯ , ಸಾಂಗೀತ ಹಾಗೂ ಗಾಯನಕ್ಕೆ ಬೆಂಬಲ ನೀಡಿ ಪೋಷಿಸಿದ್ದಾರೆ. ಈ ನಿಟ್ಟಿನಲ್ಲಿ ‘ ನನ್ನ ಗಂಡ ಹಾಗೂ ಮನೆಯವರ ಸಪೋರ್ಟ್ ಇರದಿದ್ದರೆ ನಾನು ಲೇಖಕಿ ಆಗುತ್ತಿರಲಿಲ್ಲ’ ಎಂದು ಅಭಿಮಾನದಿಂದ ಈಗಲೂ ಹೇಳುತ್ತಾರೆ. ಮಕ್ಕಳಾದ ಪ್ರವೀಣ, ಗೌತಮ್, ವೀಣಾ ಹಾಗೂ ಚೇತನ್ ತಾಯಿಯ ಮಮತೆಯನ್ನು ಹೃದಯ ಬಿಚ್ಚಿ ಸ್ಮರಿಸುತ್ತಾರೆ.
ನಯ, ವಿನಯ, ಅಭಿನಯ:
ಸಾಹಿತ್ಯ, ಸಂಗೀತ, ಗಾಯನ, ಅಭಿನಯದಲ್ಲಿ ಅವರಿಗೆ ಎಲ್ಲಿಲ್ಲದ ಆಸಕ್ತಿ. ಕೆಲವು ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ವಿರಂಚಿ ಕಲಾಬಳಗದಲ್ಲಿ ಸದಸ್ಯೆಯಾಗಿ ಕೆಲವು ನಾಟಕಗಳಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.ಹಾಡುಗಾರಿಕೆಯನ್ನು ಮೈಗೂಡಿಸಿಕೊಂಡರೂ, ಆ ಕ್ಷೇತ್ರದಲ್ಲಿ ಮುಂದುವರೆದಿದ್ದು ತುಂಬಾ ಕಡಿಮೆ. ಭಕ್ತಿಗೀತೆ, ಭಾವಗೀತೆ ಹಾಗೂ ರಂಗಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ನಯ, ವಿನಯ ಹಾಗೂ ಅಭಿನಯ ಅವರ ವ್ಯಕ್ತಿತ್ವಕ್ಕೆ ಮೆರುಗು ತಂದಿವೆ.
ವಿದ್ಯಾರ್ಥಿಗಳ ಹಿಂಡು:
ನಿವೃತ್ತಿಯ ಬಳಿಕವೂ ಅವರ ಶಾಲಾ ವಿದ್ಯಾರ್ಥಿಗಳು ಅವರ ಭೇಟಿಗಾಗಿ ಈಗಲೂ ಅವರ ಮನೆ ಕೆಡೆಗೆ ಮುಖ ಮಾಡುತ್ತಾರೆ. ತಮ್ಮ ಬಾಲ್ಯದ ಒಡನಾಟವನ್ನು ಅವರ ಜೊತೆ ಮೆಲುಕು ಹಾಕುತ್ತಾ ಸುಖ, ದುಃಖಗಳ
ಎರಡೂ ಹಾದಿಯನ್ನು ಸಮಾಗಿ ಸ್ವೀಕರಿಸಿದ್ದನ್ನು ಬಿಚ್ಚಿ ಹರವುತ್ತಾರೆ. ಅವರ ಅನೇಕ ಶಿಷ್ಯರು ಶಿಕ್ಷಕರು, ಇಂಜಿನಿಯರರು, ನ್ಯಾಯವಾದಿಗಳು, ಹಾಗೂ ವಾಪಾರಸ್ತರು ಆಗಿದ್ದಾರೆ.
ಮಾಲಾ ಮೇಡಂ ಅವರು ತಮ್ಮ ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪಾಧ್ಯಾಯಿನಿಯಾಗಿ ಈಗಲೂ ಉಳಿದಿದ್ದಾರೆ.
ಲೇಖಕಿಯಾಗಿ:
ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಗೆ ತೊಡಗುತ್ತಾರೆ. ಆಗಾಗ ಬರೆದು ಇಟ್ಟಂತಹ ಕವಿತೆಗಳನ್ನು ಒಟ್ಟುಗೂಡಿಸಿ ‘ ಮೊದಲು ಮನಸು ಕಟ್ಟಿ’ ಶೀರ್ಷಿಕೆಯ ಕವನ ಸಂಕಲವನ್ನು ೨೦೧೨ ರಲ್ಲಿ ಬೆರಗು ಪ್ರಕಾಶನದ ಅಡಿಯಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ನೀಲಗಂಗಾ ದತ್ತಿ ಪ್ರಶಸ್ತಿ’ ಈ ಕೃತಿಗೆ ಲಭಿಸಿದ್ದು ಗಮನಾರ್ಹ.
ಅದೇ ಪ್ರಕಾಶನ ಅವರ ಪ್ರಬಂಧ ಸಂಕಲನ ‘ಮನದಾಳ’ ೨೦೨೪ ರಲ್ಲಿ ಮುದ್ರಿಸಿ ಅವರಿಗೆ ಪ್ರೋತ್ಸಾಹ ನೀಡಿದೆ.
ಸಂಕೋಚ ಅವರ ವ್ಯಕ್ತಿತ್ವದ ಚಿಲುಮೆ. ಪ್ರೀತಿ, ವಾತ್ಸಲ್ಯ ಅವರ ಬದುಕಿನ ಸುಗಮ ಹಾದಿಗಳು. ಮನುಷ್ಯ ಮಿಡಿತದ ಇಂಥ ಕವಯಿತ್ರಿಗೆ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲಗೇರಿ ಗ್ರಾಮದಲ್ಲಿ ೨೦೨೫ ಮಾರ್ಚ್ ೨೩ ರಂದು ಜರಗುವ ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡಿದ್ದು ಸ್ತುತ್ಯರ್ಹ ಹಾಗೂ ಅಭಿನಂದನಾರ್ಹ. ಸಮ್ಮೇಳನದ ಸರ್ವಾಧ್ಯಕ್ಷೆಗೆ ನಾಡಿನ ಜನತೆಯ ಪರವಾಗಿ ಅಭಿನಂದನೆಗಳು. ಪರಿಷತ್ತಿಗೆ ಧನ್ಯವಾದಗಳು.