
ಸೆ.1 ರಿಂದ 21ನೇ ಜಾನುವಾರು ಗಣತಿ ಮೊದಲ ಬಾರಿಗೆ ಸ್ಮಾರ್ಟಫೋನ್ ಮೂಲಕ ಮಾಹಿತಿ ನಮೂದು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 21- ಜಿಲ್ಲೆಯಾದ್ಯಂತ ಸೆ.01 ರಿಂದ 21 ನೇ ಜಾನುವಾರು ಗಣತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ದೇಶದಲ್ಲಿ 21ನೇ ಜಾನುವಾರು ಗಣತಿ ಸೆಪ್ಟಂಬರ್ 1ಕ್ಕೆ ದೇಶಾದ್ಯಂತ ಆರಂಭಗೊಳ್ಳುತ್ತಿದೆ. ಇದುವರೆಗೆ ಪುಸ್ತಕದಲ್ಲಿ ಗಣತಿ ಮಾಹಿತಿ ನಮೂದಿಸುತ್ತಿದ್ದ ಗಣತಿಕಾರರು ಈ ಬಾರಿ ಮೊದಲ ಬಾರಿಗೆ ಸ್ಮಾರ್ಟಫೋನ್ ಬಳಸಿ ಮನೆ ಮನೆಗೆ ತೆರಳಿ ಗಣತಿ ಮಾಡುವರು.
ಕೇಂದ್ರ ಪಶುಸಂಗೋಪನ ಇಲಾಖೆಯಿಂದಲೇ ‘21ಸ್ಟ್ ಲೈವ್ ಸ್ಟಾಕ್ ಸೆನ್ಸಸ್’ ಎನ್ನುವ ಪ್ರತ್ಯೇಕ ಆಪ್ ಅಭಿವೃದ್ದಿ ಪಡಿಸಲಾಗಿದ್ದು, ಬಳಸುವ ಬಗ್ಗೆಯೂ ತರಬೇತಿ ನೀಡಲಾಗಿದೆ. ಹಿಂದೆ ಪುಸ್ತಕದಲ್ಲಿ 200 ಕಾಲಂಗಳನ್ನು ಭರ್ತಿ ಮಾಡಬೇಕಿತ್ತು. ಈ ಬಾರಿ ಚುಟುಕಾಗಿ ಆಪ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್‌ವರ್ಕ್ ಇಲ್ಲದಿದ್ದರೂ ಈ ಆಪ್ ನೆಟ್‌ವರ್ಕ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿಯನ್ನು ಹಂಚಿಕೊಳ್ಳವಂತೆ ವಿನ್ಯಾಸ ಪಡಿಸಲಾಗಿದೆ.
ರಾಜ್ಯದ ಪಶುಸಂಗೋಪನೆ ಇಲಾಖೆಯೂ 4 ತಿಂಗಳ ಕಾಲ ನಡೆಯುವ ಈ ಬೃಹತ್ ಸಮೀಕ್ಷಾ ಕಾರ್ಯಕ್ರಮಕ್ಕೆ ಸಜ್ಜಾಗುತ್ತದೆ. ಮಾಸ್ಟರ್ ಟ್ರೇನರ್‌ಗಳ ತರಬೇತಿ ಪೂರ್ಣಗೊಂಡಿದ್ದು, ಗಣತಿದಾರರಿಗೆ ತರಬೇತಿ ವಿವಿಧ ಹಂತಗಳಲ್ಲಿ ನಡೆಯುತ್ತದೆ.
5 ವರ್ಷಗಳಿಗೊಮ್ಮೆ ಸಮೀಕ್ಷೆ : 1919 ರಿಂದ ಜಾನುವಾರು ಗಣತಿ ನಡೆಯುತ್ತಾ ಬಂದಿದ್ದು, ಕಳೆದ 100 ವರ್ಷಗಳಲ್ಲಿ 20 ಗಣತಿ ನಡೆದಿದೆ. ಇದು 21 ನೇ ಜಾನುವಾರು ಗಣತಿಯಾಗಿದೆ. ಕರ್ನಾಟಕದಲ್ಲಿನ ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವರು. ಅದಕ್ಕಾಗಿ 3357 ಗಣತಿದಾರರು 730 ಮೇಲ್ವಿಚಾರಕರು ಇರುತ್ತಾರೆ.
ಬಳ್ಳಾರಿ ಜಿಲ್ಲೆಯಲ್ಲಿ 55 ಗಣತಿದಾರರು 12 ಮೇಲ್ವಿಚಾರಕರು ಇರುತ್ತಾರೆ. ಗಣತಿದಾರರು ಮನೆ ಮನೆಗೆ ತೆರಳಿದರೆ, ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಅದರ ಒಟ್ಟು ಉಸ್ತುವಾರಿ ವಹಿಸಿಕೊಳ್ಳುವರು.