IMG-20250322-WA0037

ಕೊಪ್ಪಳದ ಸಾಂಸ್ಕೃತಿಕ ಸಂಘಟನಾ ಚತುರ ರಾಜಶೇಖರ ಅಂಗಡಿ

                                                     ಮಂಜುನಾಥ ಡಿ.ಡೊಳ್ಳಿನ

: –

ಕರುನಾಡ ಬೆಳಗು 

ರಾಜಶೇಖರ ಅಂಗಡಿ ಹಲಗೇರಿ(52),ಇವರು ಕವಿಯಲ್ಲ,ಕತೆಗಾರನಲ್ಲ,ಸಾಹಿತಿಯಲ್ಲ ಆದರೂ ಕೊಪ್ಪಳದ ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದ ಸಂಘಟನಾ ಚತುರ.ಸ್ವಲ್ಪ ಹುಂಬತನ,ಮೇಲ್ನೋಟಕ್ಕೆ ಕಾಣುವ ಒರಟುತನ,ಆಳದಲ್ಲಿ ಎಲ್ಲರೊಂದಿಗೆ ಬೆರೆಯುವ, ನಿಷ್ಕಲ್ಮಶ ಪ್ರೀತಿ ಹಂಚುವ ತನ್ನ ಸ್ವಭಾವದಿಂದಲೇ ಜಿಲ್ಲೆಯಾದ್ಯಂತ ಮನೆ ಮಾತಾಗಿದ್ದರು. ನಾಡಿನಾದ್ಯಂತ ದೊಡ್ಡ ಪರಿಚಿತ ವಲಯ ಹೊಂದಿದ್ದರು.

ಕಳೆದ ವರ್ಷ 2024 ರ ಮಾರ್ಚ್ 23 ರಂದು ನಮ್ಮನ್ನೆಲ್ಲ ಅಗಲಿದ ರಾಜಶೇಖರ ಅಂಗಡಿಯವರ ಹುಟ್ಟೂರು ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ , ತಾಲೂಕಿನ 10 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಸಾಪ ಅಯೋಜಿಸಿತ್ತಿದೆ.ಸಾಹಿತಿ,ಕಲಾವಿದೆ,ಸಾಂಸ್ಕೃತಿಕ ಲೋಕದ ಮಾಲಾ ದೇವೇಂದ್ರಪ್ಪ ಬಡಿಗೇರ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ವೇದಿಕೆಗೆ ನುಡಿಸೇವಕ ರಾಜಶೇಖರ ಅಂಗಡಿಯವರ ಹೆಸರನ್ನು ಇಟ್ಟು ಸ್ಮರಿಸಲಾಗುತ್ತಿದೆ.

ಕೊಪ್ಪಳ ತಾಲೂಕಿನ ಹಲಗೇರಿಯ ವ್ಯಾಪಾರ ವೃತ್ತಿಯ ಕುಟುಂಬದ ಹಿನ್ನೆಯಿಂದ ಬಂದಿದ್ದ ರಾಜಶೇಖರ ಗುಡದೀರಪ್ಪ ಅಂಗಡಿಯವರು , ಸಾಂಪ್ರದಾಯಿಕ ವೃತ್ತಿ ಪರಿಧಿಯಾಚೆಗೆ ಗುರುತಿಸಿಕೊಂಡಿದ್ದು ಅವರ ವ್ಯಕ್ತಿತ್ವವನ್ನಷ್ಟೇ ಅಲ್ಲ, ಗ್ರಾಮ್ಯ ಪರಿಸರದ ಅವಿಭಕ್ತ ಕುಟುಂಬದ ಪರಿಸರವನ್ನೇ ವಿಸ್ತರಿಸಿದಂತೆ ಇದ್ದರು.

ಸುಮಾರು 30 ಕ್ಕೂ ಅಧಿಕ ವರ್ಷಗಳ ಅವರೊಂದಿಗಿನ ಒಡನಾಟದಲ್ಲಿ ಕಂಡುಕೊಂಡ , ಚಿರಕಾಲ ನೆನಪಿನಲ್ಲಿ ಉಳಿಯುವ ಹತ್ತು ಹಲವು ಹೋರಾಟಗಳು,ಸಾಂಸ್ಕೃತಿಕ ಚಟುವಟಿಕೆಗಳಿವೆ. ಅವುಗಳ ಆಯೋಜನೆಯ ಹಿಂದೆ ಅವರಷ್ಟೇ ಅಲ್ಲ ಅವರ ಇಡೀ ಕುಟುಂಬ ಪಟ್ಟ ಶ್ರಮ,ನೀಡಿದ ಸಹಕಾರ ಸ್ಮರಣೀಯವಾಗಿವೆ.

