
ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ : ಡಿಹೆಚ್‍ಓ ಡಾ.ವೈ.ರಮೇಶ್‍ಬಾಬು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 5- ಬರ ಪರಿಸ್ಥಿತಿ ತಡೆಗಟ್ಟಲು ಹಾಗೂ ಭೂಮಿಯನ್ನು ಸಹಜ ಸ್ಥಿತಿಗೆ ಮರು ಸ್ಥಾಪಿಸಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಿಸಬೇಕು. ಪರಿಸರ ರಕ್ಷಣೆಯು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಹವಮಾನ ವೈಪರಿತ್ಯ, ಮಾನವ ಆರೋಗ್ಯ ಕಾರ್ಯಕ್ರಮ ಮತ್ತು ಡಿವಿಬಿಡಿಸಿಪಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ “ಭೂಮಿ ಮರು ಸ್ಥಾಪನೆ, ಮರುಭೂಮೀಕರಣ ಹಾಗು ಬರ ಸ್ಥಿತಿ ಸ್ಥಾಪಕತ್ವ” ಎಂಬ ಧ್ಯೇಯವಾಕ್ಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಾಣ ಮಾಡುವಲ್ಲಿ ಎಲ್ಲಾರು ಪ್ಲಾಸ್ಟಿಕ್ ಬಳಕೆಯನ್ನು ಕಡಿತಗೊಳಿಸಬೇಕು ಹಾಗೂ ತಮ್ಮ ಮನೆ ಆವರಣದಲ್ಲಿ ಗಿಡಗಳನ್ನು ನೆಡಬೇಕು ಎಂದರು.
ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಿದ್ದಲ್ಲಿ ಮುಂದಿನ ಪೀಳಿಗೆಗೆ ಒಳ್ಳೆಯ ಜೀವನವನ್ನು ನೀಡಲು ಸಹಾಯಕವಾಗುತ್ತದೆ. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಆರೋಗ್ಯ ಹಿತದೃಷ್ಠಿಯಿಂದ ಆರೋಗ್ಯ ಸಂಸ್ಥೆಗಳ ಆವರಣದ ಸುತ್ತ-ಮುತ್ತ ಸ್ವಚ್ಛತಾ ಕಾರ್ಯ, ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಬೇಕು. ಸಂಸ್ಥೆಗಳ ಮೇಲ್ಚಾವಣಿ ಸ್ವಚ್ಚಗೊಳಿಬೇಕು ಎಂದರು.
ಎನ್‍ಪಿಸಿಸಿಹೆಚ್‍ಹೆಚ್‍ನ ಜಿಲ್ಲಾ ನೋಡಲ್ ಅಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಮಾತನಾಡಿ, ಆರೋಗ್ಯ ಇಲಾಖೆಯ ವ್ಯಾಪ್ತಿಯ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳು ಹಾಗೂ ಆಯುಷ್‍ಮಾನ್ ಆರೋಗ್ಯ ಮಂದಿರಗಳ ಆವರಣದಲ್ಲಿ ಉತ್ತಮ ಗಾಳಿಯನ್ನು ನೀಡುವಂತಹ ಹಾಗೂ ಜೌಷಧೀಯ ಸಸ್ಯ, ಮರಗಳನ್ನು ಬೆಳಸಿ ನಿರ್ವಹಿಸುವ ಚಟುವಟಿಕೆಯನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಇದರಿಂದ ಭೂಮಿಯ ಹಸಿರು ಹೊದಿಕೆಯು ಏರಿಕೆಯಾಗುವುದಲ್ಲದೆ, ಶುದ್ದಗಾಳಿ ಹಾಗೂ ತಂಪಾದ ವಾತಾವರಣ ಲಭ್ಯವಾಗುತ್ತದೆ. ಗಿಡ, ಮರಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುವುದರಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು ಹಾಗೂ ಇದರಿಂದ ಅಂತರ್‍ಜಲದ ಮಟ್ಟವು ಉತ್ತಮಗೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಕೀಟಶಾಸ್ತ್ರಜ್ಞರಾದ ನಂದಾಕಡಿ, ಜಿಲ್ಲಾ ವಿಬಿಡಿಸಿ ಸಮಾಲೋಚಕರಾದ ಪ್ರತಾಪ್.ಹೆಚ್., ಜಿಲ್ಲಾ ಆರೋಗ್ಯ ಶಿಕ್ಷ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಜಿಲ್ಲಾ ವಿಬಿಡಿಸಿ ಅಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಇತರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಿಬ್ಬಂದಿಗಳು ಹಾಜರಿದ್ದರು.