
ನೂತನ ಕೆರೆ ನಿರ್ಮಾಣ ಸುವರ್ಣ ಅವಕಾಶ ಕೆರೆ ನಿರ್ಮಾಣಕ್ಕೆ ಭೂಮಿ ನೀಡಿ : ಶಾಸಕ ರಾಯರೆಡ್ಡಿ
ಕರುನಾಡ ಬೆಳಗು ಸುದ್ದಿ
ಕುಕನೂರು, 8- ರಾಜ್ಯದಲ್ಲಿ ಈ ಸಲ ಯಲಬುರ್ಗಾ ಕ್ಷೇತ್ರದಲ್ಲಿ ಕೆರೆ ನಿರ್ಮಿಸಲು ಅನುದಾನ ಹಾಗು ಅವಕಾಶ ಸಿಕ್ಕಿರುವುದು ಕ್ಷೇತ್ರದ ಜನತೆಯ ಸುವರ್ಣ ಅವಕಾಶ ಆಗಿದೆ. ಕೆರೆ ನಿರ್ಮಾಣಕ್ಕೆ ರೈತರು ಜಮೀನು ನೀಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಚಿಕೇನಕೊಪ್ಪ, ಬಿನ್ನಾಳ, ಯರೆಹಂಚಿನಾಳ ಗ್ರಾಮದಲ್ಲಿ ರೂ 970 ಕೋಟಿ ಅನುದಾನದಲ್ಲಿ 38 ಕೆರೆ ನಿರ್ಮಾಣ ಯೋಜನೆಗೆ ಜಮೀನು ಲಭ್ಯತೆಯ ಬಗ್ಗೆ ಹಿರಿಯರು, ರೈತ ಪ್ರತಿನಿಧಿಗಳೊಂದಿಗೆ ಜರುಗಿದ ಚರ್ಚಾ ಸಭೆಯನ್ನೂದ್ದೇಶಿಸಿ ಮಾತನಾಡಿದ ಅವರು, ಕೂಡಲಸಂಗಮದ ನಾರಾಯಣಪೂರದಿಂದ ಯಲಬುರ್ಗಾ ಕ್ಷೇತ್ರಕ್ಕೆ 150 ಕಿ.ಮೀ ದೂರದಿಂದ 600 ಪೀಟ್ ಎತ್ತರದಲ್ಲಿರುವ ನಮ್ಮ ಕ್ಷೇತ್ರಕ್ಕೆ ನೀರು ಬರುವುದು ಸುಲಭದ ಮಾತಲ್ಲ. ಬಜೆಟಿನಲ್ಲಿ ಕೆರೆ ತುಂಬಿಸಲು 970 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ರಾಜ್ಯದಲ್ಲಿಯೇ ನಮ್ಮ ಕ್ಷೇತ್ರದ ಕೆರೆ ತುಂಬಿಸಲು ಅನುದಾನ ಸಿಕ್ಕಿದೆ. ಮತ್ತೆಲ್ಲೂ ಇಲ್ಲ. ರಾಜ್ಯ ಸರ್ಕಾರ ಜನಪರ ಯೋಜನೆಗೆ ಹೆಚ್ಚಿನ ಅನುದಾನ ನೀಡುತ್ತಿರುವುದರಿಂದ ಹಗ್ಗದ ಮೇಲೆ ನಡೆಯುತ್ತಿದ್ದರೂ ಸಹ ನಮ್ಮ ಯಲಬುರ್ಗಾ ಕ್ಷೇತ್ರಕ್ಕೆ ಭರಪೂರ ಅನುದಾನ ತಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಅಣಿಯಾಗಿದ್ದೇನೆ ಎಂದರು.