ಆಗಿನ್ನೂ ಸಣ್ಣ ತಾಲೂಕು ಕೇಂದ್ರವಾಗಿದ್ದ ಕೊಪ್ಪಳ ಜಿಲ್ಲಾ ಕೇಂದ್ರವಾಗಿ ಘೋಷಣೆಯಾಗಿದ್ದ ಪ್ರಾರಂಭಿಕ ದಿನಗಳಲ್ಲಿ ನಗರದ ನಿವಾಸಿಗಳಲ್ಲಿ ತಾವು ಜಿಲ್ಲಾ ಕೇಂದ್ರದವರು ಎಂಬ ವಿಶಿಷ್ಠ ಹೆಮ್ಮೆ,ಅಭಿಮಾನ ಮನೆ ಮಾಡಿದ್ದವು.ಈಗಿನ ಸಾಹಿತ್ಯಭವನ ಬಳಿಯ ಪುರಸಭೆ ಮಳಿಗೆಗಳಲ್ಲಿ ಶಾಂಭವಿ ಟ್ರೇಡಿಂಗ್ ಕಂಪನಿ ನಿರ್ವಹಿಸುತ್ತಿದ್ದ ಹಲಗೇರಿಯ ,ವೀರಣ್ಣ ಅಂಗಡಿ,ಶಂಕರಪ್ಪ ಅಂಗಡಿ,ಮಾರುತಿ ಅಂಗಡಿ ,ರಾಜಶೇಖರ ಅಂಗಡಿ ಸಹೋದರರಲ್ಲಿ ಕಿರಿಯರಾಗಿದ್ದ ಇವರು ,ಪಕ್ಕದಲ್ಲಿಯೇ ಇದ್ದ ಸಾರ್ವಜನಿಕ ಗ್ರಂಥಾಲಯದ ಮೂಲಕ ನಮ್ಮ ಆತ್ಮೀಯ ವಲಯಕ್ಕೆ ಹತ್ತಿರವಾದರು. ಕೊಪ್ಪಳದ ಸಾರ್ವಜನಿಕ ಗ್ರಂಥಾಲಯಕ್ಕೆ ಆ ಕಟ್ಟಡವು ಹಸ್ತಾಂತರವಾಗುವಲ್ಲಿಯೂ ಇವರು ಓದುಗರ ಬಳಗದೊಂದಿಗೆ ಪುರಸಭೆಗೆ ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಒತ್ತಡ ತರುವ ಕಾರ್ಯದಲ್ಲಿ ಭಾಗಿಯಾದರು.

ನಾವೆಲ್ಲ ಗೆಳೆಯರು ಆಗ ನವಚೇತನ ಯುವ ಮಿತ್ರವೃಂದ ಎಂಬ ಸಂಘಟನೆ ಕಟ್ಟಿಕೊಂಡು ಹೊರಜಗತ್ತಿಗೆ ಪರಿಚಯವಾಗತೊಡಗಿದ್ದ ಕಾಲದಲ್ಲಿ ನಮ್ಮ ಗೆಳೆಯರ ಬಳಗಕ್ಕೆ ಹಿರಿಯಣ್ಣನಂತೆ ಬಂದು ಸೇರಿದ ರಾಜಶೇಖರ ಅಂಗಡಿ ಅಲ್ಪಾವಧಿಯಲ್ಲಿ ಎಲ್ಲರ ಪ್ರೀತಿ,ವಿಶ್ವಾಸ ,ಆತ್ಮೀಯತೆ ಸಂಪಾದಿಸಿದರು. ಕೊಪ್ಪಳ ಜಿಲ್ಲೆಯಾದ ನಂತರ ಮೊದಲ ಬಾರಿಗೆ ನಡೆದ ಕಸಾಪ ಚುನಾವಣೆಯಲ್ಲಿ ಡಾ.ಕೆ.ಬಿ.ಬ್ಯಾಳಿ ಹಾಗೂ ರವಿತೇಜ ಅಬ್ಬಿಗೇರಿ ಯವರು ಸ್ಪರ್ಧಿಸಿದ್ದರು.ಅಬ್ಬಿಗೇರಿಯವರ ಪರವಾಗಿ ಚುನಾವಣೆ ಮತಯಾಚಿಸಿದ್ದ ರಾಜಶೇಖರ ಮತ್ತು ಹಿರಿಯರ ತಂಡವು ಬೆರಳೆಣಿಕೆಯ ಮತಗಳ ಸೋಲಿನ ನಂತರ ತಿರುಳ್ಗನ್ನಡ ಕ್ರಿಯಾ ಸಮಿತಿ ಸ್ಥಾಪಿಸಿ. ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರೆಸಿತು.ನಂತರದ ಚುನಾವಣೆಗಳಲ್ಲಿ ರವಿತೇಜ ಅಬ್ಬಿಗೇರಿ ಒಂದು ಬಾರಿ ,ಶೇಖರಗೌಡ ಮಾಲಿಪಾಟೀಲರು ಎರಡು ಬಾರಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಚುನಾಯಿತರಾಗುವಲ್ಲಿ ಮಹತ್ವದ ಪಾತ್ರ ವಹಿಸಿ,ಕೊಪ್ಪಳ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಎರಡು ಅವಧಿಗೆ ಕಾರ್ಯನಿರ್ವಹಣೆ ಮಾಡಿದರು.

ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದ ಸಂದರ್ಭವೊಂದರಲ್ಲಿ ಸಾಹಿತ್ಯ ಭವನದಲ್ಲಿ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದವು, ಕಲಾವಿದರಿಗೆ ಊಟೋಪಚಾರ,ಸಂಭಾವನೆ ನೀಡುವಲ್ಲಿ ವ್ಯತ್ಯಯ ಉಂಟಾದಾಗ ರಾಜಶೇಖರ ಕೂಡಲೇ ಮನೆಗೆ ತೆರಳಿ ತನ್ನ ಪತ್ನಿ ಶ್ರೀಮತಿ ಸರ್ವಮಂಗಳಾ ಅವರ ಬಳಿಯಿದ್ದ ಒಡವೆಗಳನ್ನು ಒತ್ತೆ ಇಟ್ಟು ಸಾಲ ತಂದು ಕಾರ್ಯಕ್ರಮ ಪೂರ್ತಿಗೊಳಿಸಿದ್ದ,ಇದು ಆತನ ಛಲಕ್ಕೆ ಒಂದು ಸಣ್ಣ ಉದಾಹರಣೆಯಷ್ಟೇ. ಆತನ ಸೇವೆಯ ಹಿಂದೆ ಅವರ ಪತ್ನಿ ಸರ್ವಮಂಗಳಾ ಹಾಗೂ ಮಕ್ಕಳ ಸಹಕಾರವೂ ಕೂಡ ದೊಡ್ಡದು.

 

ಕೊಪ್ಪಳ ತಾಲ್ಲೂಕು ಕಸಾಪ ಅಧ್ಯಕ್ಷನಾಗಿ ಎರಡು ಅವಧಿಗೆ,ಕೊಪ್ಪಳ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ ಒಂದು ಅವಧಿಗೆ ಕಾರ್ಯನಿರ್ವಹಣೆ ಮಾಡಿದ ಇವರು ಸ್ವತಃ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿಗೆ ಸ್ಪರ್ಧಿಸಿದಾಗ ವೀರಣ್ಣ ನಿಂಗೋಜಿ ಅವರ ವಿರುದ್ಧ ಅಲ್ಪ ಮತಗಳ ಅಂತರದಿಂದ ಪರಾಜಿತರಾದರೂ ಕೂಡ ಸಂಘಟನೆ ಕಾರ್ಯ ನಿರಂತರವಾಗಿಟ್ಟುಕೊಂಡರು. 2016 ರ ಫೆ.29 ರಂದು ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಅತ್ಯಧಿಕ ಮತಗಳ ಅಂತರದಿಂದ ಚುನಾಯಿತರಾಗಿ ಆಯ್ಕೆಯಾದರು.

