ಹುಲಿಗಿ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಹುಲಿಗಿ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 29-: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಸ್ಪೀಪ್ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹುಲಿಗಿ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಅವರು ಕಾರ್ಯಕ್ರಮ ಕುರಿತು ಮಾತನಾಡಿ, ಲೋಕಸಭಾ ಚುನಾವಣೆ-2024ರ ನಿಮಿತ್ತ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಮೇ 07ರಂದು ನಡೆಯಲಿದ್ದು, ಅಂದು ತಮ್ಮ ವಾರ್ಡಿಗೆ ನಿಗದಿಪಡಿಸಿದ ಮತಗಟ್ಟೆಗೆ ಗುರುತಿನ ಕಾರ್ಡಿನೊಂದಿಗೆ ಹೋಗಿ, ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿ, ಸುಭದ್ರ ಸರ್ಕಾರ ರಚಿಸುವಂತೆ ಸಲಹೆ ನೀಡಿದರು.

ಭಾರತ ಪ್ರಜಾಪ್ರಭುತ್ವದ ದೇಶವಾಗಿದೆ. ನಿಮ್ಮ ಗ್ರಾಮ ಎಲ್ಲಾ ರೀತಿಯಿಂದ ಅಭಿವೃದ್ಧಿಯಾಗಬೇಕಾದರೆ ಉತ್ತಮ ನಾಯಕನ ಆಯ್ಕೆ ಮಾಡುವುದು ನಿಮ್ಮ ಕೈಯಲ್ಲಿದೆ. “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಘೋಷವಾಖ್ಯದೊಂದಿಗೆ ಮೇ 7ರಂದು ನಡೆಯುವ ಚುನಾಚಣೆ ದಿನದಂದು ಮತದಾನ ಕೇಂದ್ರಕ್ಕೆ ಭೇಟಿ ನೀಡಿ, ಮತದಾನ ಮಾಡುಬೇಕು. ಯಾವುದೇ ಮತದಾರ ಮತದಾನದಿಂದ ಹೊರಗುಳಿಯದಂತೆ, ಇತರರಿಗೂ ಅರಿವು ಮೂಡಿಸಿ, ಮತದಾನ ಮಾಡಿಸಬೇಕು. ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತದಾರರ ಸಾಕ್ಷರತೆ ಎಂಬ ಅಂಶವನ್ನು ಆಧಾರವಾಗಿ ಇಟ್ಟುಕೊಂಡು ಮತದಾನ ಮಾಡುವಂತೆ ಸಲಹೆ ನೀಡಿದರು.

ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಶಫಿಉಲ್ಲಾ ಅವರು ಮತದಾನ ಜಾಗೃತಿ ಕುರಿತು ಮಾತನಾಡಿ, ಚುನಾವಣೆ ಪರ್ವ, ದೇಶದ ಗರ್ವ, ಮತದಾನ ದಿನದಂದು ನಾವೇಲ್ಲರೂ ಹಬ್ಬದಂತೆ ಸಂಭ್ರಮಿಸಬೇಕು. 18 ವರ್ಷ ಮೇಲ್ಪಟ್ಟವರೇಲ್ಲರೂ ಮತದಾನದ ಪಟ್ಟಿಯಲ್ಲಿ ತಮ್ಮ ಹೆಸರುನ್ನ ಖಾತ್ರಿ ಪಡಿಸಿಕೊಂಡು, ತಪ್ಪದೇ ಮತದಾನ ಮಾಡಬೇಕು. 85 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ವಿಶೇಷ ಚೇತನರಿಗೆ ಹಿಗಾಗಲೇ ಮನೆ ಮನೆಗೆ ಭೇಟಿ ನೀಡಿ, ಮತದಾನ ಕಾರ್ಯನಡೆದಿದೆ. ಆದ್ದರಿಂದ ಮತದಾನ ದಿನದಂದು ಯಾರೂ ಹೋರಗಡೆ ಹೋಗದಂತೆ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಕೊನೆಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ ಕೆ ಅವರು ಮತದಾನ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಎನ್.ಜಿ.ಓ ಸಂಸ್ಥೆಯ ಪದಾಧಿಕಾರಿಗಳು, ಗ್ರಾ.ಪಂ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!