
ಹಕ್ಕನ್ನು ಕೇಳುವಾಗ ನಮ್ಮ ಕರ್ತವ್ಯ ಮರೆಯಬಾರದು : ಕಣವಿ ಸಲಹೆ
ಕೊಪ್ಪಳ, ೦೯- ಸದಾ ನಮ್ಮ ಹಕ್ಕನ್ನೇ ಪ್ರತಿಪಾದಿಸುವ ನಾವು ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಮರೆತುಬಿಡುತ್ತೇವೆ ಕಾರಣ ಹಕ್ಕಿನ ಜೊತೆಗಿರುವ ಕರ್ತವ್ಯವನ್ನು ಮರೆಯಬಾರದು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಎ. ವಿ. ಕಣವಿ ಯುವಜನರಿಗೆ ಸಲಹೆ ನೀಡಿದರು.
ಅವರು ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಿಕ್ರಂ ಸಂಸ್ಥೆ ಮತ್ತು ಶ್ರೀ ಗವಿಸಿದ್ದೇಶ್ವರ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆಯನ್ನು ಸಸಿಗೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿದರು.
ಯುವಜನರ, ಮಕ್ಕಳ ಹಕ್ಕುಗಳ ಅವಶ್ಯಕತೆಗಳ ಬಗ್ಗೆ ಹೇಳುತ್ತಾ ಅದಕ್ಕೆ ಪೂರಕವಾಗಿ ಸಂವಿಧಾನ ನಮಗೆ ಕೊಟ್ಟಿರುವ ಅವಕಾಶಗಳ ಕುರಿತು ಅನುಚ್ಛೇದಗಳ ಸಹಿತ ತಮ್ಮ ಅನುಭವವನ್ನು ಹಂಚಿಕೊAಡರು. ಸಂವಿಧಾನವನ್ನು ಕೇವಲ ವಕೀಲರಷ್ಟೇ ಅಲ್ಲ ಅಗತ್ಯವಿದ್ದಷ್ಟು ಪ್ರತಿಯೊಬ್ಬರು ಓದಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸೋಷಿಯಲ್ ಮಿಡೀಯಾ ಮತ್ತು ಯುವಜನರು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಚಿಂತಕಿ ಜ್ಯೋತಿ ಎಂ. ಗೊಂಡಬಾಳ ಅವರು, ಮಕ್ಕಳಿಗೆ ಮೊಬೈಲ್ ಅವಶ್ಯಕತೆ ಎಷ್ಟಿದೆ ಎಂಬುದನ್ನು ಪೋಷಕರು ಮತ್ತು ಶಿಕ್ಷಕರು ಇಬ್ಬರೂ ತಿಳಿದುಕೊಳ್ಳಬೇಕು, ಕರೋನಾ ಸಂದರ್ಭದಲ್ಲಿ ಮಕ್ಕಳಿಗೆ ನಾವೇ ಮೊಬೈಲ್ ಕೊಟ್ಟು ಕುಳ್ಳಿರಿಸಿ ಈಗ ಅವರನ್ನು ಮೊಬೈಲ್ ಡಿ-ಅಡಿಕ್ಷನ್ ಸೆಂಟರ್‌ಗೆ ಅಡ್ಮಿಟ್ ಮಾಡುವ ಪರಿಸ್ಥಿತಿಯನ್ನು ತಂದೊಡ್ಡಿಕೊAಡಿದ್ದೇವೆ ಎಂಬುದು ಶೋಚನೀಯ ಸಂಗತಿ. ಮೊಬೈಲ್ ಸ್ವಲ್ಪ ಸಮಯ ಉತ್ತಮವಾದ ಮಾಗದರ್ಶಿ ಆಲೋಚನೆಗಳಿಗೆ ಹೊರತುಪಡಿಸಿದರೆ ಕೇವಲ ಸಂವಹನಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂದರು. ಇನ್ನು ಸೋಷಿಯಲ್ ಮೀಡಿಯಾ ಎಂಬ ಮಾಫಿಯಾದಲ್ಲಿ ಸುಳ್ಳನ್ನೇ ಹೆಚ್ಚು ಬಿತ್ತರಿಸುತ್ತಿದ್ದು ಪ್ರತಿಯೊಬ್ಬರು ಅದರ ಕುರಿತು ಆಲೋಚನೆ ಮಾಡಬೇಕು, ಬೇಕಾದಷ್ಟು ಮಾತ್ರ ಬಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಸರೋಜ ಬಾಕಳೆ ಮಕ್ಕಳ ಲೈಂಗಿಕ ಕಿರುಕುಳದ ಪ್ರಸ್ತುತದ ಸ್ಥಿತಿಗತಿ ಕುರಿತು, ವಿಸ್ತಾರ ಸಂಸ್ಥೆಯ ಆಶಾ ವಿ. ಅವರು ಮಕ್ಕಳ ಹಕ್ಕುಗಳು ಮತ್ತು ಸವಾಲುಗಳ ಕುರಿತು, ಪೋಕ್ಸೋ ಕಾನೂನಿನ ಅರಿವು ಮತ್ತು ಜಾಗೃತಿ ಕುರಿತು ವಕೀಲರಾದ ರವಿಚಂದ್ರ ಆರ್. ಮಾಟಲದಿನ್ನಿ, ಶಿಕ್ಷಣ ಮತ್ತು ಸವಾಲು ಕುರಿತು ತೃತೀಯ ಲಿಂಗಿ ರಮ್ಯ ಕೃಷ್ಣ ಕಾರಟಿಗಿ, ಸಮುದಾಯಗಳಲ್ಲಿ ಬ್ರಾತೃತ್ವ ಭಾವನೆಯನ್ನು ಮೂಡಿಸುವಲ್ಲಿ ಯುವಜನರ ಪಾತ್ರವನ್ನು ಹಿರಿಯ ಪತ್ರಕರ್ತ ಸಿರಾಜ್ ಬಿಸರಹಳ್ಳಿ ಹಾಗೂ ಮುಟ್ಟು ಮತ್ತು ಆರೋಗ್ಯ ಕುರಿತು ಸಿಕ್ರಂ ಸಂಸ್ಥೆಯ ಸಂಯೋಜಕಿ ಜ್ಯೋತಿ ಹಿಟ್ನಾಳ್ ಸವಿವರವಾಗಿ ಮಾತನಾಡಿದರು. ಶ್ರೀ ಗವಿಸಿದ್ದೇಶ್ವರ ಕಾಲೇಜು ಪ್ರಾಂಶುಪಾಲರಾದ ಡಾ. ಚೆನ್ನಬಸವ ಅಧ್ಯಕ್ಷೀಯ ಭಾಷಣ ಮಾಡಿದರು. ವಕೀಲರಾದ ಪರವೀನ್ ಕೊಪ್ಪಳ, ಮಹಿಳಾ ಸಂಘಟಕಿ ಪೂರ್ಣಿಮಾ ಯೋಳಬಾವಿ ಕಾರ್ಯಕ್ರಮ ನಿರ್ವಹಿಸಿದರು, ಅನೇಕರು ಇದ್ದರು.