WhatsApp Image 2024-04-01 at 3.46.25 PM

ದೇಶದ 151 ಲೋಕಸಭಾ ಕ್ಷೇತ್ರಗಳಲ್ಲಿ ಎಸ್‌ಯುಸಿಐ ಅಭ್ಯರ್ಥಿಗಳು ಕಣಕ್ಕೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 1- 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ 151 ಕ್ಷೇತ್ರಗಳಲ್ಲಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಾರ್ಟಿಯ ಅಭ್ಯರ್ಥಿಗಳು ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಸೇರಿದಂತೆ 19 ಕ್ಷೇತ್ರಗಳಲ್ಲಿ ಎಸ್‌ಯುಸಿಐ(ಸಿ) ಪಾರ್ಟಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಸೆಕ್ರಟಿರಿಯೆಟ್ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.

ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಹಿಂದೆ ಭಾರತದ ಸಾಲ ಸುಮಾರು 54 ಲಕ್ಷ ಕೋಟಿ ₹ ಇತ್ತು. ಇದು ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗಿನ ಅಂಕಿ-ಅಂಶ. ಬಿಜೆಪಿ ಸರಕಾರದ ಎರಡು ಆಡಳಿತಾವಧಿಯಲ್ಲಿ ಭಾರತದ ಸಾಲ 2014ಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಇನ್ನೂ ಅಭಿವೃದ್ಧಿ ವಿಚಾರದಲ್ಲಿ ಅಂಬಾನಿ-ಆದಾನಿಯಂಥ ಕೆಲವೇ ಕೆಲವು ವ್ಯಕ್ತಿಗಳು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆಯೇ ಹೊರತು ಭಾರತದ ಬಡತನ, ನಿರುದ್ಯೋಗ ಸಮಸ್ಯೆಗಳು ಮತ್ತಷ್ಟೂ ಹೆಚ್ಚಾಗಿವೆ ಎಂಬುದಕ್ಕೆ ಗರೀಬ್ ಕಲ್ಯಾಣ ಯೋಜನೆಯಡಿ ನೀಡುವ ಪಡಿತರದಿಂದ ಗೊತ್ತಾಗುತ್ತದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಅಲ್ಲ, ಬಿಜೆಪಿ ಹೆಚ್ಚು ಭ್ರಷ್ಟವಾದರೆ, ಕಾಂಗ್ರೆಸ್‌ನಲ್ಲೂ ಭ್ರಷ್ಟಾಚಾರವಿದೆ. ಬಿಜೆಪಿಗೆ ಹೋಲಿಸಿದರೆ ಕಡಿಮೆಯಷ್ಟೇ. ಚುನಾವಣಾ ಬಾಂಡ್‌ನಿಂದ ಅವರ ಬಣ್ಣ ಬಯಲಾಗಿದೆ. ಹಾಗಾಗಿ ದೇಶದ ಜನರಿಗೆ ಬಿಜೆಪಿ-ಕಾಂಗ್ರೆಸ್ ಬದಲಾಗಿ ಮತ್ತೊಂದು ಸಾರ್ವಜನಿಕ ಶಕ್ತಿಯ ಅಗತ್ಯವಿದೆ. ಜನರ ನಡುವೆ, ಹೋರಾಟದ ಮೂಲಕ ಜನರ ಆಶೋತ್ತರಗಳ ದನಿಯಾಗಿ ಕಾರ್ಯನಿರ್ವಹಿಸುವ ಎಸ್‌ಯುಸಿಐ(ಸಿ) ಅಂಥ ಬದ್ಧತೆ ಹೊಂದಿರುವ ಪಕ್ಷವಾಗಿದೆ ಎಂದು ಹೇಳಿದರು.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಶರಣು ಗಡ್ಡಿ ಸ್ಪರ್ಧಿಸಲಿದ್ದಾರೆ. ಇವರು ಸಾರ್ವಜನಿಕ ಬದುಕಿನಲ್ಲಿ ಅತ್ಯುತ್ತಮ ಹುದ್ದೆಯಲ್ಲಿದ್ದರೂ ಅದನ್ನು ತೊರೆದು ಜನಪರ ಹೋರಾಟಗಳ ಮೂಲಕ ಪಕ್ಷವನ್ನು ಬಲಪಡಿಸುವ ಆ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕ್ಷೇತ್ರದ ಜನರು ಶರಣು ಗಡ್ಡಿಯವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಶರಣು ಗಡ್ಡಿ, ಮುಖಂಡರಾದ ಶರಣಪ್ಪ ಉದ್ಬಾಳ, ಶರಣು ಪಾಟೀಲ, ಗಂಗರಾಜ ಅಳ್ಳಳ್ಳಿ ಇದ್ದರು.

Leave a Reply

Your email address will not be published. Required fields are marked *

error: Content is protected !!