
ವಾಂತಿ ಭೇದಿ ಪ್ರಕರಣಗಳಲ್ಲಿ ಮುಂಜಾಗ್ರತ ಕ್ರಮ ಅನುಸರಿಸಲು ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 25- ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ವಾಂತಿ ಭೇದಿ ಪ್ರಕರಣಗಳು ದಾಖಲಾಗುತ್ತಿದ್ದು, ಸಾರ್ವಜನಿಕರು ಇದರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಮಳೆಗಾಲ ಆರಂಭವಾಗಿರುವುದರಿAದ ಕಲುಷಿತ ನೀರು ಶುದ್ಧ ಕುಡಿಯುವ ನೀರಿನೊಂದಿಗೆ ಬೆರೆತು ಅಥವಾ ಪೈಪ್ ಲೈನ್ಗಳಲ್ಲಿ ಬೆರೆತು ಕುಡಿಯುವ ನೀರಿನ ಮಾಲಿನ್ಯವಾಗುವ ಸಾಧ್ಯತೆ ಇರುತ್ತದೆ. ಇಂತಹ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಮತ್ತು ಇತರೆ ಸೇವನೆಯ ಪದಾರ್ಥಗಳೊಂದಿಗೆ ಬಳಸುವುದರಿಂದ ವಾಂತಿ ಬೇಧಿ ಮುಂತಾದ ಖಾಯಿಲೆಗಳು ಬರುವ ಸಾಧ್ಯತೆ ಇದ್ದು, ಸಾರ್ವಜನಿಕರು ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.
ಮುಂಜಾಗ್ರತಾ ಕ್ರಮಗಳು: ಮಲಮೂತ್ರ ವಿಸರ್ಜನೆಗಾಗಿ ತಪ್ಪದೇ ಶೌಚಾಲಯ ಬಳಸಬೇಕು. ಶುದ್ಧೀಕರಿಸಿದ ನೀರು ಅಥವಾ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಟ 40 ಸೆಕೆಂಡ್ ತೊಳೆದುಕೊಂಡು ನಂತರ ಆಹಾರ ಸೇವಿಸಬೇಕು. ಸುರಕ್ಷಿತ ಆಹಾರ ಮತ್ತು ನೀರನ್ನು ಮಾತ್ರ ಸೇವಿಸಬೇಕು. ಆದಷ್ಟು ಮನೆಯ ಆಹಾರಕ್ಕೆ ಆದ್ಯತೆ ನೀಡಬೇಕು. ಕುಡಿಯುವ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಬೇಕು. ಆಹಾರ ತಯಾರಿಸಿದ ನಂತರ ಪಾತ್ರೆಯನ್ನು ಸರಿಯಾಗಿ ಮುಚ್ಚಬೇಕು.
ಶುದ್ಧೀಕರಿಸದೇ ಇರುವ ಅಥವಾ ಕೆರೆ ಕುಂಟೆಗಳ ನೀರನ್ನು ನೇರವಾಗಿ ಕುಡಿಯಬಾರದು. ಬಯಲುಗಳಲ್ಲಿ ಮಲಮೂತ್ರಗಳನ್ನು ವಿಸರ್ಜನೆ ಮಾಡಬಾರದು. ಕೈಗಳನ್ನು ತೊಳೆಯದೇ ಆಹಾರ ಸೇವಿಸಬಾರದು. ಹೊರಗಡೆ ಅಥವಾ ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಮತ್ತು ಕತ್ತರಿಸಿ ಇಟ್ಟ ಹಣ್ಣುಗಳನ್ನು ತಿನ್ನಬಾರದು. ತಯಾರಿಸಿದ ಆಹಾರ ಮುಚ್ಚಳ ಮುಚ್ಚದಂತೆ ಇಡಬೇಡಿ, ಸಂಗ್ರಹಿಸಿದ ನೀರಿನ ಮೇಲೆ ಮುಚ್ಚಳ ಮುಚ್ಚದೇ ಬಿಡಬಾರದು. ಇವುಗಳ ಬಗ್ಗೆ ಬಹಳ ಎಚ್ಚರ ವಹಿಸಬೇಕು.
ಕುಡಿಯುವ ನೀರನ್ನು ಶೋಧಿಸಿ ಕನಿಷ್ಟ 20 ನಿಮಿಷಗಳಕಾಲ ಚೆನ್ನಾಗಿ ಕುದಿಸಿ ಆರಿಸಿದ ನಂತರ ಕುಡಿಯಬೇಕು. ವಾಂತಿ ಭೇದಿ ಸಂದರ್ಭದಲ್ಲಿ ಓ.ಆರ್.ಎಸ್. ದ್ರಾವಣ ತಯಾರಿಸಿದ ನಂತರ 24 ಗಂಟೆಯೊಳಗೆ ಬಳಸಬೇಕು (ಲೀಟರ್ ನೀರಿಗೆ 1 ಪೊಟ್ಟಣದ ಪುಡಿ ಸಂಪೂರ್ಣ ಹಾಕಬೇಕು). ವಾಂತಿ ಭೇದಿಯಾದಾಗ ಮನೆಯಲ್ಲಿ ಗಂಜಿ, ತಿಳಿಬೇಳೆ, ನಿಂಬು ಪಾನಕಾ, ಎಳನೀರನ್ನು ಕೊಡುವುದನ್ನು ಮುಂದುವರೆಸಬೇಕು. ಕುಡಿಯುವ ನೀರಿನ ಮೂಲ ಮತ್ತು ಅದರ ಶುದ್ಧತೆ ಬಗ್ಗೆ ಪರೀಕ್ಷಿಸುವುದು ಮತ್ತು ಅವುಗಳನ್ನು ಕಾಯಿಸಿ ಆರಿಸಿ ಕುಡಿಯಬೇಕು.
ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿಯಲ್ಲಿ ವಾಂತಿ ಭೇದಿ ಉಂಟಾದರೆ ನಿರ್ಲಕ್ಷ ಮಾಡದೇ ತಕ್ಷಣ ಹತ್ತಿರದ ಆರೋಗ್ಯ ಕಾರ್ಯಕರ್ತರನ್ನು ಅಥವಾ ಆರೋಗ್ಯ ಕೇಂದ್ರಕ್ಕೆ ತಕ್ಷಣ ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.