
ಡೆಂಗ್ಯೂ ವಿಚಾರದಲ್ಲಿ ನಿರ್ಲಕ್ಷ್ಯ : ಡಾ.ಅಶ್ವತ್ಥನಾರಾಯಣ
ಕರುನಾಡ ಬೆಳಗು ಸುದ್ದಿ
ಬೆಂಗಳೂರು, 8- ಡೆಂಗ್ಯೂ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಮತ್ತು ಬಿಬಿಎಂಪಿ ನಿರ್ಲಕ್ಷ್ಯ ವಹಿಸಿವೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದರು.
ಡೆಂಗ್ಯೂ ಹರಡುವಿಕೆ ಕುರಿತು ಪರಿಶೀಲಿಸಲು ಅವರು ಇಂದು ಓಕಳಿಪುರಂ ಚರ್ಚ್ ಬಳಿ ಇರುವ ಕೊಳೆಗೇರಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಡೆಂಗ್ಯೂ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿವೆ. ಸೊಳ್ಳೆ ನಿಯಂತ್ರಣಕ್ಕೆ ಗಮನ ಕೊಡುತ್ತಿಲ್ಲ. ಎಲ್ಲೆಡೆ ಡೆಂಗ್ಯೂ, ಚಿಕೂನ್‍ಗುನ್ಯ ಸೊಳ್ಳೆಗಳು ಮಾರಕವಾಗಿವೆ ಎಂದು ತಿಳಿಸಿದರು.
ಡೆಂಗ್ಯೂ ಪರೀಕ್ಷೆ ಸಂಬಂಧ ಸರಿಯಾಗಿ ಲ್ಯಾಬ್‍ಗಳನ್ನೂ ಸ್ಥಾಪಿಸಿಲ್ಲ. ಸರಕಾರ, ಬಿಬಿಎಂ ಕೊಟ್ಟಿರುವ ಕರಪತ್ರದಲ್ಲಿ ಎಲ್ಲಿ ಪರೀಕ್ಷೆ ಮಾಡಿಸಬಹುದು ಎಂಬ ಮಾಹಿತಿಯೇ ಇಲ್ಲ. ಎಲ್ಲಿಯೂ ಸರಿಯಾದ ಪರೀಕ್ಷೆ ಆಗುತ್ತಿಲ್ಲ. ರಕ್ತ ಪರೀಕ್ಷೆ ಸೇರಿ ವಿವಿಧ ಪರೀಕ್ಷೆಗಳು ಎಷ್ಟು ನಡೆದಿವೆ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.
ಜನರು ಸಾಯುತ್ತಿದ್ದಾರೆ. ಸೋಂಕು ಪ್ರಮಾಣ ಹೆಚ್ಚಾಗಿದೆ. ಆದರೆ, ಮುಖ್ಯಮಂತ್ರಿಗಳು ಒಂದು ಸಭೆಯನ್ನೂ ನಡೆಸಿಲ್ಲ. ಸಮರ್ಪಕ ವ್ಯವಸ್ಥೆ ಮಾಡದೆ ಇರುವುದು ದುಃಖಕರ ಎಂದು ಟೀಕಿಸಿದರು. ಕೋವಿಡ್ ಬಂದಾಗ ನಾವು ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕೂಡಲೇ ಮಾಡಿದ್ದೆವು. ಆದರೆ, ಈಗ ಡೆಂಗ್ಯೂ ಹರಡುವಿಕೆ ತಪ್ಪಿಸಲು ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಅಧಿಕಾರಿಗೂ ಡೆಂಗ್ಯೂ ಬಂದಿದೆ : ಮುಖ್ಯ ಆಯುಕ್ತರಿಗೂ ಡೆಂಗ್ಯೂ ಬಂದಿದೆ. ಆದರೂ ಇನ್ನೂ ಗಮನ ವಹಿಸುತ್ತಿಲ್ಲ. ಸೊಳ್ಳೆ ನಿಯಂತ್ರಣ ವಿಚಾರದಲ್ಲಿ ಕ್ರಮ ವಹಿಸುತ್ತಿಲ್ಲ. ಸೊಳ್ಳೆ ನಿಯಂತ್ರಣಕ್ಕೆ ಬೇಕಾದ ಔಷಧಿ ಸರಿಯಾಗಿ ಬಳಸುತ್ತಿಲ್ಲ. ಬರಿಯ ನೀರು ಸ್ಪ್ರೇ ಮಾಡುತ್ತಾರೆ. ಗುತ್ತಿಗೆದಾರರಿಗೆ ಹಣ ಕೊಡದ ಕಾರಣ ಅವರೂ ಕೆಲಸ ಮಾಡುವುದಿಲ್ಲ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ್ ನುಡಿದರು.
