ರಾಜ್ಯಮಟ್ಟದ ನೆಟ್ಬಾಲ್ ಟೂರ್ನಿಯಲ್ಲಿ
ಕೊಪ್ಪಳದ ತಂಡ ಸೆಮಿಫೈನಲ್ ಪ್ರವೇಶಿಸಿದೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 10- ನಗರದ ಬಾಲಕಿಯರ ತಂಡ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ನೆಟ್ಬಾಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿದೆ.
ಕೊಪ್ಪಳ ಬಳಿಯ ಕಿಡದಾಳದಲ್ಲಿರುವ ಶಾರದಾ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ತಂಡ 18–12ರಲ್ಲಿ ಕೊಡಗು ತಂಡದ ಎದುರು ಗೆಲುವು ಸಾಧಿಸಿದೆ.
ಪಂದ್ಯಾವಳಿಯಲ್ಲಿ ಎಂಟರ ಘಟ್ಟದ ಪಂದ್ಯಗಳಲ್ಲಿ ದಕ್ಷಿಣ ಕನ್ನಡ 21–13ರಿಂದ ಮಂಡ್ಯ ಮೇಲೂ, ಹಾಸನ 21–4ರಲ್ಲಿ ಚಿಕ್ಕೋಡಿ ವಿರುದ್ಧವೂ ಗೆಲುವು ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಉತ್ತರ–ಧಾರವಾಡ ತಂಡಗಳು ಶನಿವಾರ ಪೈಪೋಟಿ ನಡೆಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಬೆಂಗಳೂರು ಉತ್ತರ 26–12ರಲ್ಲಿ ಶಿವಮೊಗ್ಗ ಮೇಲೂ, ದಕ್ಷಿಣ ಕನ್ನಡ 21–7ರಲ್ಲಿ ಬಾಗಲಕೋಟೆ ವಿರುದ್ಧವೂ, ಮಂಡ್ಯ ತಂಡ 35–5ರಲ್ಲಿ ದಾವಣಗೆರೆ ಮೇಲೂ ಮತ್ತು ಹಾಸನ ತಂಡ 30–9ರಲ್ಲಿ ಬೆಂಗಳೂರು ದಕ್ಷಿಣ ತಂಡಗಳನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡವು. ಎರಡು ದಿನಗಳ ಟೂರ್ನಿಯಲ್ಲಿ ಬಾಲಕರ 23 ಮತ್ತು ಬಾಲಕಿಯರ 19 ತಂಡಗಳು ಪಾಲ್ಗೊಂಡಿವೆ ಎಂದು ಸಂಘಟಕರು ತಿಳಿಸಿದ್ದಾರೆ.
