
100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 2- ನಗರದ 100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ್ ಅವರು ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ ಗುರುನಾಥ ಅವರಿಂದ ಮಾಹಿತಿ ಪಡೆದು ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಚೀಟಿ ಪಡೆಯುವ ಸ್ಥಳದಲ್ಲಿ ತುಂಬಾ ನೂಕು ನುಗ್ಗಲು ಆಸ್ಪತ್ರೆಯ ಒಳ ಪ್ರವೇಶಕ್ಕೂ ಸ್ಥಳಾವಕಾಶ ಇಲ್ಲದ ಗಮನಕ್ಕೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ನೂತನ ಕಟ್ಟಡ ಲೋಕಾರ್ಪಣೆ ಆಗಿದೆ ಅದನ್ನು ಪೂರ್ಣ ಪ್ರಮಾಣದ ಸೇವೆಗೆ ಸಿದ್ಧಪಡಿಸುವಂತೆ ಸೂಚಿಸಿದರು.
ಆಸ್ಪತ್ರೆಯ ಲ್ಯಾಬ್ ಜನರೇಟರ್ ವ್ಯವಸ್ಥೆ ಪರಿಶೀಲಿಸಿದರು ತೀವ್ರ ನಿಗಾ ಘಟಕಕ್ಕೆ ಇಷ್ಟೊಂದು ಹಣ ಖರ್ಚು ಮಾಡಿದೆ ಯಾಕೆ ಸರಿಯಾಗಿ ಉಪಯೋಗಿಸುತ್ತಿಲ್ಲವೆಂದು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಅಂಬುಲೆನ್ಸ್ ಸೇವೆಗೆ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಗಳಿಗೆ ಸಮಂಜಸ ಉತ್ತರ ಕೊಡಲು ತಿಳಿಸಿ ಯಾವುದೇ ದೂರು ಬರದಂತೆ ಕರ್ತವ್ಯ ನಿರ್ವಹಿಸಲು ಅವರು ಸೂಚಿಸಿದರು.
ಸಾರ್ವಜನಿಕರು ಅನೇಕ ದೂರಗಳನ್ನು ಜಿಲ್ಲಾಧಿಕಾರಿಗಳ ಬಳಿ ಹೇಳಿಕೊಂಡರು.
ಈ ಸಂದರ್ಭದಲ್ಲಿ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿ ಡಾ ಗುರುನಾಥ್ ಡಾ ಆನಂದ್ ಡಾ ಪ್ರಶಾಂತ್ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಅಬ್ದುಲ್ ನಬಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಸಾರ್ವಜನಿಕರು ಇದ್ದರು .