WhatsApp Image 2024-04-26 at 6.56.16 AM (1)

ಹುಲಿಗಿಯಲ್ಲಿ ಕ್ಷಯರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 30- ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಕೊಪ್ಪಳ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಹುಲಿಗಿ ಗ್ರಾಮದ 04ನೇ ವಾರ್ಡಿನ ಚನ್ನಮ್ಮ ವೃತ್ತದ ಹತ್ತಿರವಿರುವ ಮಸೀದಿ ಹತ್ತಿರ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ ನಡೆಯಿತು.

ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶಫಿಉಲ್ಲಾ, ಅವರು ಕಾರ್ಯಕ್ರಮ ಕುರಿತು ಮಾತನಾಡಿ, ಟಿ.ಬಿ ರೋಗವೂ ಸೋಂಕಿತ ರೋಗಿಯು ಕೆಮ್ಮುವುದರ ಮೂಲಕ ಹಾಗೂ ಶೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಪ್ರಸಾರವಾಗುತ್ತದೆ.

ಒಬ್ಬ ಕ್ಷಯರೋಗಿಯು ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಒಂದು ವರ್ಷಕ್ಕೆ 10 ರಿಂದ 15 ಜನರಿಗೆ ಪ್ರಸಾರ ಮಾಡುತ್ತಾನೆ. ಕಾರಣ ಗ್ರಾಮದಲ್ಲಿ ಯಾರಿಗಾದರೂ ಸತತ ಎರಡು ವಾರಗಳಿಂದ ಕೆಮ್ಮು ಕಾಣಿಸಿಕೊಂಡರೆ, ಕೆಮ್ಮಿನಲ್ಲಿ ಕಫ ಬಂದರೆ, ಕಫದಲ್ಲಿ ರಕ್ತ ಬಂದರೆ ತಕ್ಷಣ ನಮ್ಮ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಂಡು ರೋಗ ಕಂಡು ಬಂದರೆ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಯಾರೂ ಕೂಡ ಟಿ.ಬಿ ರೋಗದ ಬಗ್ಗೆ ನಿರ್ಲಕ್ಷ ಮಾಡಬಾರದು. ಕ್ಷಯರೋಗಿಗಳು ಎಲ್ಲಂದರಲ್ಲಿ ಊಗಳಬಾರದು, ಕೆಮ್ಮುವಾಗ ಮತ್ತು ಶೀನುವಾಗ ಕಡ್ಡಾಯವಾಗಿ ಕರವಸ್ತç ಬಳಸಬೇಕು. ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಭೇಟಿ ನೀಡಿದಾಗ, ಆರೋಗ್ಯದ ಯಾವುದೇ ಸಮಸ್ಯೆವಿದ್ದರೆ, ಅವರ ಹತ್ತಿರ ಚರ್ಚಿಸಿ, ಸಲಹೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಅವರು ಕ್ಷಯರೋಗ(ಟಿ.ಬಿ) ನಿರ್ಮೂಲನೆ ಕುರಿತು ಮಾತನಾಡಿ, ಹುಲಿಗಿ ಗ್ರಾಮದಲ್ಲಿ ಕ್ಷಯರೋಗಿಗಳನ್ನು ಪತ್ಯೆ ಹಚ್ಚಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿ, ಅವರನ್ನು ಗುಣಮುಖರನ್ನಾಗಿ ಮಾಡಬೇಕಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಸಹವ್ಯಾಧಿಗಳಿಗೆ ಈ ಕ್ಷಯರೋಗಕ್ಕೆ ಬೇಗನೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮನುಷ್ಯನ ಉಗುರು ಹಾಗೂ ಕೂದಲು ಬಿಟ್ಟು ದೇಹದ ಯಾವುದೇ ಭಾಗಕ್ಕಾದರೂ ಕ್ಷಯರೋಗ(ಟಿ.ಬಿ) ಬರಬಹುದು. ಆದ್ದರಿಂದ ಕ್ಷಯರೋಗದ ಲಕ್ಷಣ ಉಳ್ಳವರು ಖಾಯಿಲೆಯ ಬಗ್ಗೆ ಅಸಡ್ಡೆ ತೊರದೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಳ್ಳಬೇಕು. 2025ಕ್ಕೆ ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಿ. ಪೌಷ್ಠಿಕ ಆಹಾರದ ಸಲುವಾಗಿ ನಿಕ್ಷಯ ಪೋಷಣ ಅಭಿಯಾನದಡಿಯಲ್ಲಿ ಪ್ರತಿರೋಗಿಗೆ ಮಾಸಿಕ ರೂ.500 ಗಳನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ.

ರೋಗಿಯ ಮನೆ ಬೇಟಿ ನೀಡಿ, ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯ ಇಲಾಖೆಯೊಂದಿಗೆ ಕೈಜೊಡಿಸಿ, “ಟಿ.ಬಿ ಸೋಲಿಸಿ-ದೇಶ ಗೆಲ್ಲಿಸಿ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಜ್ಯೊತಿ, ಎಸ್.ಟಿ.ಎಸ್ ಶ್ರೀನಿವಾಸ, ಆಶಾ ಕಾರ್ಯಕರ್ತೆಯರಾದ ಕೌಶಲ್ಯ, ಮಂಜುಳಾ, ಆರ್.ಕೆ.ಎಸ್.ಕೆ ಕಾರ್ಯಕ್ರಮದ ಆಪ್ತಸಮಾಲೋಚಕರಾದ ಪೈರೋಜ್ ಬೇಗಂ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಎನ್.ಜಿ.ಓ ಸಂಸ್ಥೆಯ ಪದಾಧಿಕಾರಿಗಳು, ಗ್ರಾ.ಪಂ ಸಿಬ್ಬಂದಿಗಳು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!