*ಪ್ರಮುಖ ಕಾರ್ಯಗಳು-ಹೋರಾಟಗಳು*

ಕೊಪ್ಪಳ ಜಿಲ್ಲಾ ರಚನಾ ಹೋರಾಟದಲ್ಲಿ ಭಾಗಿಯಾಗಿದ್ದರು.ಅಂಗಡಿ -ಮುಂಗಟ್ಟು,ಬ್ಯಾಂಕುಗಳ ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆ,ತ್ರಿಭಾಷಾ ಸೂತ್ರ ಅಳವಡಿಕೆ ಹೋರಾಟದಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿ ಅನೇಕ ಆಂಗ್ಲ ಫಲಕಗಳಿಗೆ ಖುದ್ದಾಗಿ ಮಸಿ ಬಳೆದಿದ್ದರು.ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಿ ಕೊಪ್ಪಳ ಸುತ್ತಮುತ್ತಲಿನ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಒತ್ತಾಯಿಸಿ‌ ಹೋರಾಟ ಮಾಡಿದರು.ಹೈದ್ರಾಬಾದ್ ಕರ್ನಾಟಕ 371 (ಜೆ) ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿ ನಡೆದ ಹೋರಾಟದಲ್ಲಿಯೂ ಕೂಡ ಸಕ್ರಿಯರಾಗಿದ್ದರು.ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಪ್ರಾರಂಭಕ್ಕೆ ವಿರೋಧಿಸಿ ಅರೆಬೆತ್ತಲೆ ಹೋರಾಟ ಸಂಘಟಿಸಿದ್ದರು.ಕೊಪ್ಪಳ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನಗಳ ಯಶಸ್ವಿ ಆಯೋಜನೆ,2011 ರಲ್ಲಿ ಗಂಗಾವತಿಯಲ್ಲಿ ಜರುಗಿದ 78 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆ .ರಂಗಸೇತು ಸಂಘಟನೆ ಮೂಲಕ ಕೊಪ್ಪಳದಲ್ಲಿ ನೀನಾಸಂ ಹಾಗೂ ಶಿವಸಂಚಾರ ಮತ್ತಿತರ ಹೊಸ ಅಲೆಯ ನಾಟಕಗಳ ಪ್ರದರ್ಶನ ಆಯೋಜನೆ ಮೊದಲಾದ ಕಾರ್ಯಗಳು ಉಲ್ಲೇಖನೀಯ.ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಸಲಹೆ ಕೊಟ್ಟರೆ ಅವುಗಳನ್ನು ತಕ್ಷಣ ಕ್ರಿಯೆಗೆ ಇಳಿಸುವ ತಾಕತ್ತು ಅವರಲ್ಲಿತ್ತು.

ಕೊಪ್ಪಳ ಸ್ವಾತಂತ್ರ್ಯ ಸಮರ ನಾಟಕದಲ್ಲಿ ಸುರಪುರದ ರಾಜಾ ವೆಂಟಪ್ಪನಾಯಕ, ಬಿ.ಸಿ.ಪಾಟೀಲ ವಿರಚಿತ ಕಾಯಕಯೋಗಿ ನಾಟಕದಲ್ಲಿ ಅಕ್ಕಮಹಾದೇವಿ ಪಾತ್ರದಲ್ಲಿ ಅಭಿನಯ ಮಾಡಿದ್ದರು.ನಾಡಿನ ಪ್ರಮುಖ ಉತ್ಸವ,ಸಮ್ಮೇಳನಗಳಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ ಶ್ರೇಯಸ್ಸು ಅವರದ್ದಾಗಿದೆ.

ಕನ್ನಡ ನುಡಿಸೇವೆಗೆ , ಹುಟ್ಟಿದ ನೆಲ-ಜಲದ ಸೇವೆಗೆ ಓದು,ವಿದ್ಯೆಯಷ್ಟೇ ಅಲ್ಲ ಕನ್ನಡಪರ ಕಾಳಜಿಯೊಂದಿದ್ದರೆ ಸಾಕು ಉತ್ತಮ ಸಂಘಟನೆ ಮಾಡಬಹುದು,ಕನ್ನಡ ಸೇವೆ ಸಲ್ಲಿಸಬಹುದು ಎಂಬುದನ್ನು ಸಾಬೀತು ಮಾಡಿದ . ವೈಯಕ್ತಿಕವಾಗಿ ಕೊಂಚ ಆರ್ಥಿಕ ಶಿಸ್ತು,ಆರೋಗ್ಯದ ಕಡೆಗೆ ಕಾಳಜಿ ತೋರಿದ್ದರೆ ರಾಜಶೇಖರ ಇಷ್ಟು ಬೇಗ ನಿರ್ಗಮಿಸುತ್ತಿರಲಿಲ್ಲ.

 

ಮಂಜುನಾಥ ಡಿ.ಡೊಳ್ಳಿನ

ಜಂಟಿ ನಿರ್ದೇಶನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಬೆಂಗಳೂರು 

Leave a Reply

Your email address will not be published. Required fields are marked *

error: Content is protected !!