
8 ತಿಂಗಳ ಗರ್ಭಿಣಿಯ ಓಟ ಮತ್ತು ಮಹಿಳೆಯರ ಅದಮ್ಯ ಧೀಶಕ್ತಿ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಎಂಟು ತಿಂಗಳ ಬಸಿರು ಹೊತ್ತ ಹೆಣ್ಣು ಮಕ್ಕಳು ಮನೆ ಕೆಲಸಗಳನ್ನು ನಿಭಾಯಿಸಲು ಒದ್ದಾಡುತ್ತಾ, ಸಾಮಾನ್ಯವಾಗಿ ಉಸ್ಸಪ್ಪ ಎಂದು ಏದುಸಿರು ಬಿಡುತ್ತಾ ಇದ್ದರೆ ಕೆಲವು ವರ್ಷಗಳ ಹಿಂದೆ ಎಂಟು ತಿಂಗಳ ಗರ್ಭಿಣಿ ಮಹಿಳೆಯೊಬ್ಬಳು 800 ಮೀಟರ್ ಓಟದಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ.
ಅಲಿಸಿಯ ಮೊಂಟನೋ ಎಂಬ 34ರ ವಯಸ್ಸಿನ ಅಮೆರಿಕಾದ ಪ್ರಜೆ ತನ್ನ ಗರ್ಭದಲ್ಲಿ ಎಂಟು ತಿಂಗಳ ಮಗುವನ್ನು ಹೊತ್ತಿರುವಾಗಲೇ ಓಡಿ ಗುರಿ ಮುಟ್ಟಿದ್ದಾಳೆ.
ಅಮೆರಿಕದ ಡೈಲಿ ಮೇಲ್ ಪತ್ರಿಕೆಯ ಪ್ರಕಟಣೆಯ ಪ್ರಕಾರ ಆಕೆ ಗರ್ಭಿಣಿಯಾದಾಗಲೂ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಅದಮ್ಯ ಉತ್ಸಾಹ ಮತ್ತು ತುಡಿತವನ್ನು ಅದುಮಿಡದೆ ಗೆಲ್ಲಲೇ ಬೇಕೆಂಬ ಹುಮ್ಮಸ್ಸಿನಿಂದ ಓಡಿದ್ದು ಗಮನಾರ್ಹ.
800 ಮೀಟರ್ ಓಟ ಎಂದರೆ ಎರಡು ನೂರು ಮೀಟರ್ ನ ನಾಲ್ಕು ದೊಡ್ಡ ಸುತ್ತುಗಳು. ಎಂಟು ತಿಂಗಳ ಮಗುವನ್ನು ಗರ್ಭದಲ್ಲಿ ಹೊತ್ತಿರುವ ಅಲಿಸಿಯ ಕೇವಲ ಓಟದಲ್ಲಿ ಗೆದ್ದಿಲ್ಲ, ಒಟ್ಟು 800 ಮೀಟರ್ ಓಟವನ್ನು ಎರಡು ನಿಮಿಷ 32 ಸೆಕೆಂಡುಗಳಲ್ಲಿ ಪೂರೈಸಿರುವ ಆಕೆ ದಾಖಲೆಯನ್ನು ಕೂಡ ಮಾಡಿದ್ದಾಳೆ.
ತರಬೇತುದಾರರು ಮತ್ತು ವೈದ್ಯರ ಹಾಜರಾತಿಯಲ್ಲಿ ಪ್ರತಿದಿನ ತರಬೇತಿ ಪಡೆಯುತ್ತಿದ್ದ ಅಲಿಸಿಯ 800 ಮೀಟರ್ ಓಟವನ್ನು ಓಡಲು ಅವರ ಅನುಮತಿಯನ್ನು ಕೂಡ ಪಡೆದಿದ್ದರು. ಇದು ಆಕೆಗೆ ದೊಡ್ಡ ಸವಾಲಾಗಿತ್ತು ಕೂಡ. ಬೇರೆಲ್ಲ ಗರ್ಭಿಣಿ ಮಹಿಳೆಯರು ಎಂಟು ತಿಂಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಈಕೆ ಬಿಸಿಲಲ್ಲಿ ಓಡುತ್ತಿದ್ದಳು ಎಂಬುದೇ ಅತಿ ದೊಡ್ಡ ಸೋಜಿಗವಾಗಿತ್ತು. ಸ್ಪರ್ಧೆಯೊಂದರಲ್ಲಿ ಓಡಿದ ಮೊದಲ ಗರ್ಭಿಣಿ ಮಹಿಳೆ ಎಂಬ ಗರಿಯೂ ಕೂಡ ಈಕೆಯ ಹೆಮ್ಮೆಯ ಕಿರೀಟಕ್ಕಿದೆ.
