
ಹಂಪಿ ಉತ್ಸವ : ಹೊಸಪೇಟೆಯಲ್ಲಿ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ
ಕರುನಾಡ ಬೆಳಗು ಸುದ್ದಿ
ವಿಜಯನಗರ,1- ಹಂಪಿ ಉತ್ಸವಕ್ಕಾಗಿ ಫೆ.2ರಂದು ಮುಖ್ಯಮತ್ರಿಗಳು ಹಾಗೂ ಇತರ ಗಣ್ಯಮಾನ್ಯರು ಹೊಸಪೇಟೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಹೊಸಪೇಟೆಗೆ ಆಗಮಿಸುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಸೇರಿದಂತೆ ಇತರ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ ಅವರು ಆದೇಶ ಹೊರಡಿಸಿದ್ದಾರೆ.
ಫೆ.2ರಂದು ಜರುಗುವ ಹಂಪಿ ಉತ್ಸವ ಪ್ರಯುಕ್ತ ಮುಖ್ಯಮಂತ್ರಿಗಳು ಮತ್ತು ವಿವಿಧ ಇಲಾಖೆಯ ಸಚಿವರುಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಆಗಮಿಸಲಿದ್ದು, ಗಣ್ಯಮಾನ್ಯರ ಭದ್ರತಾ ಹಿತದೃಷ್ಠಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲಕ್ಕಾಗಿ ಹೊಸಪೇಟೆ ನಗರಕ್ಕೆ ಆಗಮಿಸುವ ಮತ್ತು ಹೊಸಪೇಟೆ ನಗರದಿಂದ ಹೊರ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಸೇರಿದಂತೆ ಭಾರಿ ವಾಹನಗಳ ಮಾರ್ಗ ಬದಲಾವಣೆ ಮಾಡುವುದು ಅವಶ್ಯಕತೆಯಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಕೋರಿರುತ್ತಾರೆ.
ಫೆ.2ರಂದು ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ಬೆಂಗಳೂರು ಹಾಗೂ ಕೊಪ್ಪಳ ದಿಂದ ಬರುವ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ವಿರುಪಾಕ್ಷ ನಾಯಕ ವೃತ್ತ, ಗುರು ಕಾಲೇಜ್ ಸರ್ಕಲ್, ಎ.ಪಿ.ಎಂ.ಸಿ. ಸರ್ಕಲ್, ಮಾರ್ಕೇಂಡೇಶ್ವರ ಸರ್ಕಲ್, ವಾಲ್ಮೀಕಿ ಸರ್ಕಲ್, ರಾಮ ಸರ್ಕಲ್ ಮುಖಾಂತರ ಹೊಸಪೇಟೆ ನಗರದಲ್ಲಿ ಪ್ರವೇಶಿಸಿ ಅದೇ ಮಾರ್ಗವಾಗಿ ಹೊರಹೋಗಬೇಕು. ಬೆಂಗಳೂರು ಮತ್ತು ಕೊಪ್ಪಳ ಕಡೆಯಿಂದ ಬಂದು ಕಮಲಾಪುರ ಮತ್ತು ಕಂಪ್ಲಿ ಕಡೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಮತ್ತು ಭಾರಿ ವಾಹನಗಳು ವಿರುಪಾಕ್ಷ ನಾಯಕ ವೃತ್ತದಿಂದ ಬೈಪಾಸ್ ರಸ್ತೆಯಲ್ಲಿ ಸಂಡೂರು ಸರ್ಕಲ್, ಜಂಬುನಾಥ ಸರ್ಕಲ್, ಇಂಗಳಿಗೆ, ಪಿ.ಕೆ.ಹಳ್ಳಿ ಮುಖಾಂತರ ಕಮಲಾಪುರ ಮಾರ್ಗವಾಗಿ ಹೋಗಬೇಕು. ಅದೇ ದಿನ ಸಂಜೆ 5.30 ರಿಂದ ಸಂಜೆ 7 ಗಂಟೆಯವರೆಗೆ ಎ.ಪಿ.ಎಂ.ಸಿ. ಸರ್ಕಲ್ ಮುಖಾಂತರ ಮತ್ತು ಸಾಯಿ ಬಾಬ್ ಸರ್ಕಲ್ ಮುಖಾಂತರ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಜಿಲ್ಲಾ ಪೊಲೀಸ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಕರು, ಸಹಾಯಕ ಆಯುಕ್ತರು, ಸಂಬAಧಪಟ್ಟ ತಹಶೀಲ್ದಾರರು ಮತ್ತು ಸಂಚಾರ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.