ಜ್ವರ ನಿಯಂತ್ರಣಕ್ಕೆ ಕ್ಲಿನಿಕ್‍ಗಳನ್ನು ತೆರೆದಿಲ್ಲ. ರೋಗಿಗಳು ಪಾಲಿಸಬೇಕಾದ ಕ್ರಮಗಳು, ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸುವ ಪ್ರಯತ್ನ ನಡೆದಿಲ್ಲ. ರಕ್ತ ಸೇರಿ ವಿವಿಧ ಪರೀಕ್ಷೆಗಳೂ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು. ಒಬ್ಬ ಎಂಟಮಾಲಜಿಸ್ಟ್ ಅಧಿಕಾರಿಯೂ ಬಿಬಿಎಂಪಿಯಲ್ಲಿ ಇಲ್ಲ ಎಂದು ಟೀಕಿಸಿದರು.
4 ತಿಂಗಳ ಕಾಲ ಮಳೆಗಾಲದಲ್ಲಿ ಡೆಂಗ್ಯೂ ಮತ್ತಿತರ ಕಾಯಿಲೆ ಹೆಚ್ಚು ಎಂದ ಅವರು, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿಗಳು ಮೂಡಾ ಸೊಳ್ಳೆ ಕಚ್ಚಿಸಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಅವರನ್ನು ಬಾಧಿಸುತ್ತಿದೆ. ಡೆಂಗ್ಯೂ ಸೊಳ್ಳೆ ಯಾರಿಗೆ ಕಚ್ಚಿದರೆ ನನಗೇನು ಎಂಬ ರೀತಿಯಲ್ಲಿ ಅವರು ಇವತ್ತು ವರ್ತಿಸುತ್ತಿದ್ದಾರೆ. ಇಷ್ಟು ಅನುಭವವಿರುವ ಸಿಎಂ ಒಂದು ಸಭೆ ಮಾಡಿದ್ದಾರಾ ಎಂದು ಕೇಳಿದರು.
ಶಿವಕುಮಾರ್ ಅವರು ಸೊಳ್ಳೆ ನಿಯಂತ್ರಣದತ್ತ ಗಮನ ಕೊಟ್ಟಿದ್ದಾರಾ? ಎಲ್ಲ ಬೆರಕೆ, ಎಲ್ಲ ಲೂಟಿ ಎಂಬಂತಾಗಿದೆ. ಈ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಈಗ ಎಷ್ಟು ಜನರಿಗೆ ಜ್ವರ ಬಂದಿದೆ ಎಂದು ಕ್ಲಿನಿಕ್‍ಗಳಲ್ಲಿ ಮಾಹಿತಿ ಪಡೆದಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ ಎಷ್ಟು ಜನರಿಗೆ ಜ್ವರ ಬಂದಿದೆ ಎಂದು ಮಾಹಿತಿ ಇದೆಯೇ ಎಂದ ಅವರು, ಇವತ್ತು ಎಷ್ಟು ಜನರ ಪರೀಕ್ಷೆ ಮಾಡುತ್ತಿದ್ದಾರೆ? ಏನಾದರೂ ತಿಳಿಸಿದ್ದಾರಾ? ಬರಿಯ ಉದಾಸೀನ ಇವರದು ಎಂದು ದೂರಿದರು.
ಇವರ ಬಳಿ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯೇ ಇಲ್ಲ. ಸಮರ್ಪಕ ಅಂಕಿಅಂಶವೂ ಇಲ್ಲ. ಇವರ ಬಳಿ ಮಾಹಿತಿ ಇದ್ದರೆ ಅದನ್ನಾದರೂ ಹೇಳಲಿ ಎಂದು ಆಗ್ರಹಿಸಿದರು. ಡೆಂಗ್ಯೂವಿನಲ್ಲಿ 4 ವಿಧಗಳಿವೆ. ಈ ಕುರಿತು ಜನರಿಗೆ ತಿಳಿಸಿಲ್ಲ. ತಡೆಗಟ್ಟುವ ಕಡೆ, ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ಗಮನ ಹರಿಸಿಲ್ಲ ಎಂದು ಅವರು ಆರೋಪಿಸಿದರು.
ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಬಿಎಂಪಿ ನಿಕಟಪೂರ್ವ ಮಹಾಪೌರ ಗೌತಮ್ ಕುಮಾರ್ ಅವರು ಈ ಸಂದರ್ಭದಲ್ಲಿ ಇದ್ದರು.