WhatsApp Image 2024-07-05 at 1.27.06 PM

ಸದನದಲ್ಲಿ ಪ್ರಸ್ತಾಪಕ್ಕೆ ಕೋರ್ ಕಮಿಟಿ ತೀರ್ಮಾನ : ಸಿ.ಟಿ.ರವಿ

ಕರುನಾಡ ಬೆಳಗು ಸುದ್ದಿ

ಬೆಂಗಳೂರು, 5- ರಾಜ್ಯ ಕಾಂಗ್ರೆಸ್ ಸರಕಾರ ಮಾಡಿದ ಬೆಲೆ ಏರಿಕೆ, ಮೈಸೂರು ಮೂಡಾದಲ್ಲಿ ನಾಲ್ಕೈದು ಸಾವಿರ ಕೋಟಿಯ ಹಗರಣ, ವಾಲ್ಮೀಕಿ ನಿಗಮದ ಹಗರಣ ಸೇರಿ ಆದ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದರು.

ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯ ಬಳಿಕ ನಡೆದ ಕೋರ್ ಕಮಿಟಿ ಸಭೆಯ ಕುರಿತಂತೆ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಗೆಲುವು, ಕೆಲವು ಗೆಲ್ಲಲೇಬೇಕಾದ ಕ್ಷೇತ್ರಗಳಲ್ಲಿ ಸೋತ ಸಂಬಂಧ ಅವಲೋಕನ ಸಭೆಯು ಆಯಾ ಜಿಲ್ಲೆಗಳ ಪಕ್ಷಗಳ ಪ್ರಮುಖರ ಜೊತೆ ನಾಳೆ ಮತ್ತು ನಾಡಿದ್ದು (ಜುಲೈ 5-6ರಂದು) ನಡೆಯಲಿದೆ ಎಂದರು.

224 ಕ್ಷೇತ್ರಗಳಲ್ಲಿ ಸಂಘಟನೆ ಬಲಪಡಿಸುವುದು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕೆಳಹಂತದ ಸಿದ್ಧತೆ ನಡೆಸಲು ನಿರ್ಧರಿಸಲಾಗಿದೆ. ಸಹಕಾರಿ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ತಂಡ ರಚಿಸಿ ಅದರ ಮೇಲ್ವಿಚಾರಣೆ, ಮಾರ್ಗದರ್ಶನ ಸೇರಿ ಹಲವು ವಿಷಯಗಳ ಚರ್ಚೆ ನಡೆಸಿದ್ದೇವೆ ಎಂದು ವಿವರ ನೀಡಿದರು.

ಮೂಡಾ ಹಗರಣ ಸಂಬಂಧ ರಾಜೀನಾಮೆ ಅಥವಾ ಭಂಡತನದಿಂದ ಸಮರ್ಥನೆ ಮಾಡುವುದಷ್ಟೇ ಮುಖ್ಯಮಂತ್ರಿಗಳ ಮುಂದಿದೆ. ಸಾರ್ವಜನಿಕವಾಗಿ ಬೆತ್ತಲಾದರೂ ಕೂಡ ಅದಕ್ಕೂ ಸಮರ್ಥನೆ ಕೊಡುವುದಾದರೆ ಇನ್ನೇನು ಹೇಳಲು ಸಾಧ್ಯ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಮೈಸೂರಿನ ಜನರು ಇದೊಂದು ಮಹಾಮೋಸ ಎಂದು ಹೇಳುತ್ತಿದ್ದಾರೆ. ಭೂಮಿ ಖರೀದಿ ಬಳಿಕ ಇವರ ಭಾಮೈದ ಜಿಪಿಎ ಮಾಡಿಕೊಂಡಿದ್ದರು ಎಂದು ವಿವರಿಸಿದರು. ಅಲ್ಲಿಂದಲೇ ಅಪರಾಧ, ಅಲ್ಲಿಂದಲೇ ಮೋಸ ನಡೆದಿದೆ ಎಂದು ಅವರು ತಿಳಿಸಿದರು.

ವಾಲ್ಮೀಕಿ ನಿಗಮದ ಹಗರಣದಲ್ಲೂ ಎಂ.ಜಿ ರಸ್ತೆ ಶಾಖೆಗೆ ಹಣ ವರ್ಗಾಯಿಸುವ ಮೂಲಕ ಹಗರಣ ಶುರುವಾಗಿತ್ತು. ಅದೇ ಮಾದರಿಯಲ್ಲಿ ಯಾರದೋ ಆಸ್ತಿಯನ್ನು ಇನ್ಯಾರೋ ಜಿಪಿಎ ಮಾಡಿಸಿಕೊಳ್ಳುವ ಮೂಲಕ ಹಗರಣ ನಡೆದಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!