WhatsApp Image 2024-05-23 at 5.50.38 PM

10ನೇ ಮೇ ಸಾಹಿತ್ಯ ಮೇಳದ ರಾಜ್ಯ ನಿರ್ಣಯಗಳು

ಕರುನಾಡ ಬೆಳಗು ಸುದ್ದಿ

1. ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಸರಕಾರವು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಈ ಮೇಳವು ಒತ್ತಾಯಿಸುತ್ತದೆ. ಮಹಿಳೆಯರ ಮೇಲೆ ಆಗುವ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಜಿಲ್ಲೆಯಲ್ಲಿ ವಿಶೇಷ ಟಾಸ್ಕ್ ಪೋರ್ಸ್ ರಚಿಸಬೇಕು. ಮತ್ತು ಕಾನೂನಾತ್ಮಕವಾಗಿ ನ್ಯಾಯ ದೊರಕಿಸುವ ವಿಚಾರಣೆಗಾಗಿ ವಿಶೇಷ ಕೋರ್ಟುಗಳನ್ನು ಸ್ಥಾಪಿಸಿ ಆರು ತಿಂಗಳ ಕಾಲಮಿತಿಯಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಬೇಕು. ತನಿಖಾ ಹಂತದಲ್ಲಿ ಇಂಥಾ ಪ್ರಕರಣಗಳ ತನಿಖೆಯ ಪರಿಣಿತಿ ಇರುವ ಅಧಿಕಾರಿಗಳ ವಿಶೇಷ ತಂಡವನ್ನು ನೇಮಿಸಿ ಸಾಕ್ಷ್ಯಾಧಾರಗಳಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕಾಗಿದೆ.

ಹಾಗೆಯೇ ಇದೊಂದು ಸಾಮಾಜಿಕ ಪಿಡುಗಾಗಿ ಕ್ರಮೇಣ ಲಿಂಗ ಅಸೂಕ್ಷ್ಮತೆಯ ಸ್ವಭಾವವಾಗಿ ಬೆಳೆಯದಂತೆ, ಶಾಲಾ ಕಾಲೇಜುಗಳಲ್ಲಿ, ಮಹಿಳಾ ಒಕ್ಕೂಟಗಳಲ್ಲಿ, ಪಂಚಾಯತಿ ಮಟ್ಟದಲ್ಲೂ ಈ ಹಿಂಸಾ ಮನೋವೈಜ್ಞಾನಿಕತೆ ಬಗ್ಗೆ ತಿಳುವಳಿಕೆ, ಜಾಗ್ರತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಮಾದಕ ದ್ರವ್ಯ, ಹೆಂಡ ಮತ್ತಿತರ ವ್ಯಸನಗಳ ಕಾರಣಕ್ಕೂ ಈ ಹಿಂಸಾಚಾರ , ನಡೆಯುವುದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಈ ವ್ಯಸನಗಳು ಯುವಜನರನ್ನು ದಾಸರನ್ನಾಗಿ ಮಾಡದಂತೆ ವಿಶೇಷ ಕ್ರಮ ಕೈಗೊಳ್ಳಬೇಕಿದೆ.

2.ರೈತ ವಿರೋಧಿ ಮೂರು ಕಾನೂನುಗಳನ್ನು ವಿರೋಧಿಸಿ ದೇಶಾದ್ಯಂತ, ಅದರಲ್ಲೂ ವಿಶೇಷವಾಗಿ ದೆಹಲಿಯಲ್ಲಿ ನಡೆದ ಸತ್ಯಾಗ್ರಹದ ಪರಿಣಾಮವಾಗಿ ಕೇಂದ್ರ ಸರಕಾರ ಈ ಕಾನೂನುಗಳನ್ನು ಹಿಂತೆಗೆದುಕೊಂಡಿದ್ದರೂ ರಾಜ್ಯ ಸರಕಾರಗಳ ಮೂಲಕ ಇದೇ ಕಾನೂನುಗಳನ್ನು ಜಾರಿಗೆ ತರಲು ಯತ್ನಿಸಿದೆ. ಕರ್ನಾಟಕದಲ್ಲೇ ಈ ಮೂರು ಕಾನೂನುಗಳೊಂದಿಗೆ ಭೂ ಸುಧಾರಣಾ ಕಾಯಿದೆಯ ತಿದ್ದುಪಡಿಯನ್ನೂ ಜಾರಿಗೆ ತರಲಾಗಿದೆ. ಹಾಗೆಯೇ ಗೋ ಸಂರಕ್ಷಣಾ ಕಾಯಿದೆಯೂ ಜಾರಿಯಲ್ಲಿದೆ. ಈ ಕಾನೂನುಗಳನ್ನು ಈಗಿನ ರಾಜ್ಯ ಸರಕಾರವು ಮುಂದಿನ ಅಧಿವೇಶನದಲ್ಲೇ ಹಿಂತೆಗೆದುಕೊಂಡು ರೈತ ಪರ ನಿಲುವನ್ನು ಸಾಬೀತುಪಡಿಸಬೇಕು ಎಂದು ಈ ಮೇಳ ಒತ್ತಾಯಿಸುತ್ತದೆ.