ಆಕೆ ತನ್ನ ಓಟವನ್ನು ಪೂರೈಸಿದಾಗ ನೆರೆದಿದ್ದ ಪ್ರೇಕ್ಷಕರೆಲ್ಲ ಎದ್ದು ನಿಂತು ಕರತಾಡನ ಮಾಡಿ ಆಕೆಯ ಈ ಸಾಧನೆಯನ್ನು ಕೊಂಡಾಡಿದರು.
1986 ಎಪ್ರಿಲ್ 23ರಲ್ಲಿ ಜನಿಸಿದ ಅಲಿಸಿಯ ಮಧ್ಯಮ ವೇಗದ ಓಟಗಾರ್ತಿ. ಸತತ ಆರು ಬಾರಿ ಅಮೆರಿಕಾದ ಹೊರಾಂಗಣ ಟ್ರ್ಯಾಕ್ ಮತ್ತು ಫೀಲ್ಡ್ ನ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆಕೆ 2006, 2007ರ ಗೆಲುವಿನ ನಂತರ 2010ರಿಂದ 2015ರವರೆಗೆ ಪ್ರತಿ ವರ್ಷವೂ ಮೊದಲ ಸ್ಥಾನ ಗಳಿಸಿದಳು. 2014ರಲ್ಲಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗಲೂ ಕೂಡ ಓಡಿ ತನ್ನ ಗುರಿ ತಲುಪಿದ್ದಳು.
ಅಲಿಸಿಯಾಳ ಈ ಛಲದ ನಡೆಯನ್ನು ನೋಡಿದಾಗ ನಮಗೆ ಅರಿವಾಗುವುದು ಹೆಣ್ಣು ಗಂಡಿಗೆ ಯಾವುದರಲ್ಲೂ ಕಡಿಮೆ ಇಲ್ಲ,ದೈಹಿಕ ಬಾಹ್ಯ ಬದಲಾವಣೆಗಳನ್ನು ಹೊರತುಪಡಿಸಿದರೆ ಮಾನಸಿಕವಾಗಿ ಹೆಣ್ಣು ಗಂಡಿಗಿಂತಲೂ ಸದೃಡಳು.
12ನೇ ಶತಮಾನದಲ್ಲಿ ಹೆಣ್ಣು ಗಂಡುಗಳ ನಡುವಿನ ವ್ಯತ್ಯಾಸವನ್ನು ದೈಹಿಕ ವ್ಯತ್ಯಾಸಗಳು ಎಂದು ಲೋಕದ ಜನರಲ್ಲಿ ಅರಿವು ಮೂಡಿಸಿ, ಲೋಕದ ಗಂಡರ ಒಲ್ಲೆ ಎಂದು ದಿಟ್ಟವಾಗಿ ನುಡಿದ ಶರಣೆ ಕದಳಿಯ ಕರ್ಪೂರ ಅಕ್ಕಮಹಾದೇವಿ 12ನೇ ಶತಮಾನದ ಕವಯತ್ರಿ,ವಚನಕಾರರಲ್ಲಿ ಒಬ್ಬಳಾಗಿ ಜನರಲ್ಲಿರುವ ಅಜ್ಞಾನ ಮೌಢ್ಯ,ಅಂಧಕಾರಗಳನ್ನು ತೊಡೆಯಬಯಸಿ ಅಂತಿಮವಾಗಿ ತಾನು ಬಯಸಿದಂತೆ ಚೆನ್ನಮಲ್ಲಿಕಾರ್ಜುನನ ಸಾನಿಧ್ಯದಲ್ಲಿ ಲಿಂಗೈಕ್ಯಳಾದವಳು.
