ರಾಜ್ಯದಲ್ಲಿ ರೈತವಿರೋಧಿ ಸರಕಾರ : ಬಿ.ವೈ.ವಿಜಯೇಂದ್ರ

ಕರುನಾಡ ಬೆಳಗು ಸುದ್ದಿ

ಬೆಂಗಳೂರು, 30- 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವನ್ನು ಕಾಂಗ್ರೆಸ್ ಸರಕಾರ ನೀಡಿಲ್ಲ. ಇದು ರೈತವಿರೋಧಿಗಳ ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕಲಬುರಗಿ ಲೋಕಸಭಾ ಕ್ಷೇತ್ರದ ಕಲಬುರಗಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಮಲಾಪುರದಲ್ಲಿ ಇಂದು ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ನೆರೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಪರಿಹಾರ ಮೊತ್ತವನ್ನು ಗಮನಾರ್ಹವಾಗಿ ಹೆಚ್ಚಿಸಿ ಕೂಡಲೇ ಬಿಡುಗಡೆ ಮಾಡಿದ್ದರು. ಸಿದ್ದರಾಮಯ್ಯನವರಂತೆ ದೆಹಲಿಯಲ್ಲಿ ಪ್ರತಿಭಟನೆ ಮಾಡಿರಲಿಲ್ಲ ಎಂದು ಟೀಕಿಸಿದರು.

ರೈತರಿಗೆ ಪರಿಹಾರ ಕೊಡಿ ಎಂದರೆ ಕೇಂದ್ರವನ್ನು ದೂರುತ್ತಾರೆ. ನಿಮ್ಮ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ತಕ್ಷಣವೇ ಬೆಳೆ ನಾಶಕ್ಕೆ ಪ್ರತಿ ಹೆಕ್ಟೇರಿಗೆ 14 ಸಾವಿರ ರೂ., ತೋಟಗಾರಿಕಾ ಬೆಳೆಗೆ 24 ಸಾವಿರ ನೀಡಿದ್ದರು. ಈಗ ಸಿದ್ದರಾಮಯ್ಯನವರು 2 ಸಾವಿರ ಭಿಕ್ಷೆಯಂತೆ ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡುವುದಾಗಿ ಭರವಸೆ ನೀಡಲು ರಾಜ್ಯದ ಸಿಎಂಗೆ ನೆನಪಾಗುತ್ತದೆ. ಆದರೆ, ರೈತರ ಸಂಕಷ್ಟಕ್ಕಾಗಿ 5-6 ಸಾವಿರ ಕೋಟಿ ನೀಡಬೇಕೆಂದು ಇವರಿಗೆ ನೆನಪಾಗದೇ ಇರುವುದು ದುರಂತ ಎಂದು ಅವರು ಟೀಕಿಸಿದರು.

ಕಲ್ಯಾಣ ಕರ್ನಾಟಕದ ಜನರಲ್ಲಿ ಬಡತನ ಇರಬಹುದು. ಆದರೆ, ಹೃದಯ ಶ್ರೀಮಂತಿಗೆ ಅವರಲ್ಲಿ ಕೊರತೆ ಇಲ್ಲ ಎಂಬಂತೆ ಹೆಚ್ಚಿನ ಜನರು ಇಲ್ಲಿ ಬಂದಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಇಲ್ಲಿನ ಜನತೆಗೆ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು. ಯಡಿಯೂರಪ್ಪರನ್ನು ಜನನಾಯಕರಾಗಿ ಜನತೆ ಗುರುತಿಸುತ್ತಾರೆ ಎಂದು ವಿವರಿಸಿದರು.

ಬಂಜಾರ ಸಮಾಜದ ತಾಯಂದಿರು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿದ ಕುರಿತು ಸಂತಸ ವ್ಯಕ್ತಪಡಿಸಿದರು. ಬಂಜಾರ ಸಮಾಜಕ್ಕಾಗಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶ್ರಮಿಸಿದ್ದ ಕುರಿತು ನೆನಪಿಸಿದರು.

ಸಂಸದ ಡಾ.ಉಮೇಶ್ ಜಾಧವ್, ಶಾಸಕರಾದ ಬಸವರಾಜ ಮತ್ತಿಮೂಡ, ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮಾಜಿ ಸಚಿವ ಬಾಬುರಾವ ಚವ್ಹಾಣ, ನಗರಾಧ್ಯಕ್ಷ ಚಂದು ಪಾಟೀಲ, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೆರೆ, ತಮ್ಮೇಶ್ ಗೌಡ ಮೊದಲಾದ ಪ್ರಮುಖರು ಇದ್ದರು.

Leave a Reply

Your email address will not be published. Required fields are marked *

error: Content is protected !!