3. ಪ್ರಾಥಮಿಕ, ಶಿಕ್ಷಣ ಮತ್ತು ಉನ್ನತ ಶಿಕ್ಷಣ ಎರಡೂ ಹಂತಗಳಲ್ಲೂ ರಾಜ್ಯ ಸರಕಾರ ನಿಲುವು, ಹೆಜ್ಜೆಗಳು ಅಸ್ಪಷ್ಠವಾಗಿವೆ. ಪ್ರಾಥಮಿಕ ಹೈಸ್ಕೂಲ್ ‌ ಮಟ್ಟದಲಿ ಪಬ್ಲಿಕ್‌ ಪರೀಕ್ಷೆಯಂಥಾ ಕ್ರಮಗಳು ಸರಕಾರದ ಉಪಕ್ರಮಗಳು ಶಿಕ್ಷಣ ನೀತಿಯನ್ನು ಸುಧಾರಿಸುವ ಪುರಾವೆಗಳನ್ನು ಹೊಂದಿಲ್ಲ. ಮಕ್ಕಳ ಕಲಿಕಾ ಮಟ್ಟವನ್ನು ಅರಿಯುವ ಕ್ರಮವಾದರೆ, ಅದರಲ್ಲಿ ಶಿಕ್ಷಕರ ಪಾತ್ರ ಎಷ್ಟು, ಕಲಿಕ ಸುಧಾರಣೆಯ ಕ್ರಮಗಳೇನು ಎಂಬುದನ್ನು ಶಿಕ್ಷಣ ತಜ್ಞರ ಸಮಾಲೋಚನೆಯೊಂದಿಗೆ ಸರಕಾರ ಮುಂದಿಡಬೇಕು. ಮುಖ್ಯತಃ ಶಾಲೆಗಳ ಮೂಲಭೂತ ಸೌಕರ್ಯವನ್ನು, ಶಿಕ್ಷಕರ ಸಂಖ್ಯೆಯನ್ನೂ ಉತ್ತಮಪಡಿಸಬೇಕಷ್ಟೇ ಅಲ್ಲ, ಶಿಕ್ಷಕರ ಬೋಧನಾ ಜವಾಬ್ದಾರಿಯ ಮೇಲೆ ನಿಗಾ ಇಟ್ಟು ಕ್ರಮ ಕೈಗೊಳ್ಳುವ ಉಪಕ್ರಮಗಳನ್ನು ಹೆಚ್ಚು ವೈಜ್ಞಾನಿಕವಾಗಿಸಬೇಕು.

ಹಾಗೆಯೇ ಉನ್ನತ ಶಿಕ್ಷಣದಲ್ಲಿ ಪ್ರತಿಗಾಮಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಾರದಿರುವ ಸರಕಾರದ ನಿಲುವು ಶ್ಲಾಘನೀಯವಾಗಿದ್ದರೂ, ಮುಂದಿನ ಪರ್ಯಾಯ ಕ್ರಮಗಳ ಬಗ್ಗೆ ನಿಧಾನ ಗತಿಯ ಉಪಕ್ರಮಗಳಿಂದಾಗಿ ವಿದ್ಯಾರ್ಥಿಗಳ ಭವಿಶ್ಯದ ಬಗ್ಗೇ ಗೊಂದಲ ಸೃಷ್ಟಿಯಾಗುತ್ತಿದ್ದು, ತ್ವರಿತವಾಗಿ ಸರಕಾರವು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನೂ, ಕ್ರಮಗಳನ್ನೂ ಕೈಗೊಳ್ಳಬೇಕಿದೆ.

4. ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ನೀತಿಯು ಹಳೇ ಜಾಡಿನಲ್ಲಿದೆ. ಅಕಾಡೆಮಿಗಳು, ಸದಸ್ಯತ್ವ, ಪ್ರಶಸ್ತಿ, ಅನುದಾನ ರೀತಿಯ ಜಾಡಿಗೆ ಬಿದ್ದ ಉಪಕ್ರಮಗಳಿಂದಾಗಿ ಈ ಕಾಲಸಂದರ್ಭ ಬೇಡುವ ನಾವೀನ್ಯತೆಯೇ ಸಾಂಸ್ಕೃತಿಕ ನೀತಿಯಲ್ಲಿ ಮಾಯವಾಗಿದೆ. ರಾಜ್ಯದ ಅಂಚಿಗೆ ಸರಿದ ಸಮುದಾಯಗಳ ಭಾಷೆ ಸಂಸ್ಕೃತಿಯ ಉಳಿವು ಮತ್ತು ಪುನಶ್ಚೇತನಕ್ಕಾಗಿ ಸರಕಾರ ವಿಶೇಷವಾದ ನೀತಿ ಮತ್ತು ಕಾರ್ಯಕ್ರಮಗಳನ್ನು ಯೋಜಿಸಬೇಕಿದೆ. ಹಾಗೇಯೇ ಸಾಂಸ್ಕೃತಿಕ ಮತ್ತು ಸಾಹಿತ್ಯ ನೀತಿಗಳೂ ಕರ್ನಾಟಕದ ಕನ್ನಡ ಮತ್ತು ಇತರ ಭಾಷಾ ವೈವಿಧ್ಯತೆಗಳನ್ನು ಹೆಣೆದು ಬೆಳೆಸುವ ರೀತಿಯಲ್ಲಿ ರೂಪಿಸಬೇಕಿದೆ. ಮುಂದಿನ ದಿನಗಳಲ್ಲಿ ಸರಕಾರ ಈ ಕುರಿತ ಸಂವಾದ, ಚರ್ಚಗಳನ್ನು ಆರಂಭಿಸಿ ತನ್ಮೂಲಕ ಈ ವರ್ಷದಲ್ಲೇ ನವೀನ ಹೆಜ್ಜೆಗಳನ್ನು ಇಡಬೇಕಿದೆ.

5.. ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳ ಅನಭಿವೃದ್ಧಿಗೆ ೬೦ ವರ್ಷಗಳ ಇತಿಹಾಸವಿದೆ. ಕಲ್ಯಾಣ ಕರ್ನಾಟಕಕ್ಕೆ ಸಾಂವಿಧಾನಿಕವಾಗಿ ವಿಶೇಷ ಸ್ಥಾನಮಾನ ದೊರಕಿದ್ದರೂ ವಾಸ್ತವದಲ್ಲಿ ಗುಣಾತ್ಮಕ ಬದಲಾವಣೇಗಳೇನೂ ಕಂಡಿಲ್ಲ. ಈ ಭಾಗದ ಅಭಿವೃದ್ಧಿಗೆ ಖಾಸಗಿ ಹೂಡಿಕೆ, ಇತ್ಯಾದಿ ಜಾಗತೀಕರಣದ ಸೂಚಿಗಳನ್ನು ಅವಲಂಬಿಸಿದ ಘೋಷಣೆಗಳೇ ಹೆಚ್ಚಾಗಿವೆ. ಇದರ ಜೊತೆಗೇ ಅಧಿಕಾರ ಶಾಹಿಯ ಸಿದ್ಧ ಮೂಸೆಯ ಅನುಷ್ಠಾನ ಪ್ರಕ್ರಿಯೆಯೂ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಸರ್ವ ವಿದಿತ. ಈ ಕುರಿತ ಸಮಗ್ರವಾದ ವಿವರಗಳುಳ್ಳ ಶ್ವೇತ ಪತ್ರ ರಾಜ್ಯ ಸರ್ಕಾರ ಮಂಡಿಸಬೇಕು. ಹಿಂದುಳಿಯುವಿಕೆಯನ್ನು ಮಾಪನ ಮಾಡಲು ತಜ್ಞರ ನೇಮಿಸಿ ಅವರು ಕೊಟ್ಟ ವರದಿ ಆಧರಿಸಿ ವಿಕೇಂದ್ರೀಕೃತ, ಸ್ಥಳೀಯ ಕೌಶಲ್ಯ, ಉದ್ಯೋಗ ಸೃಷ್ಟಿಯ ಮಾದರಿಗಳನ್ನು ಅನ್ವೇಶಿಸಿ ಕಾಲಮಿತಿಯ ಯೋಜನೆಗಳನ್ನು ಸರಕಾರ ಕೈಗೊಂಡು ಈ ಪ್ರದೇಶಗಳ ಹಿಂದುಳಿದಿರುವಿಕೆಗೆ ಅಂತ್ಯ ಹೇಳಬೇಕಿದೆ.

Leave a Reply

Your email address will not be published. Required fields are marked *

error: Content is protected !!