2c136fae-be38-4577-97e1-318669006cc9

ಪಿಡಿಓಗಳು ಕುಡಿವ ನೀರು ಪೂರೈಕೆ, ನೈರ್ಮಲ್ಯಕ್ಕೆ ವಿಶೇಷ ಕಾಳಜಿ ವಹಿಸಬೇಕು : ಸದಾಶಿವ ಪ್ರಭು

ಕರುನಾಡ ಬೆಳಗು ಸುದ್ದಿ

ವಿಜಯನಗರ, 5- ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಹಂತದ ಪ್ರಗತಿ ಪರಿಶೀಲಾ ಸಭೆ ಜುಲೈ 4ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್, ವಸತಿ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿದಂತೆ, ತೆರಿಗೆ ವಸೂಲಾತಿ, ಆಸ್ತಿಗಳ ಸಮೀಕ್ಷೆ, ಸಕಾಲ, ಗ್ರಾಮ ಆರೋಗ್ಯ ಅಭಿಯಾನ, ಬಯೋಮೆಟ್ರಿಕ್ ಹಾಜರಾತಿ, ಗ್ರಂಥಾಲಯ ಉಪಕರವನ್ನು ಜಿಲ್ಲಾ ಪಂಚಾಯತ್ ಖಾತೆಗೆ ಜಮಾ ಮಾಡುವ ವಿಷಯಗಳ ಕುರಿತಾಗಿ ವಿವರವಾಗಿ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ ಅವರು ಮಾತನಾಡಿ, ವಾಡಿಕೆಯಂತೆ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಸದ್ಯ ಬರದ ತೀವ್ರತೆ ಕಡಿಮೆಯಾಗಿದ್ದರು ಸಹ ಕುಡಿಯುವ ನೀರು ಪೂರೈಕೆ, ನೈರ್ಮಲ್ಯದಂತಹ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ತೀವ್ರ ಅಸಮಾಧಾನ: ಬಯಲು ಬಹಿರ್ದೆಸೆ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ಏರ್ಪಡಿಸಿ ಶೌಚಾಲಯ ಇಲ್ಲದ ಮನೆಗಳನ್ನು ಗುರುತಿಸಿ ಸ್ಥಳದಲ್ಲಿಯೇ ಸಿಟಿಜನ್ ಪೋರ್ಟಲ್‌ನಲ್ಲಿ ಅರ್ಜಿ ದಾಖಲಿಸಿ ಅವರಿಗೆ ನಿಯಮಾನಸಾರ ಶೌಚಾಲಯ ಸೌಲಭ್ಯ ಕಲ್ಪಿಸಲು ತ್ವರಿತ ಕ್ರಮ ಕೈಗೊಂಡು ಕಾರ್ಯಾದೇಶ, ಪಾವತಿ ಆದೇಶ ನೀಡಬೇಕು ಎಂದು ಸಭೆಯಲ್ಲಿ ಸಿಇಓ ಅವರು ನಿರ್ದೇಶನ ನೀಡಿದರು. ಜಿಲ್ಲೆಯಾದ್ಯಂತ ಕಾರ್ಯದೇಶ ಮತ್ತು ಪಾವತಿ ಆದೇಶ ನೀಡುವಲ್ಲಿ ತುಂಬಾ ವಿಳಂಬವಾಗುತ್ತಿರುವುದರ ಬಗ್ಗೆ ಅವರು ಇದೆ ವೇಳೆ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕುವಾರು ಪ್ರತಿವಾರ ವಿಡಿಯೋ ಸಂವಾದ ನಡೆಸಲಾಗುವುದು. ಒಂದು ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರಗತಿ ಸಾಧಿಸಲು ವಿಫಲರಾದಲ್ಲಿ ಅಂತಹವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ನಿರ್ಲಕ್ಷö್ಯ ತೋರಿದಲ್ಲಿ ಕ್ರಮ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ವಸತಿ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಮಂಜೂರಾದ ಮನೆಗಳನ್ನು ಕಟ್ಟಲು ಕ್ರಮಕೈಗೊಳ್ಳುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷö್ಯದ ಬಗ್ಗೆ ಅಂಕಿ ಅಂಶಗಳ ಸಹಿತ ವಿವರಿಸಿದ ಸಿಇಓ ಅವರು, ಕೆಲವೇ ಕೆಲ ಅಧಿಕಾರಿಗಳ ನಿರ್ಲಕ್ಷö್ಯ ವಹಿಸುವುದರಿಂದ ಇಡೀ ಅಧಿಕಾರಿಗಳ ಸಮೂಹಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ಕಾರಣಗಳಿಂದ ರಾಜ್ಯಮಟ್ಟದಲ್ಲಿ ನಮ್ಮ ಜಿಲ್ಲೆಯ ಪ್ರಗತಿಗೆ ತುಂಬಾ ಹಿನ್ನಡೆ ಉಂಟಾಗುತ್ತದೆ. ಅಧಿಕಾರಿಗಳು ನಿಷ್ಕಾಳಜಿ ತೋರುವುದು ಕಂಡುಬAದಲ್ಲಿ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವರದಿ ನೀಡಲು ಸೂಚನೆ: ಮಂಜೂರಾದ ಮನೆಗಳ ನಿರ್ಮಾಣದ ಬಗ್ಗೆ ಒಂದೆರಡು ದಿನಗಳಲ್ಲಿ ಸಂಪೂರ್ಣ ವರದಿ ನೀಡಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ವಸತಿ ಸೌಲಭ್ಯದ ಅವಶ್ಯಕತೆ ಇರುವ ಅರ್ಹರಿಗೆ ಮನೆಗಳು ಸಿಗುವಂತೆ ನೋಡಿಕೊಳ್ಳಬೇಕು. ಒತ್ತಡಕ್ಕೆ ಒಳಗಾಗಿ ಫಲಾನುಭವಿಗಳ ಆಯ್ಕೆಯಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು. ಫಲಾನುಭವಿಗಳ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಈಗಾಗಲೇ ಲೇಔಟ್ ಪ್ಲಾನ್ ಅನುಮೋದನೆಯಾಗಿರುವ ಪಂಚಾಯಿತಿಗಳಲ್ಲಿ ಲೇಔಟ್ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಪ್ರಸ್ತಾವನೆಯನ್ನು ತ್ವರಿತವಾಗಿ ಸಲ್ಲಿಸಬೇಕು. ವಸತಿ ರಹಿತರಿಗೆ ಮನೆಗಳ ಸೌಲಭ್ಯ ತ್ವರಿತವಾಗಿ ದೊರೆಯಲು ಕ್ರಮ ವಹಿಸಬೇಕು ಎಂದು ಸಿಇಓ ಅವರು ಸೂಚಿಸಿದರು.