” ಹೆಣ್ಣಲ್ಲವೇ ನಮ್ಮನೆಲ್ಲ ಹಡೆದ ತಾಯಿ
ಹೆಣ್ಣಲ್ಲವೇ ನಮ್ಮನೆಲ್ಲ ಪೊರೆದವಳು.”
ಎಂದು ತುಸು ಸೌಮ್ಯವಾಗಿ ಆದರೆ ದೃಢವಾಗಿ ಸಮಾಜದ ಜನರನ್ನು ಎಚ್ಚರಿಸಿದ ಸಂಚಿಯ ಹೊನ್ನಮ್ಮ ತನ್ನ ಕೃತಿ ‘ಹರಿಬದೆಯ ಧರ್ಮದಲ್ಲಿ’ ಹೆಣ್ತನದ ಮಹತ್ವವನ್ನು ಸಾರಿದವಳು..
ಇಂದೋರ್ ನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಮುಸಲ್ಮಾನರ ದಾಳಿಯಿಂದಾಗಿ ನಾಮಾವಶೇಷಗೊಂಡಿದ್ದ ಭಾರತದ ಹಲವಾರು ದೇವಾಲಯಗಳನ್ನು ಪುನರುತ್ಥಾನಗೊಳಿಸಿ ನಮ್ಮ ಪ್ರಾಚೀನ ಧರ್ಮ, ಆಚಾರ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿದವಳು.
ಇನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಎದುರು ನಿಲ್ಲಲು ಸಾಧ್ಯವಿಲ್ಲ ಎಂಬ ಅರಿವಿದ್ದು ಕೂಡ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ನಾಡಿನ ಮುಕ್ತಿಗಾಗಿ ಅವರೊಂದಿಗೆ ಹೋರಾಡಿ ಒಮ್ಮೆ ಗೆಲುವು ಸಾಧಿಸಿದ ಕಿತ್ತೂರು ಚೆನ್ನಮ್ಮ ತನ್ನದೇ ಜನರ ಮೋಸದಿಂದಾಗಿ ಮತ್ತೊಮ್ಮೆ ಸೋಲನ್ನಪ್ಪಿದರೂ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದವಳು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟಿಷರ ಕಾಯ್ದೆಯನ್ನು ವಿರೋಧಿಸಿದ ಕಿತ್ತೂರಿನ ರಾಣಿ ಚೆನ್ನಮ್ಮ ಕಪ್ಪವನ್ನು ಕೊಡಲು ನಿರಾಕರಿಸಿದಳು. ನಮ್ಮ ಭೂಮಿ, ನಮ್ಮ ನಾಡು, ನಮ್ಮ ಹಕ್ಕು ಎಂದು ಪ್ರತಿಪಾದಿಸಿ ವ್ಯಾಪಾರಕ್ಕಾಗಿ ನಮ್ಮ ನಾಡಿಗೆ ಬಂದಿರುವ ನೀವು ವ್ಯಾಪಾರವನ್ನಷ್ಟೇ ಮಾಡಿರಿ ರಾಜಕೀಯ ಮಾಡಿ ನಮ್ಮ ದೇಶವನ್ನು ಒಡೆಯಬೇಡಿ ಎಂದು ಎಚ್ಚರಿಸಿದ ಆಕೆ ಅದಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧ ಎಂದು ನಾಡ ಜನರನ್ನು ಹುರಿದುಂಬಿಸಿ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯದ ಕಹಳೆಯನ್ನು ಊದಿದಾಕೆ ಕಿತ್ತೂರು ಚೆನ್ನಮ್ಮ.
ಕೇವಲ 19ರ ಹರೆಯದಲ್ಲಿ ಬೆನ್ನಿಗೆ ಮಗುವನ್ನು ಕಟ್ಟಿಕೊಂಡು ಕುದುರೆಯ ಮೇಲೆ ಕುಳಿತು ಒಂದು ಕೈಯಲ್ಲಿ ಕುದುರೆಯ ಲಗಾಮನ್ನು, ಮತ್ತೊಂದು ಕೈಯಲ್ಲಿ ಖಡ್ಗವನ್ನು ಹಿಡಿದು ಖಡ್ಗವನ್ನು ಬೃಹತ್ತಾದ ಕೋಟೆಯ ಗೋಡೆಯ ಮೇಲಿಂದ ಹಾರಿ ಶತ್ರುಗಳಿಂದ ತಮ್ಮ ರಾಜ ಮನೆತನದ ವಾರಸುದಾರನನ್ನು ಉಳಿಸಲು ತಪ್ಪಿಸಿಕೊಂಡು ಸುಮಾರು 20 ಮೈಲುಗಳಷ್ಟು ದೂರ ಸತತವಾಗಿ ಕುದುರೆಯನ್ನು ಓಡಿಸಿ ಸಾಗಿದ ವೀರ ಮಹಿಳೆ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ನೆನಪಾಗುತ್ತಾಳೆ.