ನೂತನ ಕೆರೆ ನಿರ್ಮಾಣಕ್ಕೆ ರೈತರು, ಜನರು ಸರ್ಕಾರದ ಭೂ ಸ್ವಾಧೀನ ಬೆಲೆಯಲ್ಲಿ ಭೂಮಿ ನೀಡಬೇಕು. ಇದಕ್ಕೆ ಎಲ್ಲರ ಸಹಕಾರಬೇಕು. ಸಿಎಂ, ಡಿಸಿಎಂ ಕೇಳಿಕೊಂಡು ಕೆರೆ ನಿರ್ಮಿಸುತ್ತೇವೆ. ಹಿಂದೆ ರಾಜ ಮಹಾ ರಾಜರ ಕಾಲದಲ್ಲಿ ಕೆರೆ ನಿರ್ಮಾಣ ಮಾಡುತ್ತಿದ್ದರು, ಸದ್ಯ ಆ ಕಾಲ ಕ್ಷೇತ್ರಕ್ಕೆ ಬಂದಿದೆ. ಇದೊಂದು ನಿಜಕ್ಕೂ ಸುವರ್ಣ ಅವಕಾಶ. ಇದನ್ನು ಕಳೆದುಕೊಳ್ಳುವುದು ಬೇಡ. ಪಕ್ಷಾತೀತವಾಗಿ ಅಭಿವೃದ್ಧಿಗೆ ಸಹಕರಿಸೋಣ. 38 ಕೆರೆ ನಿರ್ಮಾಣಕ್ಕೆ ಗ್ರಾಮವೊಂದಕ್ಕೆ 50 ಎಕರೆ ಜಮೀನು ಬೇಕು. ರೈತರು ತ್ವರಿತವಾಗಿ ಭೂಮಿ ನೀಡಿ ಎಂದರು.
ಚಿಕೇನಕೊಪ್ಪ, ಬಿನ್ನಾಳ, ಯರೇಹಂಚಿನಾಳ ಗ್ರಾಮದಲ್ಲಿ ಕಲ್ಯಾಣ ಮಂಟಪ ಮಂಜೂರು ಆಗಿದ್ದು,ಅವುಗಳಿಗೂ ಜಮೀನು ಅಗತ್ಯತೆ ಇದೆ. ಚಿಕೇನಕೊಪ್ಪ ಶಾಲೆ, ಬಿನ್ನಾಳದಲ್ಲಿ ಬಸ್ ನಿಲ್ದಾಣಕ್ಕೆ ಜಾಗಬೇಕು. ಜನರು ಭೂಮಿ ನೀಡಲು ಮುಂದಾಗಬೇಕು ಎಂದರು.
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಅಭಿಯಂತರ ಮಂಜುನಾಥ ಮಾತನಾಡಿ, ಈ ಕೆರೆ ನಿರ್ಮಾಣದ ಅವಕಾಶ ಕಳೆದುಕೊಳ್ಳಬೇಡಿ. ಕೂಡಲಸಂಗಮದ ನಾರಾಯಣಪೂರ ಹಿನ್ನೀರಿನಿಂದ ನೀರು ತಂದು ಕುಡಿಯಲು ಹಾಗು ನೀರಿನ ಅಭಾವ ನೀಗಿಸಲು, ಅಂತರ್ಜಲ ಮಟ್ಟ ಹೆಚ್ಚಿಸಲು ಬಸವರಾಜ ರಾಯರೆಡ್ಡಿ ದೊಡ್ಡ ಯೋಜನೆ ತಂದಿದ್ದಾರೆ. ಜನರು ಸಹಕಾರ ನೀಡಿ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಎಡಿಸಿ ಮಹೇಶ ಮಾಲಗಿತ್ತಿ, ತಹಸೀಲ್ದಾರ್ ಪ್ರಾಣೇಶ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಸಿಪಿಆಯ್ ಮೌನೇಶ್ವರ ಪಾಟೀಲ್, ನವಲಿ ಹಿರೇಮಠ, ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಯಲಬುರ್ಗಾ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ನಾರಾಯಣಪ್ಪ ಹರಪನ್ಹಳ್ಳಿ, ಮಂಜುನಾಥ ಕಡೇಮನಿ, ವಕ್ತಾರರಾದ ಸಂಗಮೇಶ ಗುತ್ತಿ, ಶಿವನಗೌಡ ದಾನರೆಡ್ಡಿ ಇತರರಿದ್ದರು.