
ಹಂಪಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು
ಸ್ವದೇಶ ದರ್ಶನ-2.0 ಬ್ರಾಂಡಿಂಗ್ ಹಂಪಿ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತದಾದ್ಯಂತ ಅವಕಾಶ: ಎಂ.ಎಸ್.ದಿವಾಕರ್
ಕರುನಾಡ ಬೆಳಗು ಸುದ್ದಿ
ಹೊಸಪೇಟೆ(ವಿಜಯನಗರ ) ೦೭- ಸ್ವದೇಶ ದರ್ಶನ-2.0 ಅಡಿ ಹಂಪಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬ್ರಾಂಡಿಂಗ್ ಹಂಪಿ ಅಡಿಯಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಆಸಕ್ತಿ ಇರುವ ಎಲ್ಲಾ ವಯೋಮಾನದವರಿಗೂ ಭಾಗವಹಿಸಲು ಭಾರತದಾದ್ಯಂತ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಹೇಳಿದರು.
ಬ್ರಾಂಡಿಂಗ್ ಹಂಪಿ ಸ್ಪರ್ಧೆ-2023ರ ಕುರಿತು ಗುರುವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ್ ದರ್ಶನ್ 2.0 ಯೋಜನೆಯಡಿ ಸಮಗ್ರ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಕರ್ನಾಟಕದ ಹಂಪಿಯನ್ನು ಆಯ್ಕೆ ಮಾಡಿದ್ದು, ಇದು ಜನವರಿ 2023 ರಲ್ಲಿ ಪ್ರಾರಂಭಿಸಿ ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ರೂ. 70 ಕೋಟಿ ನಿಧಿಯನ್ನು ಕಾಯ್ದಿರಿಸಿದೆ. ಸ್ವದೇಶ್ ದರ್ಶನ 2.0 ಭಾಗವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಂಪಿ ಸ್ಥಳ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಹಂಪಿಗೆ ಈ ಸಮಯದಲ್ಲಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇರುವುದರಿಂದ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲು ಎಎಸ್ಐ ಅವರ ಜೊತೆಗೆ ಯೋಜನೆಗಳನ್ನು ರೂಪಿಸಿ ಕ್ರಮಕೈಗೊಳ್ಳಲಾಗಿದೆ.
‘ಹಂಪಿಯಲ್ಲಿ ಸಮಯ ಪ್ರಯಾಣ’ ಎಂಬ ಥೀಮ್ ನೊಂದಿಗೆ ‘ಹಂಪಿಯಲ್ಲಿ ಪ್ರವಾಸೋದ್ಯಮದ ಭವಿಷ್ಯವನ್ನು ರೂಪಿಸಲು ನಿಮ್ಮ ಅವಕಾಶ!’ ಎಂಬ ಉದ್ದೇಶದಿಂದ ಲೋಗೋ ವಿನ್ಯಾಸ + ಆಕರ್ಷಕ ಟ್ಯಾಗ್ ಲೈನ್, ಆಕರ್ಷಕ ಮ್ಯಾಸ್ಕಾಟ್ ವಿನ್ಯಾಸ, ವಿಶಿಷ್ಟ ಸ್ಮರಣೆ(ಗಳು), ಹಂಪಿಯಲ್ಲಿ ನಿಮ್ಮ ನೆಚ್ಚಿನ ಸ್ಥಳ ಅಥವಾ ಚಟುವಟಿಕೆಯನ್ನು ವಿವರಿಸುವ ಒಂದು ಬ್ಲಾಗ್, ಹಂಪಿಯನ್ನು ಹೆಚ್ಚು ಪ್ರತಿನಿಧಿಸುವ ಒಂದು ಫೋಟೋ ಸಲ್ಲಿಸುವ ಈ ಸ್ಪರ್ಧೆಗಳಲ್ಲಿ ಭಾರತದಾದ್ಯಂತ ವಿದ್ಯಾರ್ಥಿಗಳು, ಆಸಕ್ತ ಸಾರ್ವಜನಿಕರು ಭಾಗವಹಿಸಿ, ಬಹುಮಾನಗಳನ್ನು ಗೆಲ್ಲಲು ಮತ್ತು ನಿಮ್ಮ ಆಲೋಚನೆಗಳನ್ನು ಹಂಪಿಗೆ ತರಲು ಇದೊಂದು ಸುವರ್ಣಾವಕಾಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್., ಉಪವಿಭಾಗಾಧಿಕಾರಿ ಮಹಮ್ಮ ದ್ ಅಲಿ ಅಕ್ರಮ ಷಾಹ, ಕಮಲಾಪುರ ಹೊಸಪೇಟೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಿಕೇರಿ ಇದ್ದರು.
ಆಕರ್ಷಕ ಬಹುಮಾನ, ನೋಂದಣಿ: ಪ್ರತಿ ಪ್ಯಾಕೇಜ್‌ಗೆ ಪ್ರಥಮ 20,000 ರೂ., ದ್ವಿತೀಯ 10,000 ರೂ., ತೃತೀಯ 5,000 ರೂ. ನಗದು ಬಹುಮಾನ ನೀಡಲಾಗುವುದು. ಶಾರ್ಟ್‌ಲಿಸ್ಟ್ ಮಾಡಲಾದ ನಮೂದುಗಳು ತಮ್ಮ ಆಲೋಚನೆಗಳನ್ನು ಜಿಲ್ಲಾಧಿಕಾರಿಗಳಿಗೆ ಪ್ರಸ್ತುತಪಡಿಸಲು ಅವಕಾಶವನ್ನು ನೀಡುತ್ತವೆ. ವಿಜೇತ ನಮೂದುಗಳನ್ನು ಮತ್ತು ವಿಜಯನಗರ ಜಿಲ್ಲೆ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ನೋಂದಾಯಿಸಲು ಡಿ.21 ಮತ್ತು ಥೀಮ್ ಸಲ್ಲಿಸಲು ಡಿ.25 ಕೊನೆಯ ದಿನವಾಗಿದ್ದು, ನೋಂದಣಿ ಮತ್ತು ಪ್ರಶ್ನೆಗಳಿಗಾಗಿ competitions@ karnatakatourism.org ಗೆ ಇಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://vijayanagara.nic.in/ ಗೆ ಭೇಟಿ ನೀಡಬಹುದು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.