ಆಕೆಗೆ ಇದ್ದದು ಕೇವಲ ಒಂದೇ ಬದ್ಧತೆ ಅದು ಸ್ವಾತಂತ್ರ್ಯಕ್ಕಾಗಿ ಹೋರಾಟ. ಬ್ರಿಟಿಷರೊಂದಿಗಿನ ಈ ಹೋರಾಟದಲ್ಲಿ ಆಕೆ ಮನಸ್ಸು ಮಾಡಿದ್ದರೆ ರಾಜಿ ಮಾಡಿಕೊಂಡು ಅವರು ಕೊಡುವ ಗೌರವ ಧನವನ್ನು ಸ್ವೀಕರಿಸಿ ಅವರ ಅಡಿಯಲ್ಲಿ ರಾಜ್ಯಭಾರ ಮಾಡಬಹುದಿತ್ತು. ಆದರೆ ಸ್ವಾತಂತ್ರ್ಯವನ್ನು ಉಸಿರಾಗಿಸಿಕೊಂಡು ಸಂಸ್ಕೃತಿ ಮತ್ತು ದೇಶದ ಜನರ ರಕ್ಷಣೆಯನ್ನು ತನ್ನ ಕರ್ತವ್ಯವನ್ನಾಗಿಸಿಕೊಂಡು ಅಪ್ರತಿಮ, ಅಸೀಮ ಸಾಹಸವನ್ನು ತೋರಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮಹಿಳಾ ಕುಲಕ್ಕೆ ಆದರ್ಶಪ್ರಾಯಳು.
ಮರಾಠಾ ಪ್ರಾಬಲ್ಯದ ಶಿವಾಜಿ ಮಹಾರಾಜನ ಸೈನಿಕರ ಉಪಟಳದಿಂದ ಬೇಸತ್ತು ಅವರೊಂದಿಗೆ ಉಗ್ರವಾಗಿ ಹೋರಾಡಿ ಸೋತ ಬೆಳವಡಿ ಮಲ್ಲಮ್ಮನನ್ನು ಬಂಧಿಸಿ ಶಿವಾಜಿಯ ಮುಂದೆ ಕರೆತಂದಾಗ ಆಕೆಯ ಧೈರ್ಯ, ಸಾಹಸವನ್ನು ಮೆಚ್ಚಿದ ಶಿವಾಜಿ ಮಹಾರಾಜ ಆಕೆಯನ್ನು ತಂಗಿ ಎಂದು ಕರೆದು ಗೌರವಿಸಿದನಲ್ಲದೇ ಸ್ವತಹ ಶಿವಾಜಿ ಮಹಾರಾಜರಿಂದ ಸ್ತ್ರೀಕುಲ ತಿಲಕ ಎಂದು ಗುರುತಿಸಲ್ಪಟ್ಟ ಬೆಳವಡಿ ಮಲ್ಲಮ್ಮ ನಮಗೆ ಆದರ್ಶಪ್ರಾಯಳು.
ತನ್ನ ಪತಿಯೇ ತಮಗೆ ಮುಳುವಾಗಿ ಪೋರ್ಚುಗೀಸರೊಂದಿಗೆ ಕೈ ಜೋಡಿಸಿದಾಗಲೂ ಧೃತಿಗೆಡದೆ ಸಮುದ್ರದಲ್ಲಿ ಯುದ್ಧ ಮಾಡಿ ಗೆಲುವು ಸಾಧಿಸಿದ ಚೌಟ ರಾಣಿ ಅಬ್ಬಕ್ಕದೇವಿ ಧೈರ್ಯ ಶೌರ್ಯಗಳಿಗೆ ಮತ್ತೊಂದು ಹೆಸರು.