ಸರ್ಕಾರದ ಸ್ವತ್ತನ್ನು ರಕ್ಷಿಸಿ: ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಸರಬರಾಜು ಪೈಪುಗಳ ಸೋರಿಕೆಯನ್ನು ಗಮನಿಸಿ ಕೂಡಲೇ ಸರಿಪಡಿಸಿ ಕುಡಿಯುವ ನೀರು ಕಲುಷಿತವಾಗದಂತೆ ಕ್ರಮವಹಿಸಬೇಕು. ಶುದ್ಧ ಕುಡಿಯುವ ನೀರಿನ ಮೋಟಾರ್ ಪಂಪ್ ಹಾಗು ಜಲಜೀವನ್ ಮಿಷನ್ ನೀರು ಸರಬರಾಜು ಪಂಪ್ ಸೇರಿದಂತೆ ಸರ್ಕಾರಿ ಸ್ವತ್ತುಗಳ ಕಳ್ಳತನ ಹಾಗೂ ಹಾನಿ ಮಾಡುವಂತಹ ಪ್ರಕರಣಗಳು ನಡೆದಲ್ಲಿ ಉದಾಸೀನ ಮಾಡದೆ ಕಡ್ಡಾಯವಾಗಿ ಪೊಲೀಸ್ ಇಲಾಖೆಗೆ ದೂರು ನೀಡಿ ಸ್ವತ್ತುಗಳ ರಕ್ಷಣೆಗೆ ನಿಲ್ಲಬೇಕು ಎಂದು ಸೂಚನೆ ನೀಡಿದರು.

ಕಾರ್ಯವೈಖರಿಗೆ ಮೆಚ್ಚುಗೆ: ಕಳೆದ ಫೆಬ್ರವರಿ, ಮಾರ್ಚ, ಏಪ್ರಿಲ್ ಮೇ ಮಾಹೆಗಳಲ್ಲಿ ಬಿಸಿಲು ಏರುಗತಿಯಲ್ಲಿತ್ತು. ಆ ವೇಳೆ ಕುಡಿಯುವ ನೀರು ಪೂರೈಕೆ ಸೇರಿದಂತೆ ಬೇಸಿಗೆಯ ಸಂದರ್ಭದ ಪರಿಸ್ಥಿತಿಯನ್ನು ತಾಲೂಕು ಹಾಗೂ ಗ್ರಾಮಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಸಹ ಅಚ್ಚುಕಟ್ಟಾಗಿ ನಿರ್ವಹಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯ ಕಾರ್ಯಗಳನ್ನು ಸಹ ಉತ್ತಮವಾಗಿ ಮಾಡಿದರು ಎಂದು ಜಿಪಂ ಸಿಇಓ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಫೀಲ್ಡ್ ಟೆಸ್ಟ್ ಕಿಟ್ ತರಬೇತಿ ನೀಡಲಾಯಿತು. ಕುಡಿಯಲು ಯೋಗ್ಯ ಮತ್ತು ಕಲುಷಿತ ನೀರು ಪರೀಕ್ಷೆ ನಡೆಸುವುದು ಹೇಗೆ ಎಂದು ಪ್ರಾತ್ಯಕ್ಷಿಕೆಯ ಮೂಲಕ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಮುಂಗಾರು ಆರಂಭವಾಗುತ್ತಿರುವ ಸಂದರ್ಭದಲ್ಲಿ ಕಾಲರಾ ಹರಡುವಿಕೆ ತಡೆಗಟ್ಟುವುದು, ಡೆಂಗೆ, ಚಿಕೂನ್ ಗುನ್ಯಾದಂತಹ ರೋಗವಾಹಕ ನಿಯಂತ್ರಣ ಕುರಿತಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಪಾತ್ರಗಳ ಬಗ್ಗೆ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಬಿ.ಷಣ್ಮುಖ ನಾಯ್ಕ ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಮುಖ್ಯ ಯೋಜನಾಧಿಕಾರಿ ಅನ್ನದಾನ ಸ್ವಾಮಿ, ಯೋಜನಾ ನಿರ್ದೇಶಕ ಅಶೋಕ್ ತೋಟದ ಅವರು ವಿಭಾಗವಾರು ಅಂಕಿ ಅಂಶಗಳನ್ನು ಚರ್ಚಿಸಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ನರೇಗಾ ಕೋಶದ ತಾಲೂಕು ತಾಂತ್ರಿಕ ಸಂಯೋಜಕರು, ಟಿ.ಎಂ.ಐ.ಎಸ್ ಮತ್ತು ಟಿ.ಐ.ಇ.ಸಿ ಹಾಗೂ ಜಿಲ್ಲಾ ಪಂಚಾಯಿತಿಯ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!