ಚಿತ್ರದುರ್ಗದ ಮಹಾರಾಜ ಮದಕರಿ ನಾಯಕನ ಕೋಟೆಯನ್ನು ಕಾಯುತ್ತಿದ್ದ ಕಾವಲುಗಾರನ ಪತ್ನಿ ಓಬವ್ವ ಹೈದರಾಲಿಯ ಸೈನ್ಯ ತಮ್ಮ ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದೆ, ದುಷ್ಕರ್ಮಿಗಳು ಕಳ್ಳಗಿಂಡಿಯಿಂದ ಕೋಟೆಯ ಒಳ ನುಸುಳುತ್ತಿದ್ದಾರೆ. ಊಟಕ್ಕೆ ಕುಳಿತ ಗಂಡನಿಗೆ ನೀರು ತರಲು ಹೋದ ಆಕೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಗಂಡನಿಗೆ ಹೇಳಲೂ ಆಗದೇ ಕಣ್ಣಿಗೆ ಬಿದ್ದ ಮನೆಯಲ್ಲಿದ್ದ ಒನಕೆಯನ್ನು ತೆಗೆದುಕೊಂಡು ನುಸುಳುಗಿಂಡಿಯ ಬಳಿ ಹೋಗಿ ಒಳ ನುಸುಳಿದ ಹೈದರಾಲಿಯ ಸೈನಿಕರ ರುಂಡವನ್ನು ಚಂಡಾಡಿ ಅಂತಿಮವಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿದವಳು ಇತಿಹಾಸದಲ್ಲಿ ಒನಕೆ ಓಬವ್ವ ಎಂದೇ ಹೆಸರಾದವಳು.
ಹೀಗೆ ಆಯಾ ಕಾಲದಲ್ಲಿ ಹೆಣ್ಣು ಮಕ್ಕಳು ಗಂಡ, ಮನೆ, ಕುಟುಂಬ,ನಾಡು ಮತ್ತು ನುಡಿಗಳಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ಈಗಲೂ ಕೂಡ ನಾಡಿನ ಹಲವೆಡೆಗಳಲ್ಲಿ ಬರ, ನೆರೆ ಬಂದಾಗ, ಪ್ರವಾಹ ಉಂಟಾಗಿ ಮನೆಗಳು ಕೊಚ್ಚಿ ಹೋಗಿ ದಿಗ್ಭ್ರಮೆಯ ಸ್ಥಿತಿಯಲ್ಲಿರುವಾಗ ಮೊದಲು ಎಚ್ಚೆತ್ತುಕೊಳ್ಳುವ ಹೆಣ್ಣುಮಕ್ಕಳು ಇದ್ದುದರಲ್ಲಿಯೇ ಮುಖ್ಯವಾದ ಸಾಮಾನುಗಳನ್ನು ಗಂಟು ಕಟ್ಟಿಕೊಂಡು ಬದುಕಿನ ಬಂಡಿ ಸಾಗಿಸಲು ಓಡುತ್ತಾರೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಚಿಕ್ಕಪುಟ್ಟ ಊರುಗಳಲ್ಲಿ, ಮಹಾನಗರಗಳಲ್ಲಿ ವಾಸಿಸುವ ಹಲವಾರು ಹೆಣ್ಣು ಮಕ್ಕಳು ಕುಡುಕ, ಬೇಜವಾಬ್ದಾರಿ ಗಂಡನನ್ನು ಕಟ್ಟಿಕೊಂಡು, ಎರಡು ಮೂರು ಮಕ್ಕಳನ್ನು ಪೋಷಿಸುತ್ತಾ ಅವರಿವರ ಮನೆಗಳಲ್ಲಿ, ಗಾರ್ಮೆಂಟುಗಳಲ್ಲಿ, ಶಾಲೆಗಳಲ್ಲಿ,ಫ್ಯಾಕ್ಟರಿಗಳಲ್ಲಿ ದುಡಿಯುತ್ತಾ ಜೀವನ ನಿರ್ವಹಣೆ ಮಾಡುತ್ತಾರೆ.
ಅಂತಹ ಎಲ್ಲ ಹೆಣ್ಣುಮಕ್ಕಳ ಮಹಾನ್ ಧೀ ಶಕ್ತಿಗೆ ನಮೋ ನಮಃ